ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಸತಾಯಿಸುವ ಅಧಿಕಾರಿಗಳು; ಲೋಕಾಯುಕ್ತ ದೂರು

Published 18 ಮೇ 2024, 5:38 IST
Last Updated 18 ಮೇ 2024, 5:38 IST
ಅಕ್ಷರ ಗಾತ್ರ

ಮಡಿಕೇರಿ: ಜಾತಿ, ಆದಾಯ ಸೇರಿದಂತೆ ವಿವಿಧ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡಬೇಕು, 4 ದಶಕಗಳಿಂದ ಓಡಾಡಿದರೂ ಸಹ ಖಾತೆ ಬದಲಾವಣೆ ಆಗಿಲ್ಲ... ಹೀಗೆ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಇಲ್ಲಿ ಶುಕ್ರವಾರ ಮಡಿಕೇರಿ ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಕುಂದುಕೊರತೆ ಸಭೆಯಲ್ಲಿ ಮಂಡಿಸಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ತಮ್ಮನ್ನು ಸತಾಯಿಸುತ್ತಿರುವ ದೂರುಗಳನ್ನೇ ಪ್ರಧಾನವಾಗಿ ನೀಡಿದರು. ‘ಜಾತಿ, ಆದಾಯ ಸೇರಿದಂತೆ ವಿವಿಧ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡಬೇಕಿದೆ’ ಎಂದು ಸಾರ್ವಜನಿಕರೊಬ್ಬರು ದೂರಿದರು.

‘ಸಕಾಲದಲ್ಲಿ ಇಷ್ಟು ದಿನದೊಳಗೆ ಪ್ರಮಾಣ ಪತ್ರ ನೀಡಬೇಕು ಎಂಬ ಆದೇಶ ಇದ್ದರೂ ಸಹ, ಸತಾಯಿಸುತ್ತಿದ್ದಾರೆ. ಜಾತಿ, ಆದಾಯ ಮತ್ತಿತರ ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲಾತಿಯ ಮಾಹಿತಿ ಫಲಕವನ್ನು ಅಳವಡಿಸಿದ್ದಲ್ಲಿ ಒದಗಿಸಲಾಗುವುದು. ಆದರೆ, ಸತಾಯಿಸುವುದು ಏಕೆ’ ಎಂದು ಸಾರ್ವಜನಿಕರೊಬ್ಬರು ಅವಲತ್ತುಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್‍ಪಿ ಪವನ್ ಕುಮಾರ್, ‘ಯಾರು ಸತಾಯಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಲೋಕಾಯುಕ್ತ ನಿಯಮನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ‘ಇದೊಂದು ಗಂಭೀರ ವಿಚಾರವಾಗಿದ್ದು, ಯಾರನ್ನೂ ಸತಾಯಿಸದೆ ಗೌರವದಿಂದ ಕಾಣಬೇಕು. ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇದ್ದಲ್ಲಿ, ಹಿಂಬರಹವನ್ನಾದರೂ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಾಗದ ಖಾತೆಗೆ ಸಂಬಂಧಿಸಿದಂತೆ ಸುಮಾರು 4 ದಶಕಗಳಿಂದ ಓಡಾಡಿದರೂ ಸಹ ಖಾತೆ ಬದಲಾವಣೆ ಆಗಿಲ್ಲ. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.

ನಾಲ್ಕು ದಶಕವಾದರೂ ಸಹ ಖಾತೆ ಸರಿಪಡಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ

ಲೋಕಾಯುಕ್ತ ಡಿವೈಎಸ್‍ಪಿ ಕೆಲವು ಇಲಾಖೆಗಳಲ್ಲಿ ಇದ್ದಕ್ಕಿದ್ದ ಹಾಗೆ ಕಡತಗಳು ನಾಪತ್ತೆಯಾಗುತ್ತವೆ ಹೇಗೆ ಎಂದು ಪ್ರಶ್ನಿಸಿದರು. ಪಡಿತರ ಚೀಟಿ ಕೊಡಿಸುವಂತೆ ಸಾರ್ವಜನಿಕರೊಬ್ಬರು ಮನವಿ ಮಾಡಿದರು. ವಿವಿಧ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರಿಗೆ ನೇರವಾಗಿ ಕೆಲಸಗಳು ಆಗುವಂತಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವಂತಾಗಬೇಕು ಎಂದರು.

ತಹಶೀಲ್ದಾರರಾದ ರಮೇಶ್ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT