ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಗೆ ಕಾಫಿ ತ್ಯಾಜ್ಯ: ಗ್ರಾಮಸ್ಥರ ಅಸಮಾಧಾನ

Last Updated 21 ಜನವರಿ 2021, 12:58 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋರನ ಹೊಳೆಗೆ ಕಳೆದ ಕೆಲವು ವರ್ಷಗಳಿಂದ ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ಹರಿಸಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಹೊಳೆ ಬದಿಯ ಕೆಲವು ಕಾಫಿ ಬೆಳೆಗಾರರು ಪಲ್ಪ್ ಮಾಡಿದ ನೀರನ್ನು ನೇರವಾಗಿ ಹೊಳೆಗೆ ಬಿಡುತ್ತಿರುವುದರಿಂದ ನೀರು ಕಲುಷಿತಗೊಂಡು ಜಲಚರಗಳು ಸಾಯುತ್ತಿವೆ. ಹೊಳೆಯ ನೀರು ಐಗೂರು, ಯಡವಾರೆ, ಗರಗಂದೂರು, ಹಾರಂಗಿ, ಹೊರಹೊಳೆ, ಕಾಳಿದೇವನ ಹೊಸೂರು, ಹುದುಗೂರು ಮೂಲಕ ಹಾರಂಗಿ ಜಲಾಶಯ ಸೇರಿ ಕಾವೇರಿ ನದಿಯ ಒಡಲು ಸೇರುತ್ತಿದೆ.

ನದಿ ಪಾತ್ರದಲ್ಲಿ ಕುಡಿಯಲು, ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸುತ್ತಿದ್ದಾರೆ. ಇದೀಗ ನೀರು ಸಂಪೂರ್ಣ ಕಲುಷಿತಗೊಂಡಿರುವುದರಿಂದ ಜಲಚರಗಳು ಸಾಯುತ್ತಿವೆ, ಜಾನುವಾರು ಇದೇ ನೀರನ್ನು ಕುಡಿಯುತ್ತಿವೆ. ಕಾಫಿ ಬೆಳೆಗಾರರಿಗೆ ನೋಟಿಸ್‌ ನೀಡಿ, ತ್ಯಾಜ್ಯ ಹರಿಯುವುದನ್ನು ತಡೆಯಬೇಕಾದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಮುಖಂಡ ದಿನೇಶ್‌ ಮಾತನಾಡಿ, ಈ ಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾಫಿ ಕೊಯ್ಲು ಮಾಡಿದ ನೀರನ್ನು ಹೊಳೆಗೆ ಬಿಡುತ್ತಿದ್ದಾರೆ. ಇದರಿಂದ ನೀರು ಕಲುಷಿತಗೊಳ್ಳುತ್ತದೆ. ಈ ನೀರನ್ನು ಕುಡಿಯಲು ಸಾಧ್ಯವಿಲ್ಲ. ಜಾನುವಾರು ಕುಡಿದರೆ ಅವುಗಳಿಗೆ ಭೇದಿಯಾಗುತ್ತದೆ. ಕೃಷಿಗೂ ಬಲಸಲು ಆಗುವುದಿಲ್ಲ. ಪ್ರತಿ ವರ್ಷ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT