‘ಬೆಳಕಿನ ಹಬ್ಬ’ ದೀಪಾವಳಿ ಸಂಭ್ರಮ

ಮಡಿಕೇರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಕೊಡಗು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರ ಕೊಡಗು ಭಾಗದಲ್ಲಿ ದೀಪಾವಳಿ ಸಂಭ್ರಮ ತುಸು ಹೆಚ್ಚು.
ಕುಶಾಲನಗರ, ಆಲೂರು ಸಿದ್ದಾಪುರ, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಭಾಗದ ಪ್ರತಿ ಮನೆಯಲ್ಲೂ ದೀಪಾವಳಿ ಆಚರಣೆ ಮಾಡಲಾಗುತ್ತದೆ. ದಕ್ಷಿಣ ಕೊಡಗು ಭಾಗದ ಅಲ್ಲಲ್ಲಿ ಮಾತ್ರ ಬೆಳಕಿನ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ಖರೀದಿಯು ಬುಧವಾರವೂ ಜೋರಾಗಿತ್ತು.
ಮಡಿಕೇರಿಯಲ್ಲಿ ಹಣತೆ ಹಾಗೂ ಹೂವುಗಳನ್ನು ಗ್ರಾಹಕರು ಖರೀದಿಸಿದರು. ಹೂವಿನ ಬೆಲೆ ದುಬಾರಿಯಾಗಿದ್ದು, ಗ್ರಾಹಕರಿಗೆ ಬಿಸಿ ತಟ್ಟಿತ್ತು. ಚೆಂಡು ಹೂವು, ಸೇವಂತಿಗೆ ಮಾರಾಟ ಜೋರಾಗಿತ್ತು. ಮೋರ್ ಶಾಪ್ ಎದುರು, ಚೌಕಿ, ತಿಮ್ಮಯ್ಯ ವೃತ್ತ, ಮಹಾದೇವಪೇಟೆ ರಸ್ತೆಯಲ್ಲಿ ಹೆಚ್ಚಿನ ದರ ನೀಡಿ ಗ್ರಾಹಕರು ಹೂವು ಖರೀದಿಸಿದರು.
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬ ಈ ದೀಪಾವಳಿ. ಮುಂಗಾರು ಬೆಳೆಗಳು ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ ಎನ್ನುತ್ತಾರೆ ಹಿರಿಯರು.
ಮಳೆಯ ಆತಂಕ: ಹಬ್ಬದ ಸಂಭ್ರಮಕ್ಕೆ ಮಳೆಯು ಮಂಕು ಕವಿಯುವಂತೆ ಮಾಡಿದೆ. ಕಳೆದ ಹದಿನೈದು ದಿನಗಳಿಂದಲೂ ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಉತ್ಸಾಹ ಕುಗ್ಗುವಂತೆ ಮಾಡಿದೆ. ಚಳಿಗಾಲದ ವೇಳೆ ಬರುವ ದೀಪಾವಳಿಯನ್ನು ಪ್ರತಿವರ್ಷ ಜನರು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಮಳೆಯು ಮಂಕು ಕವಿಯುವಂತೆ ಮಾಡಿದೆ.
ಹಣತೆ ಬೆಳಗಿಸಿ: ದೀಪಾವಳಿ ವೇಳೆ ಮಾಲಿನ್ಯಕಾರಕ ಪಟಾಕಿ ತ್ಯಜಿಸಿ ಹಣತೆ ಬೆಳಗಿಸಿ ಎಂದು ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. 125 ಡೆಸಿಬಲ್‌ಗಿಂತ ಕಡಿಮೆ ಶಬ್ದ ಹೊಂದಿರುವ ಹಸಿರು ಪಟಾಕಿ ಸಿಡಿಸಬೇಕೇ ವಿನಾ ಯಾವುದೇ ರೀತಿಯಲ್ಲೂ ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದೆಂದು ಸುಪ್ರೀಂಕೋರ್ಟ್ ಕೂಡ ಆದೇಶಿಸಿದೆ. ಎಲ್ಲರೂ ಇದನ್ನು ಪಾಲಿಸಬೇಕು ಎಂದು ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.