ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೊಂದವರ ಬಾಳಿನ ಆಶಾಕಿರಣ ಬ್ರಹ್ಮಶ್ರೀ ನಾರಾಯಣಗುರು: ಅಪ್ಪಚ್ಚುರಂಜನ್

9ನೇ ವರ್ಷದ ಆಟಿ ಸಂಭ್ರಮೋತ್ಸವದಲ್ಲಿ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಪಾದನೆ
Published 19 ಆಗಸ್ಟ್ 2024, 4:14 IST
Last Updated 19 ಆಗಸ್ಟ್ 2024, 4:14 IST
ಅಕ್ಷರ ಗಾತ್ರ

ಸೋಮವಾರಪೇಟೆ: ಬ್ರಹ್ಮಶ್ರೀ ನಾರಾಯಣಗುರು ಅವರು ಜಾತಿ, ಮತ ಬಿಟ್ಟು, ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವ ಕೆಲಸ ಮಾಡುವ ಮೂಲಕ ನೊಂದವರ ಬಾಳಿನ ಆಶಾಕಿರಣವಾಗಿ ಹೊರಹೊಮ್ಮಿದರು ಎಂದು ಬಿಜೆಪಿಯ ಹಿರಿಯ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ತಾಲ್ಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಮತ್ತು ತುಳುನಾಡು ಬಿಲ್ಲವ ಮಹಿಳಾ ಸಂಘದ ವತಿಯಿಂದ ಭಾನುವಾರ ಇಲ್ಲಿನ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ 9ನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯದವರೂ ತಮ್ಮ ಸಮಾಜದ ಕಲೆ, ಸಂಸ್ಕೃತಿ, ಆಚಾರ ವಿಚಾರ ಪದ್ಧತಿ ಪರಂಪರೆಗಳು ಉಳಿಸಿಕೊಳ್ಳಬೇಕಾದಲ್ಲಿ ಅದನ್ನು ನಾವು ಮುಂದುವರೆಸಿ ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ಆಗಬೇಕು ಎಂದು ಅವರು ಪ್ರತಿಪಾದಿಸಿದರು.

‘ಯಾವುದೇ ಜನಾಂಗದ ಹಬ್ಬ ಹರಿದಿನಗಳ ಆಚರಣೆಗಳು ಮಹತ್ವಪೂರ್ಣವಾದವು. ಇದನ್ನು ನಾವು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರವಾಗುವುದರೊಂದಿಗೆ ಕಲೆ, ಸಂಸ್ಕೃತಿ ಉಳಿಯಲು ಸಾಧ್ಯ’ ಎಂದರು.

ಹಿಂದೂ ಮಲಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ‘ಬ್ರಹ್ಮಶ್ರೀ ನಾರಾಯಣಗುರುಗಳು ಮತ ಯಾವುದಾದರೂ, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಾನವ ಕುಲವೆಲ್ಲ ಒಂದೇ ಎಂದು ಸಾಧಿಸಿ ತೋರಿಸಿದವರು. ಶಿಕ್ಷಣ ಪಡೆದು ಸ್ವತಂತ್ರರಾಗಿರಿ, ಸಂಘಟನೆಯಿಂದ ಪ್ರಗತಿ ಹೊಂದಿರಿ ಎಂದು ಅಂದಿನ ಕಾಲದಲ್ಲಿ ಗುರುಗಳು ಹೇಳಿದ ಮಾತು ಇಂದು ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅಸಮಾನತೆ, ಅಸ್ಪೃಶ್ಯತೆ, ಶೋಷಣೆಗಳಿಗೆ ಚಿಕಿತ್ಸಕರಾಗಿ ತನ್ನ ಬದುಕನ್ನೇ ಸಮರ್ಪಿಸಿದ ಸಂತ, ಸುಧಾರಕ ನಾರಾಯಣ ಗುರುಗಳ ಆದರ್ಶ, ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಚಂದ್ರಹಾಸ್ ಅಧ್ಯಕ್ಷತೆ ವಹಿಸಿದ್ದರು. ತುಳುನಾಡು ಸಿರಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಬೇಬಿ ಚಂದ್ರಹಾಸ್, ಉದ್ಯಮಿ ಬಿ.ಎಸ್.ಸುಂದರ್, ಬಿಲ್ಲವ ಸೇವಾ ಸಂಘದ ಮಡಿಕೇರಿ ಘಟಕದ ಅಧ್ಯಕ್ಷರಾದ ಲೀಲಾವತಿ, ವಿರಾಜಪೇಟೆ ಘಟಕದ ಗಣೇಶ್, ಕುಶಾಲನಗರ ಘಟಕದ ಸುಧೀರ್, ಸುಂಟಿಕೊಪ್ಪ ಹೋಬಳಿಯ ಮಣಿ ಮುಖೇಶ್, ಗೌರವ ಸಲಹೆಗಾರರಾದ ಬಿ.ಎ.ಭಾಸ್ಕರ್ ಭಾಗವಹಿಸಿದ್ದರು.

ಇದೇ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಭಾರತ ಕಿರಿಯರ ಹಾಕಿ ತಂಡದ ತರಬೇತುದಾರ ಸಿ.ಬಿ.ಜನಾರ್ಧನ್, ಬಿಲ್ಲವ ಜನಾಂಗದ ಕಲೆ, ಸಂಸ್ಕೃತಿ, ಇತಿಹಾಸ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿರುವ ಉಪನ್ಯಾಸಕಿ ಬಿ.ಎಲ್.ಹರ್ಷಿತಾ, ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿರುವ ಬಾಲಪ್ರತಿಭೆ ಬಿ.ಕೆ.ಹರ್ಷಲ್ ಅವರನ್ನು ಸನ್ಮಾನಿಸಲಾಯಿತು.

 ಸೋಮವಾರಪೇಟೆ ತಾಲ್ಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಮತ್ತು ತುಳುನಾಡು ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಭಾನುವಾರ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ 9ನೇ ವರ್ಷದ ಆಟಿ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
 ಸೋಮವಾರಪೇಟೆ ತಾಲ್ಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಮತ್ತು ತುಳುನಾಡು ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಭಾನುವಾರ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ 9ನೇ ವರ್ಷದ ಆಟಿ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಸಮುದಾಯದ ಎಲ್ಲಾ ವಿದ್ಯಾರ್ಥಿಗಳು, ಪುರುಷರು ಮತ್ತು ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾಸ್ಫರ್ಧೆಗಳು ಮತ್ತು ಸಾಂಸ್ಕೃತಿಕ ಸ್ಫರ್ಧೆಗಳ ಪೈಪೋಟಿಯನ್ನು ಏರ್ಪಡಿಸಲಾಗಿತ್ತು. ಅತೀ ಹೆಚ್ಚು ಅಂಕ ಪಡೆದ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು. ಸಮಾಜದ ಮತ್ತು ಪ್ರಧಾನ ಕಾರ್ಯದರ್ಶಿ ಇಂದಿರಾ ಮೋಣಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT