ಭಾನುವಾರ, ಆಗಸ್ಟ್ 1, 2021
27 °C
ಗಾಳಿಬೀಡು ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಭೇಟಿ, ಮನೋಸ್ಥೈರ್ಯ ತುಂಬಿದ ಡಿ.ಸಿ

ಮಡಿಕೇರಿ: ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅವ್ಯವಸ್ಥೆ, ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊರೊನಾ ಲಕ್ಷಣವಿರುವ ಹಾಗೂ ಸೋಂಕು ತಗುಲಿರುವ ರೋಗಿಗಳ ಆರೈಕೆಗೆ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಸಮೀಪದ ಜವಾಹರ್ ನವೋದಯ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿದ್ದು ಅಲ್ಲಿ ಅವ್ಯವಸ್ಥೆಯಿದೆ ಎಂಬ ಆರೋಪ ಕೇಳಿಬಂದಿದೆ.

ಅಲ್ಲಿ ಯಾವುದೇ ಸೂಕ್ತ ವ್ಯವಸ್ಥೆಯಿಲ್ಲವೆಂದು ರೋಗಿಗಳು ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಕೇಂದ್ರದಲ್ಲಿ ಕುಡಿಯುವ ಬಿಸಿ ನೀರಿಗೂ ಸಮಸ್ಯೆಯಿದೆ. ಬಿಸಿ ನೀರು ಸಿಗದೇ ಓಪನ್ ಕಾಯಿಲ್ ಹೀಟರ್‌ನಲ್ಲಿ ಸೋಂಕಿತರು ನೀರನ್ನು ಕಾಯಿಸಿಕೊಳ್ಳಬೇಕಿದೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ರೋಗಿಗಳೇ ಕಸ ಗುಡಿಸಿ, ನೆಲ ಒರೆಸಬೇಕಿದೆ. ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕೆಲವು ಕೊಠಡಿಗಳು ಸೋರುತ್ತಿದೆ. ಶುಚಿತ್ವವನ್ನೂ ಕಾಪಾಡುವುದಿಲ್ಲ ಎಂದು ಇಲ್ಲಿನ ಅವ್ಯವಸ್ಥೆ ಬಗ್ಗೆ ವಿಡಿಯೊ ಮಾಡಿ ಗುರುವಾರ ಬೆಳಿಗ್ಗೆ ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.‌ ಬಳಿಕ ಎಚ್ಚೆತ್ತ ಜಿಲ್ಲಾಡಳಿತವು ಕೆಲವು ವ್ಯವಸ್ಥೆ ಮಾಡಿದೆ.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರೇ ಪಿ.ಪಿ.ಇ ಕಿಟ್‌ ಧರಿಸಿ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸುವ ಕೆಲಸ ಮಾಡಿದರು.

ಅವರೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಕೋವಿಡ್ ಕೇರ್ ಸೆಂಟರ್ ನೋಡಲ್ ಅಧಿಕಾರಿ), ಮಡಿಕೇರಿ ತಾಲ್ಲೂಕಿನ ತಹಶೀಲ್ದಾರ್, ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಇದ್ದರು.

ಸೆಂಟರ್‌ನಲ್ಲಿರುವ ಕೋವಿಡ್ ಸೋಂಕಿತರೊಂದಿಗೂ ಸಹ ಸಮಾಲೋಚನೆ ನಡೆಸಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದರು. 

ಜಿಲ್ಲಾಡಳಿತ ಕೈಗೊಂಡ ಕ್ರಮಗಳು ಏನೇನು?

ಕೋವಿಡ್ ಕೇರ್ ಸೆಂಟರ್‌ನ ದ್ವಾರದಲ್ಲಿ ದಿನದ 24 ಗಂಟೆಗಳಲ್ಲಿಯೂ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯು ನಿಗದಿಪಡಿಸಿರುವ ಮೆನು ಪ್ರಕಾರವೇ ಕೋವಿಡ್ ಸೋಂಕಿತರಿಗೆ ಆಹಾರವನ್ನು ಸಕಾಲದಲ್ಲಿ ಪೂರೈಸಲಾಗುತ್ತಿದೆ. ಆರೋಗ್ಯ ಇಲಾಖೆಯು ನಿಗದಿಪಡಿಸಿರುವ ಚಿಕಿತ್ಸಾ ಪದ್ಧತಿಯಂತೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಗಲು ವೇಳೆಯಲ್ಲಿ ಮೂವರು ನರ್ಸ್ ಮತ್ತು ರಾತ್ರಿ ವೇಳೆಯಲ್ಲಿ ಇಬ್ಬರು ನರ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ವಾಸಕೋಶ ತಜ್ಞರ ಸಲಹೆಯಂತೆ ಒಬ್ಬ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ಕೋವಿಡ್ ಸೋಂಕಿತರಿಗೆ ಹಾಸಿಗೆ, ಬೆಡ್ ಶೀಟ್, ಹೊದಿಕೆ, ಬಿಸಿನೀರಿಗಾಗಿ ಕೆಟಲ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ, ವಾಟರ್ ಹೀಟರ್ ಕಾಯಲ್ ಒದಗಿಸಲಾಗಿದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯೊಂದಿಗೆ ವಾರ್ಡ್ ನೀಡಲಾಗಿದೆ. ಇಲ್ಲಿಯವರೆಗೆ ಮಹಿಳಾ ವಾರ್ಡ್‌ಗಳಲ್ಲಿ ಸೋಂಕಿತರು ಇರುವುದಿಲ್ಲ. ಪುರುಷರ ವಾರ್ಡ್‌ನಲ್ಲಿ 7 ಜನರು ಮಾತ್ರ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಮಹಿಳಾ ಸೋಂಕಿತರನ್ನು ಈ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಿದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಈ ಸೆಂಟರ್‌ನಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಲಾಕ್‌ನಲ್ಲಿ ಶೌಚಾಲಯ ಸೌಲಭ್ಯದೊಂದಿಗೆ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್‌ನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಎಲ್ಲರೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ನೀಡಲಾಗುತ್ತಿರುವ ಆಹಾರ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲದೇ ಸದರಿ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಮತ್ತು ನರ್ಸ್ ಸೇವೆಗೆ ಕೃತಜ್ಞತೆ ಸಲ್ಲಿಸಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.  

***

ಕೋವಿಡ್ ಸಂಬಂಧ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತದಿಂದ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದು ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು

– ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು