ಬುಧವಾರ, ಫೆಬ್ರವರಿ 26, 2020
19 °C
ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ ಮಡಿಕೇರಿ ಶಾಸಕ

ಸಂಪುಟ ವಿಸ್ತರಣೆಯಲ್ಲಿ ಹಿರಿತನಕ್ಕೆ ಗೌರವ ಸಿಕ್ಕಿಲ್ಲ: ಅಪ್ಪಚ್ಚು ರಂಜನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಯ ಶಾಸಕರನ್ನು ಕಡೆಗಣಿಸಲಾಗಿದೆ. ನಾನು ಐದು ಬಾರಿ ಗೆದ್ದು ಶಾಸಕನಾಗಿದ್ದರೂ ಹಿರಿತನಕ್ಕೆ ಗೌರವ ನೀಡಿಲ್ಲ’ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಪಕ್ಷದ ವರಿಷ್ಠರ ವಿರುದ್ಧ ಶುಕ್ರವಾರ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

‘ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಶಾಸಕರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಪುಟದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಹಿರಿಯ ಶಾಸಕರನ್ನು ಪಕ್ಷದ ಮುಖಂಡರೇ ಕಡೆಗಣಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊಡಗಿನ ಜನರು ಶಾಂತಿ ಪ್ರಿಯರು. ಅವರಿಗೆ ಅನ್ಯಾಯವಾಗುವುದು ಬೇಡ. ಜಿಲ್ಲೆಯ ಜನರು ಬೀದಿಗೆ ಇಳಿದು ಹೋರಾಟ ನಡೆಸಲು ಮುಂದಾಗಿದ್ದರು. ನಾನೇ ಬೇಡವೆಂದು ಮನವಿ ಮಾಡಿಕೊಂಡಿರುವೆ’ ಎಂದರು.

‘ಅನ್ಯ ಪಕ್ಷದಿಂದ ಹತ್ತು ಮಂದಿ ಬಂದಿರುವುದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದರಲ್ಲಿ ಮರು ಮಾತಿಲ್ಲ. ಆದರೆ, ಈ ಬಾರಿಯ ವಿಸ್ತರಣೆಯಲ್ಲಿ ಹಿರಿಯರನ್ನು ಪರಿಗಣಿಸಬೇಕಿತ್ತು. ಜಿಲ್ಲಾವಾರು ಆದ್ಯತೆ ನೀಡಬೇಕಿತ್ತು. ಮುಂದಿನ ವಿಸ್ತರಣೆಯಲ್ಲಿ ತಪ್ಪು ಸರಿಪಡಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಉಳಿದವರು ಮುಂದಿನ ನಿರ್ಧಾರದ ಕುರಿತು ಚಿಂತಿಸಬೇಕಾದೀತು’ ಎಂದು ಎಚ್ಚರಿಸಿದರು. 

‘ಬಿಜೆಪಿಯ ತತ್ವ, ಸಿದ್ಧಾಂತ ಉಳಿಯಬೇಕು. ಮುಂದೆಯೂ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಬೇಕು. ಹೀಗಾಗಿ, ಮೂಲ ಬಿಜೆಪಿ ಶಾಸಕರಿಗೂ ಸಂಪುಟದಲ್ಲಿ ಆದ್ಯತೆ ನೀಡಬೇಕು’ ಎಂದು ರಂಜನ್ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು