ಬುಧವಾರ, ಆಗಸ್ಟ್ 17, 2022
28 °C
ಮಡಿಕೇರಿ: ಅರೆಭಾಷೆ ದಿನಾಚರಣೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಬಾರಿಯಂಡ ಜೋಯಪ್ಪ ಕರೆ

‘ಕೀಳರಿಮೆ ಬಿಡಿ; ಅರೆಭಾಷೆ ಉಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಸಣ್ಣ ಸಣ್ಣ ಸಮೂಹ ಭಾಷೆಗಳು ನಾಶವಾದರೆ ಸಂಸ್ಕೃತಿ ನಾಶವಾಗುತ್ತದೆ’ ಎಂದು ವಿಶ್ರಾಂತ ಪ್ರಾಂಶುಪಾಲ ಬಾರಿಯಂಡ ಜೋಯಪ್ಪ ಎಚ್ಚರಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ನಡೆದ ‘ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕೂಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಅವರ ಮಾತೃ ಭಾಷೆಯಲ್ಲೇ ಮಾತನಾಡಬೇಕು. ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದವರು ಮಾತೃ ಭಾಷೆಯಾದ ಅರೆಭಾಷೆಯನ್ನು ಉಳಿಸಬೇಕು ಎಂದು ನುಡಿದರು.

ಮಾತೃ ಭಾಷೆಯಲ್ಲಿ ಮಾತನಾಡಿದಾಗ ತಿರುಗಿ ನೋಡುವಂತಾಗುತ್ತದೆ. ಮಾತೃಭಾಷೆ ಬಗ್ಗೆ ಕೀಳರಿಮೆ ಬೇಡ. ಅರೆಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ ಡಿ.11 ಅರೆಭಾಷೆ ಅಕಾಡೆಮಿ ಸ್ಥಾಪಿಸಿದ್ದ ದಿನವಾಗಿದ್ದು, ಆ ದಿಸೆಯಲ್ಲಿ ಅರೆಭಾಷೆ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಕಾಡೆಮಿ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ ಎಂದರು.

ದಕ್ಷಿಣ ಕನ್ನಡದಲ್ಲಿ ತುಳು ಭಾಷೆಗೆ ತನ್ನದೇ ಆದ ಸ್ಥಾನವಿದೆ. ತುಳು ಭಾಷೆಯಲ್ಲಿ ಪಠ್ಯ ಪುಸ್ತಕವು ಬಂದಿದೆ. ಕಳೆದ 25-30 ವರ್ಷಗಳಲ್ಲಿ ಗಮನಾರ್ಹ ಸ್ಥಾನವನ್ನು ತುಳು ಭಾಷೆ ಪಡೆದುಕೊಂಡಿದೆ. ಅದೇ ರೀತಿ ಅರೆಭಾಷೆಯನ್ನು ಸಹ ಯಕ್ಷಗಾನ, ಕಥೆ, ನಾಟಕ ಕಾದಂಬರಿ, ಪ್ರಬಂಧ ಮೂಲಕ ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ಜೊತೆಗೆ ಐಎಸ್‍ಒ ಮಾನ್ಯತೆ ಪಡೆಯಲು ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಸೃಜನಶೀಲ ಚಟುವಟಿಕೆ ಕೈಗೊಳ್ಳಬೇಕಿದೆ ಎಂದು ನುಡಿದರು.

ಅರೆಭಾಷೆ ದಿನಾಚರಣೆಯು ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು ಸೇರಿದಂತೆ ಇತರೆ ಕಡೆಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಅರೆಭಾಷೆ ದಿನಾಚರಣೆಯನ್ನು ಚರಿತ್ರೆಯಲ್ಲಿ ದಾಖಲು ಮಾಡಬೇಕು. ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ವತಿಯಿಂದ ಜಿಲ್ಲೆಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ರಾಧ ಯಾದವ ಮಾತನಾಡಿ, ಅರೆಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ತಾಳಮದ್ದಳೆ, ಯಕ್ಷಗಾನವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಮಕ್ಕಳು ಓದಿನ ಜೊತೆಗೆ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ ಮಾದಪ್ಪ ಮಾತನಾಡಿದರು. ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಧನಂಜಯ ಅಗೋಳಿಕಜೆ, ದಂಬೆಕೋಡಿ ಎಸ್.ಆನಂದ್, ಡಾ.ಕೆ.ಸಿ.ದಯಾನಂದ, ಎ.ಟಿ.ಕುಸಮಾಧರ, ಪುರುಷೋತ್ತಮ ಕಿರ್ಲಾಯ ಹಾಜರಿದ್ದರು.

ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು. ಬೈತಡ್ಕ ಜಾನಕಿ ಪ್ರಾರ್ಥಿಸಿದರು. ಸದಸ್ಯರಾದ ಧನಂಜಯ ಅಗೋಳಿಕಜೆ ನಿರೂಪಿಸಿದರು. ಕೆ.ಸಿ.ದಯಾನಂದ ವಂದಿಸಿದರು.

ಅರೆಭಾಷೆ ದಿನಾಚರಣೆ ಪ್ರಯುಕ್ತ ಅರೆಭಾಷೆ ಯಕ್ಷಗಾನ ತಾಳಮದ್ದಳೆ ‘ಪಂಚವಟಿ ಪ್ರಸಂಗ’ ಗಮನ ಸೆಳೆಯಿತು. ಸುಬ್ರಾಯ ಸಂಪಾಜೆ, ಭವ್ಯಶ್ರೀ ಕುಲ್ಕುಂದ (ಭಾಗವತರು), ಚಂದ್ರಶೇಖರ ಗುರುವಾಯನಕೆರೆ (ಚೆಂಡೆ), ಅಕ್ಷಯರಾವ್ ವಿಟ್ಲ (ಮದ್ದಳೆ), ಮುರಾರಿ ಭಟ್ ಪಂಜಿಗದ್ದೆ (ಚಕ್ರತಾಳ) ಇವರು ಹಿಮ್ಮೇಳ ನಡೆಸಿಕೊಟ್ಟರು. ಜಯಾನಂದ ಸಂಪಾಜೆ (ಶ್ರೀರಾಮ), ಕೊಳ್ತಿಗೆ ನಾರಾಯಣಗೌಡ (ಲಕ್ಷ್ಮಣ), ರವಿಚಂದ್ರ ಚೆಂಬು (ಸೀತೆ), ಕುಸುಮಾಧರ ಎ.ಟಿ. (ಋಷಿಗ), ಜಬ್ಬಾರ್ ಸಮೊ ಸಂಪಾಜೆ (ಸೂರ್ಪನಖಿ) ಅವರು ಅರ್ಥಗಾರಿಕೆ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು