ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಮಳೆ ಹಾನಿಗೆ ಪರಿಹಾರ: ಮುಖ್ಯಮಂತ್ರಿ ಭರವಸೆ

ಜಿಲ್ಲೆಯ ವಿವಿಧೆಡೆ ಮಳೆ ಹಾನಿ ವೀಕ್ಷಿಸಿದ ಸಿದ್ದರಾಮಯ್ಯ
Published 2 ಆಗಸ್ಟ್ 2024, 16:13 IST
Last Updated 2 ಆಗಸ್ಟ್ 2024, 16:13 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಗಳನ್ನು ಶುಕ್ರವಾರ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾನಿಗೆ ಸೂಕ್ತ ಪರಿಹಾರ ನೀಡುವ ಹಾಗೂ ಮುಂದೆ ಅನಾಹುತ ಸಂಭವಿಸದಂತೆ ‌ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡುವ ಭರವಸೆಯನ್ನೂ ನೀಡಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ₹ 766 ಕೋಟಿ ಹಣ ಇದೆ. ಕೊಡಗು ಜಿಲ್ಲಾಧಿಕಾರಿ ಖಾತೆಯಲ್ಲಿ ₹ 43 ಕೋಟಿ ಇದೆ. ಪ‍್ರಕೃತಿ ವಿಕೋಪ ಸಂಬಂಧ ತ್ವರಿತ ರಕ್ಷಣೆಗೆ ಯಾವುದೇ ಹಣದ ಕೊರತೆ ಇಲ್ಲ ಎಂದರು.

ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಅಧಿಕ ಮಳೆ ಸುರಿದಿದೆ. ಹೀಗಿದ್ದರೂ, ಸುದೈವದಿಂದ ಜೀವಹಾನಿ ಸಂಭವಿಸಲ್ಲ. 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಂದೆಯೂ ಜೀವಹಾನಿಯಾಗದಂತೆ ಎಚ್ಚರ ವಹಿಸಲಾಗುವುದು. ಪ್ರಕೃತಿ ವಿಕೋಪ ಸಂಬಂಧ ನಿರ್ಲಕ್ಷ್ಯ ಧೋರಣೆ ತಾಳುವ ಪ್ರಶ್ನೆಯೇ ಇಲ್ಲ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ 67 ಮನೆಗಳಿಗೆ ಪೂರ್ಣ ಹಾನಿಯಾಗಿದ್ದರೆ, 176 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪೂರ್ಣ ಹಾನಿಯಾದ ಮನೆಗಳಿಗೆ ₹ 1.20 ಲಕ್ಷ ಪರಿಹಾರ ನೀಡಿ, ಹೊಸ ಮನೆ ನಿರ್ಮಿಸಿಕೊಡಲಾಗುವುದು. ಭಾಗಶಃ ಹಾನಿಯಾದ ಮನೆಗಳಿಗೆ ₹ 50 ಸಾವಿರ ಪರಿಹಾರ ನೀಡಲಾಗುವುದು. ಹಿಂದಿನ ಬಿಜೆಪಿ ಸರ್ಕಾರ ಹೆಚ್ಚು ಪರಿಹಾರ ಕೊಡುವುದಾಗಿ ಹೇಳಿ ಕೇವಲ ಒಂದು ಕಂತು ಪಾವತಿಸಿ ಸುಮ್ಮನಾಯಿತು. ಆ ಸಂಬಂಧ ಕೆಲವೊಂದು ವಿವಾದಗಳೂ ಉಂಟಾದವು. ಹಾಗಾಗಿ, ನಾವು ಈ ಬಗೆಯ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಪರಿಹಾರ ವಿತರಣೆ ಕುರಿತು ಸುದ್ದಿಗೋಷ್ಠಿಯಲ್ಲೇ ಸಿದ್ದರಾಮಯ್ಯ ವಿಚಾರಿಸಿದಾಗ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಎಲ್ಲರಿಗೂ ಖಾತೆಗೆ ನೇರ ಹಣ ವರ್ಗಾವಣೆ ಮೂಲಕ ವಿತರಣೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ 16 ಜಾನುವಾರುಗಳು ಜೀವ ಕಳೆದುಕೊಂಡಿವೆ. ಅವುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಒಟ್ಟು 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ 10 ಕೇಂದ್ರಗಳು ಸಕ್ರಿಯವಾಗಿವೆ. ಒಟ್ಟು 186 ಮಂದಿ ಕಾಳಜಿ ಕೇಂದ್ರಗಳಲ್ಲಿಯೇ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈವರೆಗಿನ ಅಂದಾಜಿನಂತೆ 28 ಹೆಕ್ಟೇರ್ ಭೂಪ್ರದೇಶದಲ್ಲಿ ಕೃಷಿಭೂಮಿ ಮಳೆಯಿಂದ ಹಾನಿಯಾಗಿದೆ. ಈಗ ಬಿತ್ತನೆ ಸಮಯವಾಗಿದ್ದರಿಂದ ಕೃಷಿಗೆ ಹೆಚ್ಚಿನ ನಷ್ಟವಾಗಿಲ್ಲ. ಆದರೆ, ಕಾಫಿಗೆ ಆಗಿರುವ ಹಾನಿ ಕುರಿತು ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿಯ ಜಂಟಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮಳೆಯಿಂದ 2,708 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಅವುಗಳಲ್ಲಿ 150 ವಿದ್ಯುತ್ ಕಂಬಗಳನ್ನು ಬಿಟ್ಟು ಉಳಿದ ಎಲ್ಲ ವಿದ್ಯುತ್ ಕಂಬಗಳನ್ನು ಪುನರ್ ಸ್ಥಾಪಿಸಲಾಗಿದೆ. ಒಟ್ಟು ಹಾಳಾದ ಎಲ್ಲ 47 ವಿದ್ಯುತ್ ಪ‍ರಿವರ್ತಕಗಳನ್ನೂ ದುರಸ್ತಿ ಮಾಡಲಾಗಿದೆ. ಇದಕ್ಕಾಗಿ ಹೊರ ಜಿಲ್ಲೆಗಳಿಂದಲೂ ಇಲ್ಲಿನ ಸೆಸ್ಕ್‌ಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಗೆ ಸೇರಿದ 344 ಕಿ.ಮೀ ಉದ್ದದ ರಸ್ತೆ ಹಾನಿಯಾಗಿದೆ. ಮಳೆ ನಿಂತ ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

‌ಶಿರಾಟಿ ಘಾಟ್ ರಸ್ತೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ರಸ್ತೆಯನ್ನು ಒಮ್ಮೆ ಪರಿಶೀಲನೆ ಮಾಡಿ, ಜಿಯೊಗ್ರಫಿಕಲ್ ಸರ್ವೇ ಆಫ್ ಇಂಡಿಯಾದವರ ಸಲಹೆಗಳನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಗೃಹಲಕ್ಷ್ಮೀ ಯೋಜನೆ ಹಣ ಪಾವತಿಯಾಗದಿರುವ ಕುರಿತು ಕೇಳಲಾದ ಪ್ರಶ್ನೆಗೆ ಜೂನ್ ತಿಂಗಳ ಹಣ ಈಗ ಪಾವತಿಯಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ  ಮುಖಂಡರಾದ ಎಂ.ಸಿ.ನಾಣಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್  ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಗೆ ಮತ್ತೊಮ್ಮೆ ಗಡುವು! : ಮಡಿಕೇರಿಯಲ್ಲಿರುವ ಜಿಲ್ಲಾಧಿಕಾರಿ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಡಿಸೆಂಬರ್ ತಿಂಗಳ ಗಡುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಸುದ್ದಿಗೋಷ್ಠಿಯ ಮಧ್ಯೆ ಪ್ರಶ್ನಿಸಿದ ಅವರು ಈ ಕುರಿತು ಅಸಮಾಧಾನ ಹೊರಹಾಕಿದರು. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT