ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾದಂತೆ ಮಡಿಕೇರಿ ದಸರಾ ಪರಿಗಣಿಸಲು ಒತ್ತಾಯ

Published 28 ಅಕ್ಟೋಬರ್ 2023, 4:36 IST
Last Updated 28 ಅಕ್ಟೋಬರ್ 2023, 4:36 IST
ಅಕ್ಷರ ಗಾತ್ರ

ಮಡಿಕೇರಿ: ‘ಮೈಸೂರು ದಸರಾ ಎಷ್ಟೊಂದು ಸುಂದರ...’ ಎಂಬ ಹಾಡು ಜನಪ್ರಿಯವೂ ಹೌದು, ಸತ್ಯವೂ ಹೌದು. ಹಾಗೆಯೇ, ಮಡಿಕೇರಿ ದಸರಾ ಸಹ ಬಲು ಸುಂದರ. ಮಾತ್ರವಲ್ಲ, ಅಪರೂಪದ ಉತ್ಸವ ಎಂಬುದೂ ಸತ್ಯ. ಆದರೆ, ಈ ಸರ್ಕಾರ ಮಾತ್ರ ಮೈಸೂರು ದಸರೆಗೆ ನೀಡುವಷ್ಟು ಆದ್ಯತೆಯನ್ನು ಮಡಿಕೇರಿ ದಸರೆಗೆ ನೀಡುತ್ತಿಲ್ಲ ಎಂಬುದು ಇಲ್ಲಿನ ಜನರ ಆರೋಪ.

ಮೈಸೂರು ದಸರೆಗೆ ಭೇಟಿ ನೀಡುವಂತೆ ಲಕ್ಷಾಂತರ ಜನರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಮೈಸೂರಿನಲ್ಲಿ ದಸರೆ ಮುಗಿದ ಬಳಿಕ ಅಲ್ಲಿಗೆ ಬಂದಿರುವ ಅರ್ಧದಷ್ಟು ಜನರು ಮಡಿಕೇರಿಗೆ ಬರುತ್ತಾರೆ. ಮಡಿಕೇರಿಯ ರಸ್ತೆಗಳಲ್ಲಿ ಜನರ ಪ್ರವಾಹವೇ ಹರಿಯುತ್ತದೆ. ಇಷ್ಟೊಂದು ಜನಪ್ರಿಯಗೊಂಡಿದ್ದರೂ ಸರ್ಕಾರದ ಸೂಕ್ತ ಬೆಂಬಲ ಇಲ್ಲದೇ ಅನೇಕ ಓರೆಕೋರೆಗಳು ತೋರಿ, ಪ್ರವಾಸಿಗರಿಗೆ ಬೇಸರವಾಗುತ್ತಿದೆ.

ಸರ್ಕಾರದಿಂದ ಬರುವ ತೀರಾ ಕನಿಷ್ಠ ಅನುದಾನದಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರಿಗೆ ಬೇಕಾಗುವಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಲು ದಸರಾ ಸಮಿತಿಯವರಿಂದ ಸಾಧ್ಯವಾಗುತ್ತಿಲ್ಲ. ಅನುದಾನವನ್ನು ಹೆಚ್ಚಿಸಿದರೆ ಅಥವಾ ಮೈಸೂರು ದಸರೆಗೆ ನೀಡುವಂತೆ ಧಾರಾಳವಾಗಿ ಅನುದಾನ ನೀಡಿದರೆ ಮಡಿಕೇರಿ ದಸರೆಗೆ ಹೊಸ ರೂಪ ಕೊಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ದಶಮಂಟಪಗಳ ಶೋಭಯಾತ್ರೆಯೂ ಅನೇಕ ಅವ್ಯವಸ್ಥೆಗಳಿಂದ ಕೂಡಿದೆ. ಎಲ್ಲಿ ಯಾವ ಮಂಟಪ ಬರುತ್ತಿದೆ, ಯಾವಾಗ ಪ್ರದರ್ಶನ ನೀಡಲಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲದೆ ಬಂದ ಅನೇಕ ಜನರು ಪರದಾಡಿದ್ದೂ ಹೌದು. ಅತ್ತಿಂದಿತ್ತ, ಇತ್ತಿಂದತ್ತ ಸುಮ್ಮನೇ ತಿರುಗಾಡಿದರು. ನಡೆದು, ನಡೆದು ಬಳಲಿ ಬೆಂಡಾಗಿ, ಅಂಗಡಿಗಳ ಮುಂದಿನ ಮೆಟ್ಟಿಲುಗಳ ಮೇಲೆ ಬಸವಳಿದು ಕೂತರು.

‘ಏನೆಂದರಿಯರು ಎಂತೆಂದರಿಯರು ಜನ ಮರುಳೋ ಜಾತ್ರೆ ಮರುಳೋ’ ಎಂಬ ಅಲ್ಲಮಪ್ರಭುಗಳ ವಚನ ನೆನಪಾಗುತ್ತಿದೆ. ವಚನದಲ್ಲೇ ಬರುವ ‘ಏನನ್ನೂ ಕಾಣದೆ ಲಯವಾಗಿ ಹೋದರು ಕಾಣಾ ಗುಹೇಶ್ವರ’ ಮಾತು ನಿಜ ಎನಿಸುತ್ತದೆ. ನನಗಂತೂ ಯಾವ ಮಂಟಪದ ಪ್ರದರ್ಶನವನ್ನೂ ಕಾಣಲು ಸಾಧ್ಯವಾಗಲೇ ಇಲ್ಲ. ಏನೂ ನೋಡದೇ, ಬರೀ ಜನಗಳಷ್ಟೇ ನೋಡುತ್ತಾ ನನ್ನೂರಿಗೆ ಹೊರಡುತ್ತಿದ್ದೇನೆ’ ಎಂದು ಬೇಸರದಿಂದ ರಾಮನಗರದ ಹಿರಿಯರಾದ ಚನ್ನೇಗೌಡ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇನ್ನೂ ಕೆಲವರಿಗೆ ಪ್ರದರ್ಶನ ನಡೆಯುವ ಮಂಟಪ ಕಣ್ಣಿಗೆ ಬೀಳುತ್ತಿದ್ದಂತೆ ಅವರ ಆನಂದ ಮೇರೆ ಮೀರುತ್ತಿತ್ತು. ಚಳಿಯಲ್ಲೂ ಬೆವರುತ್ತ ಗುಂಪಿನ ಮಧ್ಯೆ ನಿಂತು ಮಂಟಪಗಳು ಬಿತ್ತರಿಸುತ್ತಿದ್ದ ಅಪೂರ್ವ ದೃಶ್ಯಗಳನ್ನು ಕಣ್ತುಂಬಿಕೊಂಡರು. ಒಂದು ಅಥವಾ ಹೆಚ್ಚು ಎಂದರೆ 2 ಮಂಟಪಗಳ ಪ್ರದರ್ಶನವನ್ನಷ್ಟೇ ವೀಕ್ಷಿಸಲು ಬಹುತೇಕರಿಗೆ ಸಾಧ್ಯವಾಯಿತು.

ಎತ್ತರ ಕಡಿಮೆ ಇದ್ದವರು ಮೇಲಕ್ಕೆ ಎಷ್ಟು ಸಾಧ್ಯವೋ ಅಷ್ಟು ನೆಗೆಯುತ್ತ ಒಂದಷ್ಟು ಹೊತ್ತು ನೋಡಲು ಸರ್ಕಸ್ ಮಾಡಿದರು. ಕೈಗೂಡದೇ ಹೋದಾಗ ನಿರಾಸೆಯಿಂದ ಗುಂಪಿನಿಂದ ನಿರ್ಗಮಿಸಿದರು. ಮಕ್ಕಳು, ವಯೋವೃದ್ಧರಂತೂ ಏನನ್ನೂ ಕಾಣದೇ ತಮ್ಮ ತಮ್ಮ ಊರಿನತ್ತ ಹೊರಟರು.

ಈ ಕುರಿತು ಮಾತಿಗೆ ಸಿಕ್ಕ ಬೆಂಗಳೂರಿನ ಪ್ರವೀಣ್ ಅವರು ಈ ಮಂಟಪಗಳ ರಚನೆ ನಿಜಕ್ಕೂ ಅದ್ಭುತ. ಕನಿಷ್ಠ ಪಕ್ಷ ಇವುಗಳು ಯಾವ ರಸ್ತೆಯಲ್ಲಿ ಎಷ್ಟೊತ್ತಿಗೆ ಪ್ರದರ್ಶನ ನೀಡುತ್ತವೆ ಎಂಬ ಮಾಹಿತಿ ಫಲಕವನ್ನು ಎಲ್ಲಾದರೂ ಒಂದು ಕಡೆ ಹಾಕಿದ್ದರೆ ಸಾಕಿತ್ತು. ನಾವು ನಿಗದಿತ ಜಾಗದಲ್ಲಿ ನಿಂತು ನೋಡಬಹುದಿತ್ತು. ಈಗ ಸುಮ್ಮನೇ ಅಲೆದಾಡಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಸುಕಿನ 4 ಗಂಟೆಯ ಹೊತ್ತಿಗೆ ಸಿಕ್ಕಿದ ಮಂಡ್ಯದ ಆಯಿಷಾಬಾನು, ‘ನಾನು ಈ ಮಂಟಪಗಳ ಅದ್ಬುತ ಪ್ರದರ್ಶನ ನೋಡಲೆಂದೇ ಬಂದೆ. ಇಂತಹ ಮಂಟಪಗಳ ಪ್ರದರ್ಶನ ರಾಜ್ಯದ ಬೇರೆಲ್ಲೂ ಕಾಣಸಿಗದು. ಮಡಿಕೇರಿಯ ವಿವಿಧ ಮಂಟಪಗಳ ಸಮಿತಿಯವರು ನಿಜಕ್ಕೂ ಅಪರೂಪದ, ಅಪೂರ್ವವಾದ ಕಲೆಯನ್ನು ಈ ಮೂಲಕ ಅಭಿವ್ಯಕ್ತಿಸುತ್ತಿದ್ದಾರೆ. ಆದರೆ, ಇದನ್ನು ನೋಡಲು ನಮ್ಮಂತಹ ಮಹಿಳೆಯರಿಗೆ ಕಷ್ಟ ಸಾಧ್ಯವಾಗಿದೆ. ಕೋಟೆ ಗಣಪತಿಯ ಪ್ರದರ್ಶನದ ಕೆಲವು ತುಣುಕುಗಳನ್ನಷ್ಟೇ ಕಾಣಲು ಸಾಧ್ಯವಾಯಿತು’ ಎಂದರು.

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ರಾಜು ಪ್ರತಿಕ್ರಿಯಿಸಿ, ‘ದಶಮಂಟಪಗಳು ಸಾಗುವ ಮಾರ್ಗ, ಅವುಗಳು ತೋರುವ ಪ್ರದರ್ಶನದ ಸ್ಥಳದ ಮಾಹಿತಿಯನ್ನು ಕನಿಷ್ಠ ಪಕ್ಷ ಮಡಿಕೇರಿ ದಸರಾ ವೆಬ್‌ಸೈಟ್‌ನಲ್ಲಿ ಹಾಕಿದ್ದರೆ ನಮ್ಮಂತಹ ಹೊಸಬರಿಗೆ ಅನುಕೂಲವಾಗುತ್ತಿತ್ತು’ ಎಂದು ಹೇಳಿದರು.

ದಾರಿ ತೋರದ ವೆಬ್‌ಸೈಟ್

www.madikeridasara.com ಎಂಬ ವೆಬ್‌ಸೈಟ್‌ನಲ್ಲಿ ಹಲವು ಮಾಹಿತಿಗಳು ಇದ್ದರೂ ದಶಮಂಟಪಗಳ ಶೋಭಾಯಾತ್ರೆ ಸಂಬಂಧ ಪ್ರವಾಸಿಗರಿಗೆ ದಾರಿ ತೋರುವಂತಹ ಉಪಯುಕ್ತ ಮಾಹಿತಿಗಳು ಅದರಲ್ಲಿ ಇರಲಿಲ್ಲ. ದಸರಾ ದಶಮಂಟಪಗಳ ಮಾಹಿತಿಯೂ ಇದರಲ್ಲಿ ಸಮಗ್ರವಾಗಿ ಹಾಕಿರಲಿಲ್ಲ. ಕೇವಲ 8 ಮಂಟಪಗಳ ಮಾಹಿತಿಯಷ್ಟೇ ಇತ್ತು. ಇನ್ನು ಶೋಭಾಯಾತ್ರೆ ಸಾಗುವ ದಾರಿ, ಪ್ರದರ್ಶನ ನೀಡುವ ಸಮಯ ಯಾವುದೂ ಇದರಲ್ಲಿ ಇರಲಿಲ್ಲ. ಕಾತರತೆಯಿಂದ ಈ ವೆಬ್‌ಸೈಟ್ ನೋಡಿದ ಹೊರಜಿಲ್ಲೆಯ ಪ್ರವಾಸಿಗರಿಗೆ ಶೋಭಾಯಾತ್ರೆ ಸಂಬಂಧ ಯಾವುದೇ ಮಾಹಿತಿಯೂ ಸಿಗಲಿಲ್ಲ.

ಪೂರ್ವ ಸಿದ್ಧತೆಯೂ ಇಲ್ಲ!

ಚಿಕ್ಕ ನಗರಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ ಎಂದು ಗೊತ್ತಿದ್ದರೂ ಅವರನ್ನು ನಿಭಾಯಿಸುವ ಸಂಬಂಧ ಯಾವುದೇ ವೈಜ್ಞಾನಿಕ ಪೂರ್ವಸಿದ್ಧತೆಗಳನ್ನು ಯಾರೂ ಕೈಗೊಳ್ಳಲಿಲ್ಲ. ವಾಹನ ಸಂಚಾರ ನಿರ್ಬಂಧ, ವಾಹನ ನಿಲುಗಡೆ ತಾಣದ ನಿಗದಿಯಂತಹ ಕ್ರಮಗಳನ್ನು ಬಿಟ್ಟರೆ ಬೇರೆ ಯಾವುದೇ ಹೊಸ ವೈಜ್ಞಾನಿಕ ಕ್ರಮಗಳು ಕಾಣಲಿಲ್ಲ. ಇನ್ನು ಮುಂದೆಯಾದರೂ ಜನರನ್ನು ನಿಯಂತ್ರಿಸುವ, ಎಲ್ಲರಿಗೂ ದಶಮಂಟಪಗಳ ಪ್ರದರ್ಶನ ಕಾಣುವಂತೆ ಮಾಡುವ ವೈಜ್ಞಾನಿಕ ಕ್ರಮಗಳನ್ನು  ಕೈಗೊಳ್ಳಬೇಕು ಎಂಬ ಒತ್ತಾಯ ಪ್ರವಾಸಿಗರಿಂದ ವ್ಯಕ್ತವಾಯಿತು.

ಮಂಟಪಗಳಿಗೆ ಶ್ಲಾಘನೆ

ಮಡಿಕೇರಿ ದಸರೆಯ ದಶಮಂಟಪಗಳ ಶೋಭಾಯಾತ್ರೆಗೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದಿದ್ದ ಜನರು ಮಂಟಪಗಳ ಅದ್ಭುತ ರಚನೆ ಅವುಗಳ ವಿನ್ಯಾಸ ಕಥಾವಸ್ತು ಹಾಗೂ ಆಕೃತಿಗಳ ಚಲನವಲನಗಳನ್ನು ಶ್ಲಾಘಿಸಿದರು. ಒಂದೊಂದು ಮಂಟಪವೂ ಅದ್ಭುತವಾದ ದೃಶ್ಯಕಾವ್ಯದಂತೆ ಕಂಗೊಳಿಸಿತು. ನಿಜಕ್ಕೂ ಮಡಿಕೇರಿಯ ಜನರು ಪ್ರತಿಭಾವಂತ ಕಲಾವಿದರು ಎಂದು ಬಣ್ಣಿಸಿದರು.

ಮಡಿಕೇರಿ ದಸರಾ ಹೊರಗಡೆ ಆಕರ್ಷಕ. ಆದರೆ ಒಳಗೆ ಸಂಪೂರ್ಣ ಅವ್ಯವಸ್ಥೆಯ ಆಗರ. ಸ್ವಜನಪಕ್ಷಪಾತ ಇಲ್ಲಿ ಹೆಚ್ಚಿದೆ. ಇಲ್ಲಿಗೆ ಬಂದವರ ಹಿಂಸೆ ಎಂದು ಅನ್ನಿಸಿ ಹೊರಗೆ ಹೋಗಬೇಕು ಅನ್ನಿಸುತ್ತದೆ. ಪ್ರತಿಯೊಬ್ಬರಿಗೂ ದಸರೆಯ ನೈಜ ವೈಭವದ ದರ್ಶನವಾಗಬೇಕು. ದಶಮಂಟಪಗಳ ಶೋಭಾಯಾತ್ರೆ ಇತ್ತೀಚಿನ ದಿನಗಳಲ್ಲಿ ಮಂಟಪಗಳು ನೋಡುಗರಿಗೆ ಎಷ್ಟು ಸುರಕ್ಷಿತ ಎಂಬ ಭಾವನೆಯನ್ನು ಇತ್ತೀಚೆಗೆ ನಡೆದ ಘಟನೆ ಉಂಟು ಮಾಡಿದೆ. ಈ ಅವ್ಯವಸ್ಥೆಗಳನ್ನು ಸರಿಪಡಿಸಬೇಕು.
ಅಚ್ಚಂಡೀರ ಪವನ್ ಪೆಮ್ಮಯ್ಯ, ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ
ಅನುದಾನದ ಕೊರತೆಯಿಂದ ನಮಗೆ ಎಲ್ಲವನ್ನೂ ಸುಧಾರಿಸಿಕೊಂಡು ಹೋಗುವುದು ಕಷ್ಟ. ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಮುಂಚಿತವಾಗಿಯೇ ಅನುದಾನ ಬಿಡುಗಡೆ ಮಾಡಿದರೆ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಬಹುದು.
ಅನಿತಾ ಪೂವಯ್ಯ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ
6 ತಿಂಗಳಿಗೂ ಮುನ್ನವೇ ಸಿದ್ಧತೆ ಆಗಬೇಕು. ಎಲ್ಲವೂ ಕೊನೆ ಕ್ಷಣದ ಸಿದ್ಧತೆಯಾಗುತ್ತಿದೆ. ಕಲಾವಿದರ ಆಯ್ಕೆ ಸಂಬಂಧ ಅತೀವ ಒತ್ತಡ ಬೀಳುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಕಲಾವಿದರ ಪೂರ್ವಭಾವಿ ಪ್ರದರ್ಶನದ ಮೂಲಕವೇ ಆಯ್ಕೆ ಮಾಡಬೇಕಿದೆ. ಹೆಚ್ಚಿನ ಅನುದಾನ ಬೇಕಿದೆ.
ಎಚ್.ಟಿ.ಅನಿಲ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ
ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ವೇಳೆ ಮಂಟಪ ಇರಿಸಿದ್ದ ಟ್ರಾಕ್ಟರ್ ಬುಧವಾರ ನಸುಕಿನಲ್ಲಿ ಮುಗುಚಿರುವುದು
ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ವೇಳೆ ಮಂಟಪ ಇರಿಸಿದ್ದ ಟ್ರಾಕ್ಟರ್ ಬುಧವಾರ ನಸುಕಿನಲ್ಲಿ ಮುಗುಚಿರುವುದು
ಮಡಿಕೇರಿಯ ಪೇಟೆ ಶ್ರೀರಾಮ ಮಂದಿರದ ಮಂಟಪವು ‘ವೈಕುಂಠ ದರ್ಶನ’ ಕಥಾವಸ್ತುವನ್ನು ಪ್ರದರ್ಶಿಸುತ್ತ ‘ಬೆಳಕಿನ ದಸರೆ’ಯಲ್ಲಿ ಸಾಗುವ ಮೂಲಕ ದಶಮಂಟಪಗಳ ಶೋಭಾಯಾತ್ರೆ ಮಂಗಳವಾರ ರಾತ್ರಿ ಆರಂಭಗೊಂಡಿತು
ಮಡಿಕೇರಿಯ ಪೇಟೆ ಶ್ರೀರಾಮ ಮಂದಿರದ ಮಂಟಪವು ‘ವೈಕುಂಠ ದರ್ಶನ’ ಕಥಾವಸ್ತುವನ್ನು ಪ್ರದರ್ಶಿಸುತ್ತ ‘ಬೆಳಕಿನ ದಸರೆ’ಯಲ್ಲಿ ಸಾಗುವ ಮೂಲಕ ದಶಮಂಟಪಗಳ ಶೋಭಾಯಾತ್ರೆ ಮಂಗಳವಾರ ರಾತ್ರಿ ಆರಂಭಗೊಂಡಿತು
ಮಡಿಕೇರಿಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನವರೆಗೂ ನಡೆದ ದಸರಾ ದಶಮಂಟಪಗಳ ಶೋಭಾಯಾತ್ರೆಯನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು.
ಮಡಿಕೇರಿಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನವರೆಗೂ ನಡೆದ ದಸರಾ ದಶಮಂಟಪಗಳ ಶೋಭಾಯಾತ್ರೆಯನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು.
ದಸರೆ ಶೋಭಾಯಾತ್ರೆಯಲ್ಲಿ ಕಂಚಿ ಕಾಮಾಕ್ಷಿಯಮ್ಮ ಮಂಟಪ
ದಸರೆ ಶೋಭಾಯಾತ್ರೆಯಲ್ಲಿ ಕಂಚಿ ಕಾಮಾಕ್ಷಿಯಮ್ಮ ಮಂಟಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT