ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗುತ್ತಿರುವ ಅರೇಬಿಕಾ ಕಾಫಿ ಗಿಡಗಳು: ಬೆಳೆಗಾರರ ಗೋಳು ಕೇಳುವವರಿಲ್ಲ...!

Published 25 ಮಾರ್ಚ್ 2024, 7:24 IST
Last Updated 25 ಮಾರ್ಚ್ 2024, 7:24 IST
ಅಕ್ಷರ ಗಾತ್ರ

ಮಡಿಕೇರಿ: 2018 ಮತ್ತು 2019ರಲ್ಲಿ ಕಾಫಿ ಬೆಳೆಗಾರರು ಅತಿವೃಷ್ಟಿಯಿಂದ ಅಪಾರ ನಷ್ಟ ಅನುಭವಿಸಿದ್ದರೆ, ಆ ನಂತರ ಈಗ ಅನಾವೃಷ್ಟಿಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಪ‍್ರತಿ ವರ್ಷವೂ ಕನಿಷ್ಠ ತಿಂಗಳಿಗೆ ಒಮ್ಮೆಯೋ, ಎರಡು ಬಾರಿಯೋ ಮಳೆ ಜಿಲ್ಲೆಯಲ್ಲಿ ಬರುತ್ತಿತ್ತು. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನವರೆಗೂ ಜೋರು ಮಳೆ ಸುರಿಯುತ್ತಿತ್ತು. ಇದರಿಂದ ಬೇಸಿಗೆ ಬಂದರೂ ಕೆರೆ ಕಟ್ಟೆಗಳು ಒಣಗುತ್ತಿರಲಿಲ್ಲ. ಅಂತರ್ಜಲ ಬರಿದಾಗುತ್ತಿರಲಿಲ್ಲ. ಕಾವೇರಿ ಸೇರಿದಂತೆ ಇತರೆ ನದಿಗಳು, ಹೊಳೆಗಳ ಹರಿವು ನಿಲ್ಲುತ್ತಿರಲಿಲ್ಲ. ಆದರೆ, ಈಗ ಕೆರೆಕಟ್ಟೆಗಳು ಒಣಗಿ, ಅಂತರ್ಜಲ ಬರಿದಾಗುತ್ತಿದ್ದು, ನದಿ, ಹೊಳೆಗಳು ಹರಿವನ್ನು ನಿಲ್ಲಿಸಿವೆ. ಸಣ್ಣದಾಗಿ ಹರಿಯುತ್ತಿದ್ದ ತೋಡುಗಳಲ್ಲೂ ಈಗ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಮೊದಲೇ ತೋಟಗಳ ನಿರ್ವಹಣೆ ದುಬಾರಿಯಾಗಿರುವ ಹೊತ್ತಿನಲ್ಲಿ ಈಗ ಬಂದಿರುವ ಭೀಕರ ಬರದಿಂದ ನಿರ್ವಹಣೆ ಮತ್ತೂ ದುಬಾರಿಯಾಗಿದೆ. ಈಗ ಬೆಳೆಗಾರರ ಸ್ಥಿತಿ ಹೇಗಾಗಿದೆ ಎಂದರೆ, ಉತ್ತಮ ಫಸಲಿಗಾಗಿ ಅಲ್ಲ, ತೋಟದಲ್ಲಿರುವ ಗಿಡಗಳನ್ನು ಉಳಿಸಿಕೊಳ್ಳುವುದಕ್ಕೆ ನೀರು ಹಾಯಿಸುವಂತಾಗಿದೆ. ಇದಕ್ಕೂ ಪರದಾಡುವ ಸನ್ನಿವೇಶ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

ಈಗ ನದಿ, ಹೊಳೆಗಳಿಂದ ನೀರು ತೆಗೆಯಬಾರದು ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಹುತೇಕ ಎಲ್ಲ ಬೆಳೆಗಾರರೂ ಹೇಳುತ್ತಾರೆ. ವರ್ಷಾನುಗಟ್ಟಲೆ ಜತನದಿಂದ ಕಾಯ್ದುಕೊಂಡ ಕಾಫಿ, ಕಾಳು ಮೆಣಸು ಗಿಡಗಳನ್ನು ಜೀವಂತವಾಗಿ ಉಳಿಸಿಕೊಳ್ಳಲು ನೀರು ಬೇಕೇ ಬೇಕು ಎನ್ನಿಸಿದೆ. ನದಿ, ತೊರೆಗಳಿಂದ ನೀರು ತೆಗೆಯದೇ ಹೋದರೆ ಪರ್ಯಾಯ ಮಾರ್ಗವನ್ನಾದರೂ ತಿಳಿಸಿ ಎಂದು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಜಿಲ್ಲಾಡಳಿತವಿರಲಿ, ಕೃಷಿ, ತೋಟಗಾರಿಕಾ ತಜ್ಞರೂ ನಿರುತ್ತರರಾಗಿದ್ದಾರೆ.

ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು ಸೇರಿದಂತೆ ಎಲ್ಲದರ ಬೆಲೆ ದುಪ್ಪಟ್ಟಾಗಿದೆ.ಇನ್ನೊಂದೆಡೆ, ಕಾರ್ಮಿಕರ ಕೊರತೆಯಿಂದ ವೇತನವೂ ಹೆಚ್ಚಾಗಿದ್ದು, ಬೆಳೆಗಾರರಿಗೆ ಲಾಭ ನೋಡುವುದೇ ಕಷ್ಟವಾಗಿದೆ. ಗ್ರಾಮೀಣ ಪ್ರದೇಶಕ್ಕೆ ಹೋದಲ್ಲಿ ಸಾಕಷ್ಟು ಕಡೆ ಕಾಫಿ ತೋಟಗಳು ಪಾಳು ಬಿದ್ದಿರುವುದನ್ನು ನೋಡಬಹುದು. ಮತ್ತೊಂದೆಡೆ, ಕಾಫಿಗೆ ಬೆಲೆ ಇದ್ದರೂ ಫಸಲು ಇಲ್ಲ. ಕಾಳುಮೆಣಸು ಫಸಲು ಇದ್ದರೂ ತೂಕ ಇಲ್ಲ ಮತ್ತು ಬೆಲೆಯೂ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಕಾಫಿ ಬೆಳೆಗಾರರು ನಿರಂತರ ಒತ್ತಡದಲ್ಲಿಯೆ ಜೀವನ ನಡೆಸುವಂತಾಗಿದೆ.

ಮತ್ತೊಂದೆಡೆ, ಕೃಷಿಕರು ಕಾಡು ಪ್ರಾಣಿಗಳಿಂದ ಫಸಲು ಉಳಿಸಿಕೊಳ್ಳಲು ಇನ್ನಿಲ್ಲದ ಹೋರಾಟ ಮಾಡಬೇಕಾಗಿದೆ. ಅರಣ್ಯದಂಚಿನ ಕೃಷಿ ಜಮೀನು ಮಾತ್ರ ಕಾಡುಪ್ರಾಣಿಗಳ ಹಾವಳಿಗೆ ಸಿಲುಕುತಿದ್ದವು. ಆದರೆ, ಇಂದು ಮನೆ ಬಾಗಿಲಿನ ತನಕ ಪ್ರಾಣಿಗಳು ಬಂದು ತಲುಪಿವೆ. ಕಾಡಾನೆ, ಕಾಡುಹಂದಿ, ಕಾಡೆಮ್ಮೆ, ಜಿಂಕೆ, ಮುಳ್ಳು ಹಂದಿ ಸೇರಿದಂತೆ ಹಲವು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇವುಗಳೊಂದಿಗೆ ನವಿಲುಗಳ ಸಂಖ್ಯೆ ಮಿತಿಮಿರುತಿದ್ದು ತಮ್ಮ ಜೀವದೊಂದಿಗೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ.

ನಿರ್ವಹಣೆ: ಕೆ.ಎಸ್.ಗಿರೀಶ

ಸೋಮವಾರಪೇಟೆ ತಾಲ್ಲೂಕಿನ ಕಿತ್ತೂರು ಗ್ರಾಮದ ತೋಟದಲ್ಲಿ ರೋಬಷ್ಟ ಕಾಫಿಗೆ ನೀರು ಹಾಯಿಸಿ ಅರಳಿರುವ ಹೂನಲ್ಲಿ ಮಕರಂದ ಸಂಗ್ರಹಿಸುತ್ತಿರುವ ಜೇನು ಹುಳು.
ಸೋಮವಾರಪೇಟೆ ತಾಲ್ಲೂಕಿನ ಕಿತ್ತೂರು ಗ್ರಾಮದ ತೋಟದಲ್ಲಿ ರೋಬಷ್ಟ ಕಾಫಿಗೆ ನೀರು ಹಾಯಿಸಿ ಅರಳಿರುವ ಹೂನಲ್ಲಿ ಮಕರಂದ ಸಂಗ್ರಹಿಸುತ್ತಿರುವ ಜೇನು ಹುಳು.
ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಅರೇಬಿಕಾ ಕಾಫಿ ಗಿಡಗಳು.
ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಅರೇಬಿಕಾ ಕಾಫಿ ಗಿಡಗಳು.
ನೀರು ಇರುವ ಕಾಫಿ ಬೆಳೆಗಾರರು ತುಂತುರು ನೀರಾವರಿ ವ್ಯವಸ್ಥೆ ಮೂಲಕ  ಕಾಫಿ ತೋಟಕ್ಕೆ ನೀರು ಹಾಯಿಸುತಿರುವುದು.
ನೀರು ಇರುವ ಕಾಫಿ ಬೆಳೆಗಾರರು ತುಂತುರು ನೀರಾವರಿ ವ್ಯವಸ್ಥೆ ಮೂಲಕ  ಕಾಫಿ ತೋಟಕ್ಕೆ ನೀರು ಹಾಯಿಸುತಿರುವುದು.
ಒಂದೆಡೆ ಅರಳಿದ ಹೂಗಳು ಮತ್ತೊಂದೆಡೆ ಒಣಗಿದ ತೋಟಗಳು!
ಸೋಮವಾರಪೇಟೆ: ಒಂದೆಡೆ ನೀರಿನ ವ್ಯವಸ್ಥೆ ಇರುವ ಕಾಫಿ ಬೆಳೆಗಾರರ ತೋಟಕ್ಕೆ ನೀರು ಹಾಯಿಸುವ ಮೂಲಕ ಹೂ ಅರಳಿಸಿ ಮಂದಹಾಸ ಬೀರುತ್ತಿದ್ದರೆ ಮತ್ತೊಂದೆಡೆ ನೀರಿನ ವ್ಯವಸ್ಥೆ ಇಲ್ಲದ ಕಾಫಿ ಬೆಳೆಗಾರರು ಬಾಡಿದ ಮೊಗದಲ್ಲಿ ಆಕಾಶದತ್ತ ಮಳೆಗಾಗಿ ಮುಖ ಮಾಡಿದ್ದಾರೆ. ಬಿಸಿಲಿನ ತಾಪಕ್ಕೆ ಕಾಫಿ ಗಿಡಗಳು ಒಣಗಿಹೋಗುತ್ತಿದ್ದು ಫಸಲು ನಷ್ಟವಾಗುವುದಿರಲಿ ತೋಟವನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ತಾಲ್ಲೂಕಿನಲ್ಲಿ ಹೆಚ್ಚಿನ ಕಾಫಿ ತೋಟಗಳು ಅರೇಬಿಕಾ ಕಾಫಿಯದ್ದಾಗಿದೆ. ಇದಕ್ಕೆ ಮಳೆ ಹೆಚ್ಚಾದರೂ ಕಷ್ಟ ಕಡಿಮೆಯಾದರೂ ನಷ್ಟ ಎನ್ನುವಂತಾಗಿದೆ. ಮೊದಲೇ ಮಳೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಬಿಸಿಲಿನ ತಾಪವೂ ಹೆಚ್ಚಾಗಿದ್ದು ಕಾಫಿ ಗಿಡಗಳು ಒಣಗುತ್ತಿರುವುದು ತಾಲ್ಲೂಕಿನ ಹಲವೆಡೆಗಳಲ್ಲಿ ಕಾಣಬಹುದು. ಮತ್ತೊಮ್ಮೆ ನೂತನವಾಗಿ ಗಿಡ ನೆಟ್ಟು ಫಸಲು ನಿರೀಕ್ಷೆ ಮಾಡಬೇಕಾಗಿದೆ. ನೀರಿನ ವ್ಯವಸ್ಥೆ ಇರುವ ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ನೀರು ಹಾಯಿಸಿಕೊಂಡು ಹೂ ಅರಳುವಂತೆ ಮಾಡಿದ್ದಾರೆ. ಕೆಲವರು ಈಗಾಗಲೇ ಕಾಫಿಗೆ ಬ್ಯಾಕಿಂಗ್ ನೀರು ಹಾಯಿಸುತ್ತಿದ್ದಾರೆ. ರೋಬಷ್ಟ ಕಾಫಿಗೆ ಫೆಬ್ರುವರಿಯಲ್ಲಿ ನೀರು ಹಾಯಿಸಿ ಹೂ ಅರಳುವಂತೆ ಕಾಫಿ ಬೆಳೆಗಾರರು ಮಾಡಬೇಕಿದೆ. ತಾಲ್ಲೂಕಿನಲ್ಲಿ 28590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22900 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಕಾಫಿ ಮಂಡಳಿಯ ಪ್ರಕಾರ ತಾಲ್ಲೂಕಿನಲ್ಲಿ ನಾಲ್ಕು ವಿಭಾಗಗಳಿದ್ದು ಸೋಮವಾರಪೇಟೆಯಲ್ಲಿ 6900 ಹೆಕ್ಟೇರ್‌ನಲ್ಲಿ ಅರೇಬಿಕಾ 400 ಹೆಕ್ಟೇರ್‌ನಲ್ಲಿ ರೋಬಸ್ಟಾ ಸೇರಿದಂತೆ ಒಟ್ಟು 7300 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಶನಿವಾರಸಂತೆಯಲ್ಲಿ 6740 ಹೆಕ್ಟೇರ್‌ನಲ್ಲಿ ಅರೇಬಿಕಾ 270 ಹೆಕ್ಟೇರ್‌ನಲ್ಲಿ ರೋಬಸ್ಟಾ ಸೇರಿದಂತೆ ಒಟ್ಟು 7010 ಹಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗಿದೆ. ಸುಂಟಿಕೊಪ್ಪದಲ್ಲಿ 6660 ಹೆಕ್ಟೇರ್‌ನಲ್ಲಿ ಅರೇಬಿಕಾ ಮತ್ತು 3820 ಹೆಕ್ಟೇರ್‌ನಲ್ಲಿ ರೋಬಸ್ಟಾ ಮಾದಾಪುರದಲ್ಲಿ 2600 ಹೆಕ್ಟೇರ್‌ನಲ್ಲಿ ಅರೇಬಿಕಾ ಮತ್ತು 1200 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ‘ಹವಾಮಾನದೊಂದಿಗೆ ಕಾಫಿ ಬೆಳೆಗಾರರು ಜೂಜು ಆಡುವಂತೆ ಆಗಿದೆ. ಮಳೆ ಸರಿಯಾಗಿ ಆದಲ್ಲಿ ಲಾಭ ತಪ್ಪಿದಲ್ಲಿ ವರ್ಷಪೂರ್ತಿ ನಷ್ಟವಾಗುತ್ತದೆ. ಇದು ಕಾಫಿ ಬೆಳೆಗಾರರ ಸ್ಥಿತಿಯಾಗಿದ್ದು ವಾರ್ಷಿಕ ಬೆಳೆಯಾಗಿರುವುದರಿಂದ ಇಲ್ಲಿ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಿಲ್ಲ. ನಿರಂತರ ನಷ್ಟ ಅನುಭವಿಸುತ್ತಿರುವ ಹೆಚ್ಚಿನ ಕಾಫಿ ಬೆಳೆಗಾರರು ಕಾಫಿ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ’ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ತಿಳಿಸಿದರು. ಡಿ.ಪಿ.ಲೋಕೇಶ್

ಜನಾಭಿಪ್ರಾಯ

ಪರ್ಯಾಯ ಬೆಳೆ ಇಲ್ಲಿ ಕಷ್ಟ ಕೊಡಗಿನಲ್ಲಿ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಿಲ್ಲ. ನಿರಂತರ ನಷ್ಟ ಅನುಭವಿಸುತ್ತಿರುವ ಹೆಚ್ಚಿನ ಕಾಫಿ ಬೆಳೆಗಾರರು ಕಾಫಿ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಕೂಡಲೇ ಬೆಳೆಗಾರರ ಪರಿಸ್ಥಿತಿ ಅರಿತು ಸರ್ಕಾರ ನೆರವು ನೀಡಬೇಕು. ಇಲ್ಲಿ ಕಾಫಿ ಕಾಳುಮೆಣಸು ಗಿಡಗಳನ್ನು ಉಳಿಸಿಕೊಳ್ಳಲು ದಾರಿ ತೋರಬೇಕು  

-ಮೋಹನ್ ಬೋಪಣ್ಣ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ.

ಸರ್ಕಾರ ಬೆಳೆಗಾರರ ಬೆನ್ನಿಗೆ ನಿಲ್ಲಬೇಕಿದೆ ಅರೇಬಿಕಾ ಕಾಫಿ ಉಳಿಸಿ ಬೆಳೆಸಬೇಕೆಂದರೆ ಅವರ ಬೆನ್ನಿಗೆ ಸರ್ಕಾರ ನಿಲ್ಲಬೇಕಿದೆ. ತಪ್ಪಿದಲ್ಲಿ ಕೆಲವೇ ವರ್ಷಗಳಲ್ಲಿ ಅರೇಬಿಕಾ ಕಾಫಿ ನಾಶವಾಗುವುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಖರ್ಚು ಹಾಗೂ ಕೆಲಸ ಬಯಸುವ ಕಾಫಿ ಅದಕ್ಕೆ ಹಾಕಿದ ಬಂಡವಾಳವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ

-ಕಿತ್ತೂರು ಲಕ್ಷ್ಮೀಶೆಟ್ಟಿ ಕಾಫಿ ಬೆಳೆಗಾರ.

ಈಗಲಾದರೂ ವೈಜ್ಞಾನಿಕವಾಗಿ ಚೆಕ್‌ಡ್ಯಾಂ ನಿರ್ಮಿಸಿ ನೀರಿನ ಅಭಾವಕ್ಕೆ ಈಗ ಸಭೆ ನಡೆಸಿ ಅದನ್ನು ಸುಧಾರಿಸುವುದಕ್ಕೆ ಆಗುವುದಿಲ್ಲ. ಕುಡಿಯುವ ನೀರಿಗೆ ಹನಿಗಳ ಲೆಕ್ಕದಲ್ಲಿ ಮಾತ್ರ ಪೂರೈಸುವಂತಹ ಸ್ಥಿತಿ ಇದೆ. ಕಳೆದ ವರ್ಷವಿಡೀ ಪ್ರತಿ ತಿಂಗಳೂ ಮಳೆ ಕಡಿಮೆಯಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ಲಭಿಸುತ್ತಿತ್ತು. ಆದರೆ ಆಗಲೇ ಇವರು ಚೆಕ್‌ಡ್ಯಾಂ ಕಟ್ಟಿದ್ದರೆ ಇಂದು ನೀರು ಹಿಂಗಿ ಅಂತರ್ಜಲ ಮಟ್ಟ ಏರಿಕೆಯಾಗುತ್ತಿತ್ತು. ಈಗ ಅದು ಯಾವುದನ್ನೂ ಮಾಡದೇ ಇರುವುದರಿಂದಲೇ ಕೊಳವೆಬಾವಿಗಳು ಕೆರೆಕಟ್ಟೆಗಳು ಒಣಗುತ್ತಿವೆ. ಇದು ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯ. ಈಗಲಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಚೆಕ್‌ಡ್ಯಾಂ ಕಟ್ಟಬೇಕು.

- ಮನು ಸೋಮಯ್ಯ ರಾಜ್ಯ ರೈತ ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ.

ಕಾಫಿ ಮಂಡಳಿ ಏನು ಹೇಳುತ್ತದೆ?
ಕಾಫಿ ಮಂಡಳಿಯಿಂದ ಹಲವು ಕಾರ್ಯಕ್ರಮ ಕಾಫಿ ಮಂಡಳಿಯು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ತೋಟದೊಳಗೆ ಕೆರೆಗಳ ನಿರ್ಮಾಣ ತುಂತುರು ನೀರಾವರಿ ವ್ಯವಸ್ಥೆಗಳಿಗೆ ಸಹಾಯಧನ ನೀಡುತ್ತಿದೆ. 2023–24ರಲ್ಲಿ ಮಂಡಳಿಗೆ ಅರ್ಜಿ ಸಲ್ಲಿಸಿದ ಬಹುತೇಕ ಬೆಳೆಗಾರರಿಗೆ ಸಹಾಯಧನ ನೀಡಲಾಗಿದೆ. ಇನ್ನು ಜಾಗತಿಕ ತಾಪಮಾನ ಏರಿಕೆಗೆ ನಾವು ಹೊಂದಾಣಿಕೆ ಮಾಡಿಕೊಳ್ಳಲೇಬೇಕಿದೆ ಇದನ್ನು ಬಿಟ್ಟರೆ ಸದ್ಯಕ್ಕೆ ತುರ್ತು ಪರಿಹಾರ ಕಷ್ಟ. ಹಾಗಾಗಿ ಪ್ರತಿ ಬೆಳೆಗಾರರು ಬೇಸಿಗೆಯಲ್ಲಿ ಎಷ್ಟು ನೀರು ಸಂಗ್ರಹಿಸಬೇಕು ಎಷ್ಟು ನೀರನ್ನು ತಮ್ಮ ತೋಟಗಳಿಗೆ ಯಾವ ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಾರ್ಚ್ 26ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರಸ್ತುತ ಬೇಸಿಗೆಯಲ್ಲಿ ಕಾಫಿ ತೋಟಗಳ  ನಿರ್ವಹಣೆ ಕುರಿತು ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದೊಂದಿಗೆ ವೆಬಿನಾರ್ ಏರ್ಪಡಿಸಲಾಗಿದೆ. ಬೆಳೆಗಾರರು ಇದರ ಲಾಭ ಪಡೆಯಬೇಕು -ಎಂ.ಜೆ.ದಿನೇಶ್‌ ಕಾಫಿ ಮಂಡಳಿ ಅಧ್ಯಕ್ಷ.
‘ವೆಬಿನಾರ್‌’ನಲ್ಲಿ ಎಲ್ಲರೂ ಭಾಗವಹಿಸಿ
ಅರೇಬಿಕಾ ಕಾಫಿ ಬೆಳೆಗಾರರು ಈಗ ಮರಗಸಿ ಮಾಡುವುದು ಬೇಡ. ಈಗಲೇ ಬಿಳಿಕಾಂಡ ಕೊರಕ ಹುಳು ಬಾಧೆ ಕಂಡು ಬಂದ ಗಿಡವನ್ನು ಕಿತ್ತು ಹಾಕಬೇಕು. ರೊಬೊಸ್ಟಾದವರು ನೀರಿದ್ದವರಿಗೆ ಹೂವಾಗಿದೆ. ನೀರಿದೆ ಎಂದು ಬೇಕಾಬಿಟ್ಟಿ ಬಳಸಬಾರದು. ನೀರಿನ ಸೌಕರ್ಯ ಇಲ್ಲದವರು ಮಳೆಗಾಗಿ ಕಾಯಲೇಬೇಕಿದೆ. ಮಾರ್ಚ್ 26ರಂದು ನಡೆಯಲಿರುವ ವೆಬಿನಾರ್‌ನಲ್ಲಿ ಎಲ್ಲರೂ ಭಾಗವಹಿಸಿ. ವೆಬಿನಾರ್ ಲಿಂಕ್; https://coffeeboard.webex.com/coffeeboard/j.php?MTID=m1b76bd618ed142a78393d637acad0d76 – ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT