ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಬೆಂಬಲಿಸಲು ಸಿಪಿಐ ಕರೆ

ಬಿಜೆಪಿ ಹಠಾವೊ, ದೇಶ್‌ ಬಚಾವೊ ಎಂದ ಸಿಪಿಐ ನಾಯಕರು
Published 19 ಏಪ್ರಿಲ್ 2024, 7:22 IST
Last Updated 19 ಏಪ್ರಿಲ್ 2024, 7:22 IST
ಅಕ್ಷರ ಗಾತ್ರ

ಮಡಿಕೇರಿ: ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಬಿ.ಅಮ್ಜದ್ ತಿಳಿಸಿದರು.

ಕಾಂಗ್ರೆಸ್ ಮತ್ತು ಸಿಪಿಐ ನಡುವೆ ಭೂಮಿ, ಆಕಾಶದಷ್ಟು ಸೈದ್ಧಾಂತಿಕವಾದ ವ್ಯತ್ಯಾಸಗಳಿವೆ. ಆದರೆ, ಇಂದು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆ ಶಿಥಿಲವಾಗುತ್ತಿರುವ ಹೊತ್ತಿನಲ್ಲಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲಾಗುತ್ತಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆದಾಗ್ಯೂ, ಸಿಪಿಐ ದೇಶದ 36 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇತರೆ ಎಡಪಕ್ಷಗಳು ಒಟ್ಟು 180ಕ್ಕೂ ಹೆಚ್ಚು ಕಡೆ ಸ್ಪರ್ಧಿಸುತ್ತಿವೆ. ‘ಬಿಜೆಪಿ ಹಠಾವೊ, ದೇಶ್‌ ಬಚಾವೊ’ ಎಂಬ ಘೋಷವಾಕ್ಯದಡಿ ಕರ್ನಾಟಕದಲ್ಲಿ ಸಿಪಿಐ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎಂದರು.

ನರೇಂದ್ರ ಮೋದಿ ಅವರು ಸರ್ವಾಧಿಕಾರದತ್ತ ದಾಪುಗಾಲಿಡುತ್ತಿದ್ದಾರೆ ಎನ್ನುವುದಕ್ಕೆ ಅವರ ಆಡಳಿತ ವೈಖರಿಯೇ ಸಾಕ್ಷಿಯಾಗಿದೆ. ಯಾವುದೇ ಚರ್ಚೆ ಇಲ್ಲದೇ ಕೇವಲ 2 ಗಂಟೆಗಳಲ್ಲಿ 172 ಮಸೂದೆಗಳನ್ನು ಅಂಗೀಕರಿಸಿದೆ. 146 ಸಂಸದರನ್ನು ಅಮಾನತುಗೊಳಿಸಿ ಸರ್ವಾಧಿಕಾರವನ್ನು ಮೆರೆದಿದೆ. ಹಾಗಾಗಿ, ಈ ಚುನಾವಣೆಯ ನಿಜಕ್ಕೂ ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಬಹಳ ಮಹತ್ವದ್ದಾಗಿದೆ ಎಂದು ಪ‍್ರತಿಪಾದಿಸಿದರು.

ಚುನಾವಣಾ ಬಾಂಡ್ ದೇಶದ ಅತಿದೊಡ್ಡ ಹಗರಣ ಎನಿಸಿದೆ. ಇದರಲ್ಲಿ ಬಿಜೆಪಿ ಅತಿ ದೊಡ್ಡ ಪಾಲನ್ನು ಪಡೆದಿದೆ. ಆದರೆ, ಸಿಪಿಐ ಒಂದೇ ಒಂದು ರೂಪಾಯಿಯನ್ನೂ ಈ ಬಾಂಡ್‌ನಡಿ ಪಡೆಯದೇ ತನ್ನ ಬದ್ಧತೆಯನ್ನು ತೋರಿಸಿದೆ. ಈ ಕುರಿತು ಸುಪ್ರೀಂಕೋರ್ಟ್‌ ಉಸ್ತುವಾರಿಯಲ್ಲಿ ಕೂಲಂಕಷವಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ಮಾತನಾಡಿ, ‘ಸಂಸದ ಪ್ರತಾಪಸಿಂಹ ಅವರು ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ಸಂಸತ್ತಿನಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದ ಕೊಡಗು ಜಿಲ್ಲೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ ಎಂದು ಅವರು ದೂರಿದರು.

ಪಕ್ಷದ ರಾಜ್ಯ ಮಂಡಳಿ ಸದಸ್ಯ ಧರ್ಮರಾಜ್, ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಂ.ಸೋಮಪ್ಪ, ಸಹ ಕಾರ್ಯದರ್ಶಿ ರಮೇಶ್‌ ಮಾಯಮುಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT