ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ನಡೆಯದಿದ್ದರೆ ಮತದಾನ ಬಹಿಷ್ಕಾರ

ನಾಕೂರು ಶಿರಂಗಾಲ 2ನೇ ವಾರ್ಡಿನ ನಿವಾಸಿಗಳ ಪ್ರತಿಭಟನೆ, ಎಚ್ಚರಿಕೆ
Last Updated 20 ಮಾರ್ಚ್ 2023, 6:57 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ 2ನೇ ವಾರ್ಡಿನ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು. ಕಾಮಗಾರಿ ನಡೆಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

‘ಅಕ್ಟೋಬರ್ ತಿಂಗಳಲ್ಲಿ ಒಂದೇ ದಿನ ಸುರಿದ ಮಳೆಗೆ ಗ್ರಾಮದ ಈ ಭಾಗಕ್ಕೆ ತೆರಳುವ ಸಾರ್ವಜನಿಕ ಮುಖ್ಯ ರಸ್ತೆಯೇ ಕೊಚ್ಚಿ ಹೋಗಿದ್ದು, ಶಾಸಕರಾದಿಯಾಗಿ ಯಾವ ಜನಪ್ರತಿನಿಧಿಗಳು ಕಾಮಗಾರಿ ನಡೆಸಲು ಮುಂದೆ ಬಂದಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಈ ರಸ್ತೆಯಲ್ಲಿ ವಾಹನ ಅಷ್ಟೇ ಅಲ್ಲ ನಡೆದಾಡದಂತಹ ಸ್ಥಿತಿಯಿದೆ‌. ಕಳೆದ ಹಲವು ದಿನಗಳಿಂದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ್ದರಿಂದ 150 ಗ್ರಾಮಸ್ಥರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥ ಅಭಿಲಾಷ್ ಮಾತನಾಡಿ, ‘ಈ ರಸ್ತೆಯ ತಿರುವಿನಲ್ಲಿ ಹಾರಂಗಿ ಹಿನ್ನೀರಿನ ಹೊಳೆ ಇದ್ದು, ಮಳೆಗಾಲದಲ್ಲಿ ತುಂಬುತ್ತದೆ. ಆ ಸಮಯದಲ್ಲಿ ವಾಹನ ಹತೋಟಿ ತಪ್ಪಿದರೆ ಹೊಳೆಗೆ ಬಿದ್ದು ಚಾಲಕರು ಪ್ರಾಣ ಕಳೆದುಕೊಳ್ಳುವ ಆತಂಕವಿದೆ. ಈ ಹೊಳೆಗೆ ತಡೆಗೋಡೆ ನಿರ್ಮಿಸಬೇಕು ಹಾಗೂ ಈ ಹದಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ಸೌಮ್ಯ ಮಾತನಾಡಿ, ‘ಹಾಳಾದ ರಸ್ತೆಯಿಂದ ಸುಮಾರು 2-3 ಕಿ.ಮೀ.ವರೆಗೆ ಪುಟ್ಟ ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ಧರು, ಗರ್ಭಿಣಿಯರು ನಡೆದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಕೈ ಕಾಲು ಮುರಿದುಕೊಂಡ‌ ಉದಾಹರಣೆಗಳು ಬಹಳಷ್ಟಿದೆ. ಈ ಭಾಗಕ್ಕೆ ಬಾಡಿಗೆ ವಾಹನಗಳು ಕೂಡಾ ಬರುತ್ತಿಲ್ಲ. ‌ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ತೆರಳಲು ಸಂಕಷ್ಟ ಎದುರಾಗಿದೆ. ಕೂಡಲೇ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಈ ಭಾಗದ 150 ಮಂದಿ ಮತದಾರರು ಚುನಾವಣಾ ಬಹಿಷ್ಕಾರ ಹಾಕುವುದು ನಿಶ್ಚಿತ’ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಅವರನ್ನು ಕಂಡ ಕೂಡಲೇ ನಿವಾಸಿಗಳು ಅಸಮಾಧಾನ ಹೊರಹಾಕಿದರು. ಇದರಿಂದ ಕೆಲಕಾಲ ಗೊಂದಲ ಪರಿಸ್ಥಿತಿ ಉಂಟಾಯಿತು. ಪ್ರತಿಭಟನಕಾರರನ್ನು ಸಮಾಧಾನಪಡಿಸಿದ ನಂತರ ಮಾತನಾಡಿದ ಅವರು, ‘ಈಗಾಗಲೇ ₹ 5 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರೊಂದಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ₹ 2 ಲಕ್ಷ ಅನುದಾನವಿದ್ದು ರಸ್ತೆ ಕಾಮಗಾರಿ ನಡೆಸಲಾಗುವುದು. ಜೊತೆಗೆ ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯಿತಿಯ ಸದಸ್ಯರೊಂದಿಗೆ ಕಾವೇರಿ ನೀರಾವರಿ ನಿಗಮದ ಕಚೇರಿಗೆ ತೆರಳಿ ಮಳೆಹಾನಿ‌ ಪರಿಹಾರ ಮತ್ತು ಹೊಳೆಗೆ ತಡೆಗೋಡೆ ಹಾಗೂ ಈ ಭಾಗದ ವಸ್ತುಸ್ಥಿತಿಯ ಬಗ್ಗೆ ಮನವಿ ಮಾಡಲಾಗುವುದು. ತಕ್ಷಣದಲ್ಲಿಯೇ 2-3 ಕಿ.ಮೀ ರಸ್ತೆ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಈ ಭಾಗದ ಸಮಸ್ಯೆಯನ್ನು ಪರಿಹರಿಸುವುದಾಗಿ’ ಭರವಸೆ ನೀಡಿದರು.

ಚುನಾವಣೆಯ ಮುಂಚಿತವಾಗಿ ಕಾಮಗಾರಿ ಆರಂಭವಾಗದಿದ್ದರೆ ಚುನಾವಣೆಯನ್ನು ಬಹಿಷ್ಕರಿಸಿ ವೋಟು ಕೇಳಲು ಬರುವ ಅಭ್ಯರ್ಥಿಗಳಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯತಿ ಮಾಜಿ‌ ಅಧ್ಯಕ್ಷ ಬಿ.ಜಿ.ರಮೇಶ್, ಸದಸ್ಯೆ ಅರುಣಾ ಕುಮಾರಿ, ಮಾಜಿ.ತಾಲ್ಲೂಕು ಪಂಚಾಯತಿ ಸದಸ್ಯ ಶಂಕರ ನಾರಾಯಣ, ಗ್ರಾಮಸ್ಥರಾದ ಪವನ್, ಸಂತೋಷ್, ಕರುಣಾಕರ, ದಿವಾಕರ್, ಕಾವ್ಯ, ಸುಬ್ಬರಾಜು, ಗೋಪಾಲ್, ರಾಜೇಶ್ ಇತರರು‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT