‘ದೈವಾರಾಧನೆ ಹಣ ಮಾಡುವ ದಂಧೆ ಅಲ್ಲ’- ಪಿ.ಎಂ.ರವಿ

ಮಡಿಕೇರಿ: ‘ದೈವಾರಾಧನೆ ಎಂಬುದು ಹಣ ಮಾಡುವ ದಂಧೆ ಅಲ್ಲ. ಆದರೆ, ಇತ್ತೀಚೆಗೆ ಇದು ವ್ಯಾಪಾರೀಕರಣಗೊಂಡಿದೆ’ ಎಂದು ದೈವಾರಾಧಕ ಪಿ.ಎಂ.ರವಿ ಬೇಸರ ವ್ಯಕ್ತಪಡಿಸಿದರು.
‘ಕಾಂತಾರಾ’ ಸಿನಿಮಾ ದೈವರಾಧನೆಯ ಮಹತ್ವವವನ್ನು ಇಡೀ ಜಗತ್ತಿಗೆ ತೋರಿಸಿತು. ಈಗ ದೈವರಾಧನೆ ಎನಿಸಿದ ಕೊರಗಜ್ಜನ ಆರಾಧನೆಯನ್ನು ಹಣ ಮಾಡುವ ತಂತ್ರವಾಗಿ ಬಳಕೆಯಾಗುತ್ತಿದೆ. ಇದು ಸರಿಯಲ್ಲ’ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಮೈಸೂರು ಭಾಗದಲ್ಲಿ ಈಚೆಗೆ ನಿಂಬೆಹಣ್ಣು ಮಂತ್ರಿಸಿ ನೀಡುವ, ದೈವ ನರ್ತನದ ಸಂದರ್ಭದಲ್ಲಿ ಶಿಳ್ಳೆ ಹೊಡೆಯುವ ಘಟನೆಗಳು ನಡೆದವು. ದೊಡ್ಡಬಳ್ಳಾಪುರದಲ್ಲಿ ಗೂಗಲ್‌ಪೇ ಮೂಲಕ ಹಣ ಪಡೆದು, ದೈವಾರಾಧನೆಯ ಪ್ರಸಾದ ಕಳುಹಿಸಲಾಯಿತು. ಇವೆಲ್ಲವೂ ದೈವರಾಧನೆಯ ನಿಯಮಗಳಿಗೆ ವಿರುದ್ಧ ಇವೆ ಎಂದರು.
ಶ್ರದ್ಧಾಭಕ್ತಿಯ ದೈವರಾಧನೆಗೆ ವಿಜೃಂಭಣೆಯ ಅಗತ್ಯವೇ ಇಲ್ಲ. ಕೊಡಗಿನಲ್ಲಿ ಬಹಳಷ್ಟು ಮಂದಿ ತುಳು ಭಾಷಿಕರು ಇದ್ದಾರೆ. ಇಲ್ಲೆಲ್ಲ ತುಳುನಾಡಿನ ದೈವನರ್ತಕರನ್ನು ಇಲ್ಲಿಗೆ ಕರೆಸಿ ನಿಯಮಾನುಸಾರ ದೈವರಾಧನೆ ನಡೆಸಲಾಗುತ್ತಿದೆ. ಆದರೆ, ಮೈಸೂರು, ಬೆಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಇತರೆಡೆ ಮನಸೋಇಚ್ಛೆ, ಬೇಕಾಬಿಟ್ಟಿಯಾಗಿ ದೈವರಾಧನೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆದಕಲ್‌ನ ದೈವರಾಧಕ ಕೆ.ಎಂ.ಉಮೇಶ್, ಮಕ್ಕಂದೂರಿನ ಕೋಟಿ ಚೆನ್ನಯ್ಯ ದೈವರಾಧಕ ಮುತ್ತಪ್ಪ ಪೂಜಾರಿ, ಹೆಬ್ಬಟ್ಟಗೇರಿ ಕಲ್ಲುರ್ಟಿ ದೈವಾರಾಧಕ ಬಿ.ಎಂ.ರಮೇಶ್‌ಪೂಜಾರಿ, ಐಗೂರಿನ ಪಾಷಾಣಮೂರ್ತಿ ದೈವಾರಾಧಕ ಆನಂದ ಪೂಜಾರಿ, ಕೊರಗಜ್ಜನ ದೈವಾರಾಧಕ ಪಿ.ಸಿ.ಲೋಹಿತ್ ಹೆಬ್ಬಟಗೇರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.