ಮಡಿಕೇರಿ: ಇಂದು ಕೃತಕ ಬುದ್ಧಿಮತ್ತೆ ಮಾಧ್ಯಮ ಕ್ಷೇತ್ರವನ್ನೂ ಪ್ರವೇಶಿಸಿದ್ದು, ಇದರಿಂದ ಅನೇಕ ಅನುಕೂಲಗಳು ಇದ್ದಾಗ್ಯೂ ಉದ್ಯೋಗಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹಾಗಾಗಿ, ಈ ಬಗ್ಗೆ ಅವಲೋಕನಗಳು ನಡೆಯಬೇಕಿದೆ ಎಂದು ಹಿರಿಯ ಪತ್ರಿಕೋದ್ಯಮಿ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಡಗು ವಿಶ್ವವಿದ್ಯಾನಿಲಯ ಹಾಗೂ ಸ್ಥಳೀಯ ಪತ್ರಿಕಾ ಸಂಘಟನೆಗಳ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ‘ಪತ್ರಿಕಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಸುದ್ದಿ ಸಂಪಾದನೆ, ವಿಶ್ಲೇಷಣೆ, ವಿಮರ್ಶೆ ಹೀಗೆ ವಿವಿಧ ರೀತಿಯಲ್ಲಿ ಅವಲೋಕನ ಮಾಡುವಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉಪಯುಕ್ತವಾಗಿದ್ದರೂ, ಉದ್ಯೋಗಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದರು.
ಒತ್ತಡದ ಬದುಕಿನಿಂದ ಭಾಷಾ ಪ್ರಯೋಗಗಳು ಬದಲಾಗುತ್ತಿವೆ. ಆದ್ದರಿಂದ ಎಚ್ಚರ ವಹಿಸಿ ಕಾರ್ಯ ನಿರ್ವಹಿಸಬೇಕಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರೂ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬದ್ಧತೆಯನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಈ ಕಾರ್ಯಕ್ರಮವನ್ನು ಸರ್ಕಾರ ಸುತ್ತೋಲೆಯ ಪ್ರಕಾರ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಪತ್ರಿಕಾ ಸಂಘಟನೆಗಳಿಗೆ ಆಹ್ವಾನ ನೀಡಲಾಗಿದೆ’ ಎಂದು ಹೇಳಿದರು.
ಮುಂಗಾರು ಸಂದರ್ಭದಲ್ಲಿ ಜನ ಜಾನುವಾರು ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಹಾಗೆಯೇ ಆಸ್ತಿ ಪಾಸ್ತಿ ರಕ್ಷಣೆಗೆ ಹೆಚ್ಚಿನ ಜಾಗೃತಿ ವಹಿಸಲಾಯಿತು.
ಕೊಡಗು ಪತ್ರಿಕಾ ಭವನ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಪತ್ರಕರ್ತರೆಲ್ಲರೂ ಸೋದರರು. ಸೋದರ ಮನೋಭಾವದಿಂದ ಕೆಲಸ ಮಾಡಬೇಕು’ ಎಂದು ಪ್ರತಿಪಾದಿಸಿದರು.
ಪತ್ರಕರ್ತರು ಯಾವಾಗಲೂ ಸಮಾಜ ಕಟ್ಟುವ ನೆಲೆಯ ಪತ್ರಕರ್ತರಾಗಬೇಕೇ ಹೊರತು ವೈಯಕ್ತಿಕ ನೆಲೆಯ ವಿಚಾರಗಳನ್ನೇ ಪ್ರಧಾನವಾಗಿಟ್ಟುಕೊಂಡ ಪತ್ರಕರ್ತರಾಗಬಾರದು ಎಂದು ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೋರನ ಸರಸ್ವತಿ ಮಾತನಾಡಿ, ‘ಪ್ರಜೆಗಳು ಮತ್ತು ಪ್ರಭುಗಳ ನಡುವೆ ಸಮನ್ವಯತೆ ಕಾಯುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ’ ಎಂದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಗ್ರೀಷ್ಮಾ (ಪ್ರಥಮ), ಭವಿತಾ (ದ್ವಿತೀಯ) ಕಿಶನ್‌ಕುಮಾರ್ (ತೃತೀಯ) ಅವರಿಗೆ ನಗದು ಬಹುಮಾನ ವಿತರಿಸಲಾಯಿತು.
ಎಫ್‍ಎಂಸಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ರೇವತಿ ರಮೇಶ್, ಕಡ್ಲೇರ ತುಳಸಿ ಮೋಹನ್, ಚೊಕ್ಕಾಡಿ ಪ್ರೇಮ ರಾಘವಯ್ಯ, ವೀಣಾಕ್ಷಿ ನಾಡಗೀತೆ ಹಾಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚಿ.ನಾ.ಸೋಮೇಶ್, ವಾರ್ತಾಧಿಕಾರಿ ಚಿನ್ನಸ್ವಾಮಿ, ವಿನೋದ್ ಮೂಡಗದ್ದೆ, ಪತ್ರಕರ್ತ ಎಚ್.ಟಿ.ಅನಿಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.