ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಕೆಲ ದಿನದಲ್ಲೇ ಕಿತ್ತು ಬಂದಿದೆ ಡಾಂಬರು!

₹ 23.77 ಕೋಟಿ ವೆಚ್ಚದ ಕಾಮಗಾರಿ, ಸಾರ್ವಜನಿಕರ ಆಕ್ರೋಶ
Last Updated 20 ಏಪ್ರಿಲ್ 2023, 5:06 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊಡ್ಲಿಪೇಟೆ ಯಿಂದ ಮಡಿಕೇರಿಯವರೆಗಿನ ರಾಜ್ಯ ಹೆದ್ದಾರಿಗೆ ಮರು ಡಾಂಬರೀಕರಣಕ್ಕೆ ಸರ್ಕಾರ ₹ 23.77 ಕೋಟಿ ವ್ಯಯ ಮಾಡಿದರೂ, ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತು ಬರುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಕೊಡ್ಲಿಪೇಟೆಯಿಂದ ಮಡಿಕೇರಿಗೆ ಗುಂಡಿ ಬಿದ್ದ ರಸ್ತೆಯಲ್ಲಿ ಶಪಿಸುತ್ತಾ ವಾಹನ ಸವಾರರು ಸಂಚರಿಸುತ್ತಿದ್ದರು. ಚುನಾವಣೆ ಘೋಷಣೆ ಸಮಯದಲ್ಲಿ ನೂತನವಾಗಿ ರಾಜ್ಯ ಹೆದ್ದಾರಿಗೆ ಡಾಂಬರು ಹಾಕಿದ್ದರಿಂದ ನಿಟ್ಟಿಸಿರು ಬಿಟ್ಟಿದ್ದರು. ಆದರೆ, ನಾಲ್ಕಾರು ದಿನಗಳಲ್ಲಿ ಡಾಂಬರು ಮಾಯವಾಗುತ್ತಿದೆ.

ಮಳೆಗೂ ಮುನ್ನವೇ ಹಲವೆಡೆ ರಸ್ತೆ ಕಿತ್ತು ಬರುತ್ತಿರುವುದನ್ನು ಕಂಡರೆ ಮಳೆ ಬಂದ ನಂತರ ರಸ್ತೆ ತೀರಾ ಹದಗೆಡಲಿದೆ. ಮತ್ತೆ ಮರಳಿ ಹಿಂದಿನ ಗುಂಡಿಮಯ ಸ್ಥಿತಿಗೆ ರಸ್ತೆ ಬರುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ನೂತನವಾಗಿ ಡಾಂಬರು ಹಾಕುವ ಮುನ್ನ, ರಸ್ತೆಯ ಮೇಲಿನ ದೂಳನ್ನು ತೆಗೆದು, ಅದಕ್ಕೆ ಕೆಮಿಕಲ್ ಸ್ಪ್ರೇ ಮಾಡಿದ ನಂತರ ಚೆನ್ನಾಗಿ ಡಾಂಬರ್ ಮತ್ತು ಜಲ್ಲಿ ಮಿಕ್ಸ್ ಮಾಡಿ ರಸ್ತೆಗೆ ಹಾಕಿ ರೋಲರ್‌ ಹಾಕಬೇಕು. ಇಲ್ಲಿ ಅದಾವುದು ನಿಗದಿತವಾಗಿ ಹಾಗದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಸ್ತೆ ಕಾಮಗಾರಿ ಮಾಡಿದ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ರಸ್ತೆಗೆ ಹಾಕಿದ ಡಾಂಬರು ರಸ್ತೆ ಬದಿಗೆ ಜಾರುತ್ತಿದೆ. ಕೆಲವು ಕಡೆಗಳಲ್ಲಿ ಗುಂಡಿ ಬೀಳುತ್ತಿದೆ. ಚುನಾವಣೆ ಕಳೆದ ಒಂದೆರಡು ತಿಂಗಳಿನಲ್ಲಿಯೇ ರಸ್ತೆ ಹಾಳಾಗಬಹುದು ಎಂದು ಜನಸಾಮಾನ್ಯರು ದೂರುತ್ತಿದ್ದಾರೆ.

‘ಇತ್ತೀಚೆಗೆ ಮೂಲ ಗುತ್ತಿಗೆ ಪಡೆದ ಗುತ್ತಿಗೆದಾರರು ಅದನ್ನು ಮತ್ತೊಬ್ಬ ಗುತ್ತಿಗೆದಾರರಿಗೆ ನೀಡಿ ಮಾಡಿಸುವುದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿರುವುದು ನಮ್ಮ ದುರಂತ’ ಎಂದು ರೈತ ಸಂಘದ ಗರಗಂದೂರು ಗ್ರಾಮದ ಲಕ್ಷಣ ದೂರಿದರು.

ರಸ್ತೆ ಮಾಡುವಾಗ ಗುಣಮಟ್ಟದ ಪರಿಕರ ಗಳನ್ನು ಬಳಸದಿರುವು ದರಿಂದ ಡಾಂಬರು ಕಿತ್ತು ಬರುತ್ತಿದೆ. ಶೇ 5ರಷ್ಟು ಡಾಂಬರನ್ನು ಹಾಕಬೇಕು. ಆದರೆ, ಮಿಕ್ಸ್ ಮಾಡುವ ಸಂದರ್ಭ ಶೇ 3.5ರಿಂದ 4ರಷ್ಟು ಮಾತ್ರ ಡಾಂಬರನ್ನು ಹಾಕಲಾಗುತ್ತಿದೆ. ಜನರು ಕಾಮಗಾರಿಯ ಬಗ್ಗೆ ಪ್ರಶ್ನೆ ಮಾಡದ ಹೊರತು ಯಾವುದೇ ಕಾಮಗಾರಿಗಳು ಸರಿಯಾಗುವುದಿಲ್ಲ. ಈಗ ಮಾಡಿರುವ ರಸ್ತೆಗಳು ಎಷ್ಟು ದಿನ ಉಳಿಯುತ್ತದೋ, ಅಲ್ಲಿಯವರೆಗೆ ಬಳಸಿಕೊಳ್ಳಬಹುದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಪಿ.ಅನಿಲ್ ಹೇಳಿದರು.

‘ಯಾವುದೇ ಕಾಮಗಾರಿ ಗಳು ಗುಣಮಟ್ಟದಲ್ಲಿ ಮಾಡುತ್ತಿಲ್ಲ. ಇದಕ್ಕೆ ಸಂಬಂ ಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರಿಂದಲೇ ನಷ್ಟ ಭರಿಸುವ ತನಕ ಸಾರ್ವಜನಿಕರ ಹಣ ವ್ಯರ್ಥವಾಗುವುದು ತಪ್ಪುವುದಿಲ್ಲ. ಕೂಡಲೇ ಇದಕ್ಕೆ ಒಂದು ರೂಪ ಕೊಟ್ಟು, ಸಾರ್ವಜನಿಕರ ಹಣ ಹಾಳಾಗುವುದನ್ನು ತಪ್ಪಿಸಬೇಕು’ ಎಂದು ಚಾಲಕ ಮಧು ಒತ್ತಾಯಿಸಿದರು.

‘ಈ ರಸ್ತೆಯನ್ನು ₹ 11 ಕೋಟಿ ವೆಚ್ಚದಲ್ಲಿ ಕಾಗಡಿಕಟ್ಟೆಯಿಂದ ಐಗೂರಿ ನವರೆಗೆ ಮಾಡಲಾಗಿತ್ತು. ನಂತರ, ₹ 3.75 ಕೋಟಿಯಂತೆ ಮೂರು ಪ್ಯಾಕೇಜ್‌ನಲ್ಲಿ ರಸ್ತೆ ಮಾಡಿದ್ದು, ಒಟ್ಟು ₹ 23.77 ಕೋಟಿ ವೆಚ್ಚದಲ್ಲಿ ಮಾಡ ಲಾಗಿದೆ. ರಸ್ತೆಯನ್ನು ಗುತ್ತಿಗೆ ದಾರರು ಎರಡು ವರ್ಷ ನಿರ್ವಹಣೆ ಮಾಡಬೇಕು. ಕೆಲವು ಕಡೆಗಳಲ್ಲಿ ಸರಿಯಾಗಿ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ರಸ್ತೆ ಕಿತ್ತು ಬಂದಿದ್ದು, ಸರಿಪಡಿಸಲಾಗುತ್ತಿದೆ’ ಎಂದು ಲೋಕೋಪ ಯೋಗಿ ಇಲಾಖೆಯ ಪ್ರಭಾರ ಎಇಇ ವೆಂಕಟೇಶ್ ನಾಯಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT