ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಸಂಜೆಯಲ್ಲಿ ತೆರೆದುಕೊಂಡ ‘ಅವ್ವ’ನ ನೆನಪುಗಳು...!

ಲೇಖಕಿ ಕೂತಂಡ ಪಾರ್ವತಿ ಪೂವಯ್ಯ ಅವರನ್ನು ಕುರಿತ ‘ಅವ್ವ’ ಕೃತಿ ಲೋಕಾರ್ಪಣೆ
Published 7 ಏಪ್ರಿಲ್ 2024, 4:50 IST
Last Updated 7 ಏಪ್ರಿಲ್ 2024, 4:50 IST
ಅಕ್ಷರ ಗಾತ್ರ

ಮಡಿಕೇರಿ: ಮುಸ್ಸಂಜೆಯಲ್ಲಿ ಪಡುವಣ ದಿಕ್ಕಿನಲ್ಲಿ ಸೂರ್ಯ ಮುಳುಗಿ ಹೊಂಬಣ್ಣ ಮೂಡುತ್ತಿದ್ದಂತೆ ಸಾಹಿತ್ಯಾಸಕ್ತರು ಒಂದೆಡೆ ಸೇರಿದರು. ತಂಪಾಗುತ್ತಿದ್ದ ವಾತಾವರಣದಲ್ಲಿ ವೇದಿಕೆಯಲ್ಲಿ ಪುಸ್ತಕವೊಂದು ಅನಾವರಣಗೊಳ್ಳುತ್ತಿದ್ದಂತೆ ಸಭಿಕರ ಕರತಾಡನ ಮೊಳಗಿತು. ತಿಳಿ ಹಾಸ್ಯಲೇಪಿತವಾದ ಗಣ್ಯರ ಭಾಷಣವು ಸಭಿಕರನ್ನು ಕುರ್ಚಿಯಲ್ಲೆ ಕಟ್ಟಿ ಹಾಕುವಂತೆ ಸಫಲವಾಯಿತು.

ಈ ದೃಶ್ಯಗಳು ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಮುಸ್ಸಂಜೆಯಲ್ಲಿ ನಡೆದ ‘ಅವ್ವ’ ಎಂಬ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಕಂಡು ಬಂತು.

ಪುಸ್ತಕದ ಲೇಖಕಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ನಯನಾ ಕಶ್ಯಪ್ ಮಾತನಾಡಿ, ‘ಈ ಪುಸ್ತಕವು ಕೊಡಗಿನ ಮಹಿಳಾ ಲೇಖಕಿಯರಲ್ಲಿ ಆದ್ಯ ಪ್ರವರ್ತಕರಲ್ಲೊಬ್ಬರಾದ ಕೂತಂಡ ಪಾರ್ವತಿ ಪೂವಯ್ಯನವರ ಕುರಿತ ಕೃತಿಯಾಗಿದೆ. ಪಾರ್ವತಿ ಪೂವಯ್ಯ ಅವರ ಪುಸ್ತಕಕ್ಕೆ ಜಿ.ಪಿ.ರಾಜರತ್ನಂ ಮುನ್ನುಡಿ ಬರೆಯುತ್ತಾರೆ ಎಂದರೆ ಅವರ ಮಹತ್ವ ಅರಿವಾಗುತ್ತದೆ. ಅವರು ಸಂವೇದನಾಶೀಲ ಸಾಹಿತಿಯಾಗಿದ್ದರು’ ಎಂದು ತಿಳಿಸಿದರು.

ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮಾತನಾಡಿ, ‘ನಾನು ಈ ಪುಸ್ತಕವನ್ನು ಬಿಡುಗಡೆ ಮಾಡಿಲ್ಲ. ಬದಲಿಗೆ, ಲೋಕಾರ್ಪಣೆಗೊಳಿಸಿದ್ದೇನೆ’ ಎಂದರು.

ತಿಳಿ ಹಾಸ್ಯಲೇಪಿತವಾಗಿ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ಪಾರ್ವತಿ ಪೂವಯ್ಯ ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟರು. ‘ಕೇವಲ ಸಾಹಿತಿ ಮಾತ್ರವಲ್ಲ ಚಿತ್ರಕಲಾವಿದೆಯಾಗಿಯೂ ಪಾರ್ವತಿ ಅವರು ಸಾಧನೆ ಮಾಡಿದ್ದಾರೆ. ಅವರ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರದವರು ತಮ್ಮ ‘ಕನ್ನಡ ಕಟ್ಟಿದವರು ಮಾಲೆ’ ಸರಣಿಯಲ್ಲಿ ಪುಸ್ತಕ ಪ್ರಕಟಿಸಿದೆ’ ಎಂದು ಹೇಳಿದರು.

ಭಾರತೀಯ ವಿದ್ಯಾಭವನದ ಡಾ.ಮನೋಹರ್ ಪಾಟ್ಕರ್ ಮಾತನಾಡಿ, ‘ಅವ್ವ’ ಎಂಬುದು ಬಹಳ ಮಹತ್ವದ ಶಬ್ದ. ಚಿಕ್ಕದಾಗಿರುವ ಈ ಹೆಸರಿನ ಪುಸ್ತಕವೂ ಅಷ್ಟೇ ಮಹತ್ವದ್ದು’ ಎಂದರು.

ಭಾರತೀಯ ವಿದ್ಯಾ ಭವನದ ಕೆ.ಎಸ್.ದೇವಯ್ಯ, ಕೆ.ಪಿ.ಉತ್ತಪ್ಪ ಭಾಗವಹಿಸಿದ್ದರು.

ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಅವ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು
ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಅವ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT