ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಸಿಗಳನ್ನು ದತ್ತು ಪಡೆದ ಮಕ್ಕಳು!

ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಬಗೆಯಲ್ಲಿ ಪರಿಸರ ದಿನಾಚರಣೆ
Published 8 ಜೂನ್ 2024, 7:25 IST
Last Updated 8 ಜೂನ್ 2024, 7:25 IST
ಅಕ್ಷರ ಗಾತ್ರ

ಮಡಿಕೇರಿ: ಮಕ್ಕಳೇ ಗಿಡಗಳನ್ನು ಮಕ್ಕಳಂತೆ ಸಲಹುವ ಅಪರೂಪದ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶುಕ್ರವಾರ ಸಾಕ್ಷಿಯಾಯಿತು.

ಇಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆಯು ಕೇವಲ ಭಾಷಣ, ಗಿಡ ನೆಡುವ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಲಿಲ್ಲ. ಇದಕ್ಕೆ ಬದಲಾಗಿ, ಮಕ್ಕಳಿಗೆ ಗಿಡ ನೀಡಿ ಅದನ್ನು ಅವರಿಗೆ ದತ್ತು ನೀಡುವ ವಿನೂತನ ಕಾರ್ಯಕ್ರಮಕ್ಕೂ ಇದು ವೇದಿಕೆಯಾಯಿತು.

ಗೋ ಗ್ರೀನ್ ಅಂಡ್ ಕ್ಲೀನ್‌ ಸ್ವಚ್ಛ, ಸುರಕ್ಷಾ, ಸಮೃದ್ಧ ಕೊಡಗು ಸಂಸ್ಥೆ ಹಾಗೂ ಶಾಲೆಯ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಮಕ್ಕಳಿಗೂ ಒಂದೊಂದು ಗಿಡ ನೀಡಿ, ಅದರ ಪೋಷಣೆಯ ಜವಾಬ್ದಾರಿ ವಹಿಸಲಾಯಿತು.

ಮಕ್ಕಳೇ ಆ ಗಿಡಗಳನ್ನು ನೆಡಬೇಕು, ಆ ಗಿಡದ ಹೆಸರನ್ನು ಅವರೇ ಬರೆದು ಫಲಕ ಹಾಕಬೇಕು, ನಿತ್ಯವೂ ಅದಕ್ಕೆ ನೀರುಡಿಸಿ, ಮಕ್ಕಳಂತೆ ಸಲಹಬೇಕು ಎಂದು ತಿಳಿ ಹೇಳಲಾಯಿತು.

ಮಕ್ಕಳೊಂದಿಗೆ ಬಂದಿದ್ದ ಪೋಷಕರಿಗೂ ಗಿಡಗಳನ್ನು ನೀಡಿ, ತಮ್ಮ ಮನೆಯ ಆವರಣದಲ್ಲಿ ನೆಡುವಂತೆ ಸಲಹೆ ನೀಡಲಾಯಿತು.

ಈ ವೇಳೆ ಮಾತನಾಡಿದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್‌ ಚೆಪ್ಪುಡಿರ ಜಿ ಕುಶಾಲಪ್ಪ, ‘ಈಗ ನಾವು ಗಿಡಗಳನ್ನು ಚೆನ್ನಾಗಿ ನೋಡಿಕೊಂಡರೆ, ಮುಂದೆ ಅವು ಮರಗಳಾದ ಬಳಿಕ ನಮ್ಮ ಹಿತ ಕಾಯುತ್ತವೆ’ ಎಂದು ಹೇಳಿದರು.

ಭೂಮಿಗೆ ಗಿಡಗಳ ಅಗತ್ಯತೆ ಕುರಿತು ಮಾತನಾಡಿದ ಅವರು, ಅನೇಕ ಗಿಡಗಳ ಬಗ್ಗೆ ಮಾಹಿತಿ ನೀಡಿದರು. ಮರಗಳು ಪಕ್ಷಿಗಳೂ ಸೇರಿದಂತೆ ಅನೇಕ ಜೀವವೈವಿಧ್ಯತೆಗೂ ಆವಾಸಸ್ಥಾನವಾಗಿವೆ. ಹಾಗಾಗಿ, ಮರಗಳನ್ನು ಕಡಿಯಬಾರದು, ಪರಿಸರ ಉಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಲೆಯ ಎಲ್ಲ ಮಕ್ಕಳಿಗೂ ಸಂಸ್ಥೆಯ ವತಿಯಿಂದ ರೇನ್‌ಕೋಟ್‌ನ್ನು ವಿತರಿಸಲಾಯಿತು.

‘ಗಿಡಗಳನ್ನು ಉತ್ತಮವಾಗಿ ಹಾರೈಕೆ ಮಾಡಿದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಲೇಖನ ಸಾಮಗ್ರಿಗಳನ್ನು ಕೊಡುವ ಮೂಲಕ ಅವರನ್ನು ಉತ್ತೇಜಿಸಲಾಗುತ್ತದೆ’ ಎಂದು ಅನಿಕೇತನ ಪ್ರಜ್ಞೆ ಮತ್ತು ಪರಿಸರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ.ಕಾವೇರಿ ತಿಳಿಸಿದರು.

ಸ್ವಯಂಸೇವಕರಾದ ಕೌಶಿಕ್, ಅರಣ್ಯಾಧಿಕಾರಿ ಪೂಜಾ ಶ್ರೀ, ಮದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ, ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಾಧವ ಮತ್ತು ಸದಸ್ಯರು, ಮುಖ್ಯಶಿಕ್ಷಕಿ ಪಿ.ಬಿ.ದಮಯಂತಿ, ಶಿಕ್ಷಕಿಯರಾದ ಅಮರಾವತಿ, ಕವಿತಾ ಭಾಗವಹಿಸಿದ್ದರು.

ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋ ಗ್ರೀನ್ ಅಂಡ್ ಕ್ಲೀನ್‌ ಸ್ವಚ್ಛ ಸುರಕ್ಷಾ ಸಮೃದ್ಧ ಕೊಡಗು ಸಂಸ್ಥೆ ಹಾಗೂ ಶಾಲೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಕ್ಕಳೇ ಗಿಡಗಳನ್ನು ನೆಟ್ಟು ಮುಂದೆ ಅವುಗಳನ್ನು ಸಲಹುವ ಪಣ ತೊಟ್ಟರು
ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋ ಗ್ರೀನ್ ಅಂಡ್ ಕ್ಲೀನ್‌ ಸ್ವಚ್ಛ ಸುರಕ್ಷಾ ಸಮೃದ್ಧ ಕೊಡಗು ಸಂಸ್ಥೆ ಹಾಗೂ ಶಾಲೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಕ್ಕಳೇ ಗಿಡಗಳನ್ನು ನೆಟ್ಟು ಮುಂದೆ ಅವುಗಳನ್ನು ಸಲಹುವ ಪಣ ತೊಟ್ಟರು
ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋ ಗ್ರೀನ್ ಅಂಡ್ ಕ್ಲೀನ್‌ ಸ್ವಚ್ಛ ಸುರಕ್ಷಾ ಸಮೃದ್ಧ ಕೊಡಗು ಸಂಸ್ಥೆ ಹಾಗೂ ಶಾಲೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಕ್ಕಳಿಗೆ ಗಿಡಗಳ ಬಗ್ಗೆ ಮಾಹಿತಿಯನ್ನು ಸಂಸ್ಥೆಯ ಸ್ವಯಂಸೇವಕರ ನೀಡಿದರು
ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋ ಗ್ರೀನ್ ಅಂಡ್ ಕ್ಲೀನ್‌ ಸ್ವಚ್ಛ ಸುರಕ್ಷಾ ಸಮೃದ್ಧ ಕೊಡಗು ಸಂಸ್ಥೆ ಹಾಗೂ ಶಾಲೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಕ್ಕಳಿಗೆ ಗಿಡಗಳ ಬಗ್ಗೆ ಮಾಹಿತಿಯನ್ನು ಸಂಸ್ಥೆಯ ಸ್ವಯಂಸೇವಕರ ನೀಡಿದರು

ಗಿಡಗಳನ್ನು ಪೋಷಿಸುವ ಹೊಣೆ ಮಕ್ಕಳದ್ದು ಉತ್ತಮವಾಗಿ ಪೋಷಣೆ ಮಾಡಿದ ಮಕ್ಕಳಿಗೆ ಲೇಖನ ಸಾಮಗ್ರಿ ಪರಿಸರ ಕಾಳಜಿ ಮೂಡಿಸಲು ವಿನೂತನ ಪ್ರಯತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT