ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ |ಸಹಕಾರ ಸಂಘದ 73ನೇ ಮಹಾಸಭೆ: ಸಾಲದ‌ ರೂಪದಲ್ಲಿ ಗೊಬ್ಬರ ವಿತರಣೆಗೆ ಆಗ್ರಹ

Published : 31 ಆಗಸ್ಟ್ 2024, 6:47 IST
Last Updated : 31 ಆಗಸ್ಟ್ 2024, 6:47 IST
ಫಾಲೋ ಮಾಡಿ
Comments

ಕುಶಾಲನಗರ: ‘ಬಿತ್ತನೆ ಬೀಜ, ಕಳೆನಾಶಕ, ಕೀಟನಾಶಕ ಸೇರಿದಂತೆ ರಾಸಾಯನಿಕ ಗೊಬ್ಬರವನ್ನು ಸಾಲದ‌ ರೂಪದಲ್ಲಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗುರುವಾರ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 73ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಇಲ್ಲಿನ ರೈತ ಭವನದಲ್ಲಿ ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ವ್ಯಾಪಾರ ಮಳಿಗೆಗಳು ಬಹುತೇಕ ನಷ್ಟದಲ್ಲಿರುವ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಖಾಸಗಿ ಕಲ್ಯಾಣ‌ ಮಂಟಪಗಳು‌ ಹೆಚ್ಚುತ್ತಿದ್ದು ಪೈಪೋಟಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಸಂಘದ ಕಲ್ಯಾಣ ಮಂಟಪಗಳ ಬಾಡಿಗೆ ದರವನ್ನು ಸ್ವಲ್ಪ ಕಡಿಮೆ ಮಾಡಿ ಪ್ರಚಾರ ಕೈಗೊಂಡಲ್ಲಿ ಜನರನ್ನು ಸೆಳೆಯಲು, ಲಾಭ ಗಳಿಸಲು ಸಾಧ್ಯ ಎಂದು ಸದಸ್ಯರಾದ ಸೋಮಣ್ಣ, ಟಿ.ಬಿ.ಜಗದೀಶ್, ಚಂದ್ರಪ್ಪ ಸಲಹೆ ನೀಡಿದರು.

ರಾಸಾಯನಿಕ ಗೊಬ್ಬರ ಚೀಲದ ಮೇಲೆ ಪರೋಕ್ಷವಾಗಿ ಬಿಜೆಪಿಯನ್ನು ಸೂಚಿಸುವ ವಾಕ್ಯಗಳನ್ನು ಮುದ್ರಿಸಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಸದಸ್ಯರಾದ ಕೆ.ಪಿ.ಚಂದ್ರಕಲಾ, ವಿ.ಪಿ.ಶಶಿಧರ್ ಅವರು ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವಿಚಾರ ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತು.

ಅಧ್ಯಕ್ಷ ಕುಮಾರಪ್ಪ ಮಾತನಾಡಿ, ‘ಸಂಘದ ಬ್ಯಾಂಕಿಂಗ್ ವ್ಯವಹಾರ ಪ್ರಗತಿಯತ್ತ ಮುನ್ನೆಡೆಯುತ್ತಿದ್ದು, 2023-24ನೇ ನಲ್ಲಿ ₹89.43 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ₹37.43 ಲಕ್ಷ ನಿವ್ವಳ ಲಾಭಗಳಿಸಿದೆ. ಇತರೆ ಸಹಕಾರ ಬ್ಯಾಂಕ್‌ಗಳಿಗಿಂತಲೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದೆ. ಚಿನ್ಮಾಭರಣ ಸಾಲಕ್ಕೆ ಶೇ 9, ವಾಹನ ಸಾಲಕ್ಕೆ ಶೇ 11, ಅಡಮಾನ ಸಾಲಕ್ಕೆ ಶೇ 11ರಂತೆ ಬಡ್ಡಿ ನಿಗದಿಪಡಿಸಲಾಗಿದೆ. ಸದಸ್ಯರು ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸದಸ್ಯರು ತಮ್ಮ ಮನೆಯ ಶುಭ ಕಾರ್ಯಗಳನ್ನು ಸಂಘದ ಸಭಾಂಗಣದಲ್ಲಿ ನಡೆಸುವ ಮೂಲಕ ಸಂಘದ ಏಳಿಗೆಗಾಗಿ ಸಹಕಾರ ನೀಡಬೇಕು. ಸಮಾರಂಭಕ್ಕೆ ಆಗಮಿಸುವ ಜನರಿಗಾಗಿ ಉತ್ತಮವಾದ ಹೈಟೆಕ್ ಶೌಚಾಲಯ ನಿರ್ಮಿಸಲಾಗುತ್ತದೆ’ ಎಂದರು.

ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ತೊರೆನೂರು ಸರ್ಕಾರಿ ಪ್ರೌಢಶಾಲೆಗೆ ಟ್ಯಾಬ್‌ ವಿತರಿಸಿದರು.

ಸಂಘದ ಉಪಾಧ್ಯಕ್ಷ ಎಚ್.ಜೆ.ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ, ಎ.ಪಿ.ನೀಲಮ್ಮ, ಆರ್.ಕೆ.ಚಂದ್ರು, ಕೆ.ಎಸ್.ರತೀಶ್, ಎಚ್.ಟಿ.ಮೋಹನ್, ಪಿ.ಪಿ.ತಿಲಕ್ ಕುಮಾರ್, ಎಚ್.ಟಿ.ನಾಗೇಶ್, ಸಿ.ಜೆ.ಲತಾ, ಮೊಹಮ್ಮದ್ ಸಾಲೇಹ್, ಸಿ.ಎನ್.ಲೋಕೇಶ್, ಕೆಡಿಸಿಸಿ ಬ್ಯಾಂಕ್ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT