ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ಬೊಟ್ಟಿಯತ್ ನಾಡ್ ಈಶ್ವರ ದೇವರ ವಾರ್ಷಿಕೋತ್ಸವಕ್ಕೆ ತೆರೆ

ದೇವರಿಗೆ ವಿವಿಧ ಪೂಜೆ: ಭಕ್ತಿಯಲ್ಲಿ ಮಿಂದೆದ್ದ ಜನತೆ
Published 8 ಮಾರ್ಚ್ 2024, 6:07 IST
Last Updated 8 ಮಾರ್ಚ್ 2024, 6:07 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಬೊಟ್ಟಿಯತ್ ನಾಡ್ ಈಶ್ವರ ದೇವರ ವಾರ್ಷಿಕೋತ್ಸವಕ್ಕೆ ವಿಜೃಂಭಣೆಯ ತೆರೆ ಬಿದ್ದಿತು.

ಕುಂದ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರುವತ್ತೊಕ್ಕಲು, ಈಚೂರು ಸೇರಿದಂತೆ ಸುತ್ತಮುತ್ತಲ ಈ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಎಂದು ಕರೆಯಲ್ಪಡುವ ಈಶ್ವರ ದೇವಸ್ಥಾನದಲ್ಲಿ ಫೆ. 26ರಂದು ಕೊಡಿಮರ ನಿಲ್ಲಿಸುವ ಮೂಲಕ 9ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ದೇವರ ಅವಭೃತ ಸ್ನಾನದ ಮೂಲಕ 9 ದಿನದ ಉತ್ಸವಕ್ಕೆ ಬುಧವಾರ ತೆರೆ ಎಳೆಯಲಾಯಿತು.

ಈಶ್ವರ ದೇವಸ್ಥಾನ ಸಮೀಪದ ಅಂಬಲದಲ್ಲಿ ಆರು ಊರುಗಳ ತಕ್ಕಮುಖ್ಯಸ್ಥರು ಸೇರಿದಂತೆ ಈಶ್ವರ ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ಎತ್ತು ಪೋರಾಟದ ಮೂಲಕ ದೇವಸ್ಥಾನಕ್ಕೆ ತಂದರು.

ಚೆಂಡೆ ಮದ್ದಳೆ ಹಾಗೂ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಎತ್ತು ಪೋರಾಟವನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದ ಮುಖ್ಯ ಅರ್ಚಕರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆರು ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸಲಾಯಿತು.

ನೆರ್ಪು ಪ್ರಯುಕ್ತ ವಿಶೇಷ ಪೂಜೆ ನಡೆದು ದೇವರ ಉತ್ಸವ ಮೂರ್ತಿಯನ್ನು ಹೊತ್ತು ವಿವಿಧ ಪೂಜಾ ವಿಧಾನಗಳೊಂದಿಗೆ ಚೆಂಡೆ ವಾದ್ಯಕ್ಕೆ ಹೆಜ್ಜೆ ಹಾಕಲಾಯಿತು.

ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜೆಗಳು ನಡೆದರೆ, ದೇವರ ಅವಭೃತ ಸ್ನಾನ (ದೇವಕುಳಿಪೊ) ಪ್ರಯುಕ್ತ ಈಶ್ವರ ದೇವರ ಆಭರಣಗಳನ್ನು ಚೆಂಡೆ ಮದ್ದಳೆಯೊಂದಿಗೆ ತಕ್ಕಮುಖ್ಯಸ್ಥರು ಕೊಂಡೊಯ್ದು ಹತ್ತಿರದಲ್ಲಿರುವ ದಬ್ಬೆಚಮ್ಮ ದೇವಸ್ಥಾನದಲ್ಲಿ ಪಾರ್ವತಿ ದೇವಿಗೆ ತೊಡಿಸಿ ಅಲಂಕಾರ ಮಾಡುವ ಮೂಲಕ ಸಾಂಪ್ರದಾಯಿಕ ಅವಭೃತ ಸ್ನಾನಕ್ಕೆ ಚಾಲನೆ ನೀಡಲಾಯಿತು.

ಕೊನೆಯ ದಿನ ದೇವರ ಅವಭೃತ ಸ್ನಾನಕ್ಕೆ ಉತ್ಸವ ಮೂತಿಯನ್ನು ಹೊತ್ತು ಹತ್ತಿರದ ದೇವರ ಕೆರೆಗೆ ತೆರಳಿ ಸ್ನಾನ ಮಾಡಿಸಲಾಯಿತು. ದೇವರ ಉತ್ಸವ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಚೆಂಡೆ ಮದ್ದಳೆ ಹಾಗೂ ಸಾಂಪ್ರದಾಯಿಕ ಕೊಡವ ವಾಲಗದೊಂದಿಗೆ ಹಾಗೂ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದಲ್ಲಿ 11 ಸುತ್ತು ಪ್ರದಕ್ಷಿಣೆ ಹಾಕಿ ಚಂಡೆಯ ನಾದಕ್ಕೆ ಉತ್ಸವ ಮೂರ್ತಿ ಹೊತ್ತವರು ಹೆಜ್ಜೆ ಹಾಕಿದ ಪರಿ ಮನಮೋಹಕವಾಗಿತ್ತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಮಹಾಪೂಜೆಯ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT