ಮಾರಾಟ ಮಾಡಿದ್ದ ಚಿನ್ನದಗಟ್ಟಿ ವಶಕ್ಕೆ!
ಡಕಾಯಿತಿಗೆ ಒಳಗಾದ ಕೇರಳದ ಕೆ.ಶಂಜಾದ್ ಅವರು ಮಾರಾಟ ಮಾಡಿದ್ದ ಚಿನ್ನದಗಟ್ಟಿಯನ್ನು ಕೊಡಗು ಜಿಲ್ಲಾ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ‘ಮೈಸೂರಿನ ಅಶೋಕರಸ್ತೆಯ ವ್ಯಾಪಾರಿಯೊಬ್ಬರಿಗೆ ಚಿನ್ನದಗಟ್ಟಿಯನ್ನು ಮಾರಾಟ ಮಾಡಿ ₹ 50 ಲಕ್ಷ ಹಣ ಪಡೆದಿದ್ದೆ. ಈ ಹಣವನ್ನು 10ರಿಂದ 15 ಮಂದಿಯ ತಂಡ ಡಕಾಯಿತಿ ನಡೆಸಿ ದೋಚಿತು’ ಎಂದು ಶಂಜಾದ್ ದೂರು ನೀಡಿದ್ದರು. ಇದರ ಸತ್ಯಾಸತ್ಯತೆಯನ್ನು ತಿಳಿಯಲು ಅಶೋಕರಸ್ತೆಯ ವ್ಯಾಪಾರಿ ಬಳಿ ತೆರಳಿದಾಗ ಅವರು ಚಿನ್ನದಗಟ್ಟಿ ಖರೀದಿಸಿದ್ದು ನಿಜ ಎಂದು ಒಪ್ಪಿಕೊಂಡರು. ಆದರೆ ವಹಿವಾಟಿಗೆ ಯಾವುದೇ ತೆರಿಗೆ ಪಾವತಿಯ ರಸೀತಿಗಳು ಇಲ್ಲದ ಕಾರಣ ಚಿನ್ನದಗಟ್ಟಿಯನ್ನು ವಶಕ್ಕೆ ಪಡೆಯಲಾಯಿತು’ ಎಂದು ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸರೊಬ್ಬರು ಮಾಹಿತಿ ನೀಡಿದರು. ಮತ್ತೊಂದು ಪೊಲೀಸ್ ತಂಡವು ಕೇರಳಕ್ಕೆ ತೆರಳಿ ತನಿಖೆ ಕೈಗೊಂಡಿದೆ.