ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಮಹಿಳಾ ಸಬಲೀಕರಣಕ್ಕೆ ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿಎನ್‌ಸಿ ಪ್ರತಿಭಟನೆ
Last Updated 8 ಮಾರ್ಚ್ 2023, 16:20 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಅಂತರರಾಷ್ಟ್ರೀಯ ಮಹಿಳಾ ದಿನವಾದ ಬುಧವಾರ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ‘ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಹಾಗೂ ಬಾಲಕಿಯರಿಗೆ ಸಾಂವಿಧಾನಿಕ ಹಕ್ಕು ಮತ್ತು ಸಬಲತೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಸತ್, ವಿಧಾನಸಭೆ, ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿನ ಶೇ 33 ಮೀಸಲಾತಿಯಲ್ಲಿ ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾ ನೀಡಬೇಕು ಎಂದೂ ಆಗ್ರಹಿಸಿದರು.

ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಮೂಲತಃ ಕೃಷಿಕರು. ಆದರೆ, ಶೇ 99ರಷ್ಟು ಕೊಡವ ಮಹಿಳೆಯರು ತಮ್ಮದೇ ಆದ ಕೃಷಿಭೂಮಿಯನ್ನು ಹೊಂದಿಲ್ಲ. ಆದ್ದರಿಂದ ತಮ್ಮ ಸಾಂಸ್ಕೃತಿಕ ಮೂಲವನ್ನು ಹೊಂದಿರುವ ಮಡಿಕೇರಿಯಲ್ಲಿ ಪ್ರತಿ ಕೊಡವ ಮಹಿಳೆಗೆ 5 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಸ್ಪೇನ್, ಕೇರಳ ಮತ್ತು ಬಿಹಾರದ ಮಾದರಿಯಲ್ಲಿ ಕೆಲಸದ ಸ್ಥಳ ಮತ್ತು ಶಾಲೆಯಲ್ಲಿ ಕೊಡವ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಬೇಕು ಎಂದು ಹೇಳಿದರು.

ಕಲ್ಯಾಣ ರಾಜ್ಯ ಯೋಜನೆಯ ‘ಸಪ್ತಪದಿ ಭಾಗ್ಯ’ ಕ್ಕೆ ಸಮಾನವಾಗಿ ಕೊಡವತಿ ವಧುವಿಗೆ ‘ಪತ್ತಾಕ್ ಭಾಗ್ಯ’ ಯೋಜನೆ ಜಾರಿಗೆ ತರಬೇಕು. ಇದರಿಂದ ಬಡತನದಲ್ಲಿರುವ ಕೊಡವ ಮಹಿಳೆಯರಿಗೆ ಅನುಕೂಲವಾಗಲಿದೆ. ಕೊಡವ ಬುಡಕಟ್ಟು ಜನಾಂಗದವರು ಪೌಷ್ಟಿಕ ಆಹಾರ ನೀಡುವ ವಿಶಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ‘ಸೀಮಂತ ಭಾಗ್ಯ’ಕ್ಕೆ ಬದಲಾಗಿ ಬಡ ಕೊಡವತಿ ಗರ್ಭಿಣಿಯರಿಗೆ ‘ಕೂಪದಿ ಕೂಳ್ ಭಾಗ್ಯ’ ನೀಡಬೇಕು ಎಂದೂ ಮನವಿ ಮಾಡಿದರು.

ಮನವಿ ಪತ್ರವನ್ನು ನಾಚಪ್ಪ ಅವರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಮುಖಂಡರಾದ ಪಟ್ಟಮಾಡ ಲಲಿತಾ, ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಅರೆಯಡ ಸವಿತಾ, ಅಪ್ಪಚ್ಚಿರ ರೀನಾ ರಮ್ಮಿ, ಕೂಪದಿರ ಪುಷ್ಪಾ ಮುತ್ತಪ್ಪ, ಪುಟ್ಟಿಚಂಡ ನಿಮಿತ ದೇವಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಇಟ್ಟಿರ ಸಬಿತಾ, ನಂದಿನೆರವಂಡ ನಿಶ ಅಚ್ಚಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶರೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT