ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಜನರಿಂದ ಫಲಿತಾಂಶ ನಿರ್ಣಯ’

ಜಿಲ್ಲೆಯ ಯುವ ಜನರು ಬಿಜೆಪಿಗೆ ಹೆಚ್ಚಿನ ಬೆಂಬಲ; ಕೆ.ಜಿ.ಬೋಪಯ್ಯ
Last Updated 14 ಮಾರ್ಚ್ 2023, 4:18 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊಡಗು ಜಿಲ್ಲೆಯ ಹೆಚ್ಚಿನ ಯುವ ಜನರು ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಮುಂದಿನ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಯುವಶಕ್ತಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೀಗ ಭಾರತವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿಸುವ ಸಂಕಲ್ಪ ತೊಟ್ಟು ಅದಕ್ಕಾಗಿ ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆ. ಶಾಸಕ ಅಪ್ಪಚ್ಚುರಂಜನ್ ಅವರು ಅನೇಕ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಸರ್ಕಾರದಿಂದ ಅಗತ್ಯ ಅನುದಾನ ತರುವಲ್ಲಿ ಸಫಲರಾಗಿದ್ದು, ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸುತ್ತದೆ’ ಎಂದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ‘ಇಲ್ಲಿಯವರೆಗೆ ಜಿಲ್ಲೆಗೆ ಯಾವುದೇ ಸರ್ಕಾರಗಳು ನೀಡದಂತಹ ಅನೇಕ ಕೊಡುಗೆಗಳನ್ನು ಬಿಜೆಪಿ ನೀಡಿದೆ. ಕಾಂಗ್ರೆಸ್ ಸರ್ಕಾರ ಕೇವಲ ವೋಟ್ ಬ್ಯಾಂಕಿಗಾಗಿ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಬಳಸಿಕೊಳ್ಳುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂಥ ಸಮುದಾಯಗಳ ಸಮಸ್ಯೆ ಗಮನಿಸಿ ಸಂಕಷ್ಟ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಮುಂದಾಗಿದ್ದು, ಸಾಕಷ್ಟು ಕೊಡುಗೆಗಳನ್ನು ನೀಡಿದೆ’ ಎಂದು ಹೇಳಿದರು.

‘ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಚಿಕ್ಕ ಆಳುವಾರದಲ್ಲಿ ವಿಶ್ವವಿದ್ಯಾಲಯ ಮಾಡಿದ್ದೇವೆ. ಕುಶಾಲನಗರದಲ್ಲಿ ಎಂಜಿನಿಯರಿಂಗ್ ಕಾಲೇಜು, ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು, ಕೂಡಿಗೆಯಲ್ಲಿ ಸೈನಿಕ ಶಾಲೆ ಇವೆಲ್ಲ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ಇದೆಲ್ಲ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಅಲ್ಲವೇ’ ಎಂದು ಪ್ರಶ್ನಿಸಿದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಮಾತನಾಡಿ, ‘ದೇಶದಲ್ಲಿ ಕೋವಿಡ್ ಸಂಕಷ್ಟದ ದಿನಗಳಲ್ಲಿ ಅತ್ಯಂತ ಸಕ್ರಿಯವಾಗಿ ಜನರ ನೆರವಿಗೆ ಧಾವಿಸಿದ ಕೀರ್ತಿ ಬಿಜೆಪಿ ಯುವ ಮೋರ್ಚಾದ್ದಾಗಿದೆ. ಯುವ ಪೀಳಿಗೆಯ ಮೇಲೆ ಭಾರತದ ಏಕತೆಯ ನಿಟ್ಟಿನಲ್ಲಿ ಬಹಳ ದೊಡ್ಡ ಜವಾಬ್ದಾರಿ ಇದೆ. ದೇಶದಲ್ಲಿ ಆರೋಗ್ಯ, ಶಿಕ್ಷಣ, ರಸ್ತೆ, ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಬಿಜೆಪಿ ನೀಡಿದಷ್ಟು ಯೋಜನೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ’ ಎಂದು ಹೇಳಿದರು.

ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ ಜೋಯಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮುಖಂಡರಾದ ಎಸ್.ಜಿ.ಮೇದಪ್ಪ, ವಿ.ಕೆ.ಲೋಕೇಶ್, ಭಾರತೀಶ್ ಇದ್ದರು. ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಬೈಕ್ ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT