ಮಡಿಕೇರಿ: ಅನುದಾನ ಮೊದಲೇ ಸಿಗಬೇಕು, ರಸ್ತೆಗಳ ದುರಸ್ತಿಯಾಗಬೇಕು, ಪೊಲೀಸರು ಅಂತಿಮ ಹಂತದಲ್ಲಿ ಹೊಸ ನಿಯಮಗಳನ್ನು ಹೇರುವುದು ಬೇಡ, ಎಂಬಿತ್ಯಾದಿ ಒತ್ತಾಯಗಳು ಇಲ್ಲಿ ಗುರುವಾರ ನಡೆದ ದಸರಾ ದಶಮಂಟಪ ಸಮಿತಿ ಸಭೆಯಲ್ಲಿ ಕೇಳಿ ಬಂದವು.
ಮಾತನಾಡಿದ ಬಹಳಷ್ಟು ಮಂದಿ, ಪೊಲೀಸರು ಹೇರುವ ಬಿಗಿ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲ, ರಸ್ತೆಗಳ ದುರಾವಸ್ಥೆಯ ಬಗ್ಗೆಯೂ ಕಿಡಿಕಾರಿದರು.
ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಈ ಅನುದಾನವನ್ನು ಮೊದಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
‘ದಸರಾ ಸಮಿತಿಗೆ ನಗರಸಭೆಯ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಆದರೆ, ಈಗ ನಗರಸಭೆ ಅಧ್ಯಕ್ಷ ಸ್ಥಾನ ಖಾಲಿ ಇದೆ. ಹಾಗಾಗಿ, ಜಿಲ್ಲಾಧಿಕಾರಿ ಇದರ ಅಧ್ಯಕ್ಷರಾಗಲಿದ್ದಾರೆ. ಅವರಿಗೆ ಮೊದಲೆ ದಸರಾ ದಶಮಂಟಪಗಳ ಸಂಪ್ರದಾಯವನ್ನು ಮನವರಿಕೆ ಮಾಡಿಸಬೇಕು’ ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು.
ಡಿ.ಜೆ ಸಂಗೀತಕ್ಕೆ ಕಡಿವಾಣ ಹೇರುವುದು ಸರಿಯಲ್ಲ. ಕನಿಷ್ಠ ಒಂದು ದಿನದ ಮಟ್ಟಿಗೆ ಮಾತ್ರ ವಿಶೇಷ ಸಂದರ್ಭ ಎಂದು ಪರಿಗಣಿಸಿ ಪೊಲೀಸರು ಹಾಗೂ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಸದಸ್ಯರು ಮನವಿ ಮಾಡಿದರು.
ದಶಮಂಟಪಗಳು ತಮ್ಮದೇಯಾದ ಬಿಗಿ ನಿಯಮಗಳನ್ನು ರೂಪಿಸಿಕೊಂಡಿವೆ. ಹೀಗಾಗಿ, ಪೊಲೀಸರು ಕೊನೆ ಗಳಿಗೆಯಲ್ಲಿ ಹೊಸದಾಗಿ ನಿಯಮಗಳನ್ನು ಹೇರುವುದು ಬೇಡ ಎಂದರು.
‘ನಗರದ ರಸ್ತೆಗಳೆಲ್ಲವೂ ಗುಂಡಿ ಬಿದ್ದಿವೆ. ದಸರಾ ಅನುದಾನದಲ್ಲಿ ಈ ಗುಂಡಿಗಳನ್ನು ಮುಚ್ಚುವುದು ಬೇಡ. ಗುಂಡಿಗಳನ್ನು ನಗರಸಭೆ ತನ್ನದೇ ಅನುದಾನದಲ್ಲಿ ಮುಚ್ಚಲಿ’ ಎಂದರು.
‘ಕರಗ ಸಮಿತಿಗಳಿಗೆ ಜಿಎಸ್‌ಟಿ ನಿಯಮದಿಂದ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸಬೇಕು’ ಎಂದು ಕರಗ ಸಮಿತಿ ಮುಖಂಡರು ವಿಷಯ ಪ್ರಸ್ತಾಪಿಸಿದರು.
ಅಂತಿಮವಾಗಿ ₹ 3 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲು, ಡಿ.ಜೆ ಬಳಕೆ ಕುರಿತು ಹಾಗೂ ರಸ್ತೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಲು, ಬೀದಿ ದೀಪಗಳ ದುರಸ್ತಿ, ಪಂಪಿನ ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸಮಿತಿಯಿಂದ ಪತ್ರ ಬರೆಯಲು ತೀರ್ಮಾನಿಸಲಾಯಿತು.
ದಶಮಂಟಪ ಸಮಿತಿ ಅಧ್ಯಕ್ಷ ಬಿ.ಸಿ.ಜಗದೀಶ್, ಪ್ರಕಾಶ್ ಆಚಾರ್ಯ, ಅರುಣ್ ಶೆಟ್ಟಿ, ಮಂಜುನಾಥ್, ಸುಕುಮಾರ್, ಕಾರ್ಯಾಧ್ಯಕ್ಷ ಬಿ.ಕೆ.ಜಗದೀಶ್, ಮುಖಂಡರಾದ ಉಮೇಶ್, ಸದಾ ಮುದ್ದಪ್ಪ, ಪ್ರಭುರೈ, ಬಿ.ಪಿ.ಡಿಶು, ಕೂಪದಿರ ಅಯ್ಯಪ್ಪ, ಮಧುರಯ್ಯ, ಚಾಮಿ, ಮಂಜುನಾಥ್, ಮುದ್ದರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.