ಸೋಮವಾರ, ಮೇ 10, 2021
19 °C
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರಿಗೆ ತಪ್ಪದ ಜೀವಭಯ

ಹಗಲಿನಲ್ಲಿ ಕಾಡಾನೆಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

ಸುನಿಲ್ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ತೋಟ ಮತ್ತು ಮನೆಗಳ ಸುತ್ತಮುತ್ತಲಿನಲ್ಲಿ ಕಾಡಾನೆಗಳು ಹಗಲು ವೇಳೆಯಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಒಂದೆಡೆ, ಕಳೆದ ಹಲವು ದಿನಗಳಿಂದ ಉರಿಬಿಸಿಲಿನ ತಾಪದಿಂದ ಕಾಫಿ ಸೇರಿದಂತೆ ಇತರೆ ಬೆಳೆಗಳು ನಾಶವಾಗುತ್ತಿದ್ದು, ಈ ಮಧ್ಯೆ ಕಾಡಾನೆಗಳ ಹಾವಳಿಯಿಂದ ರೈತರು ಇನ್ನಷ್ಟು ನಷ್ಟ ಅನುಭವಿಸುವಂತಹ ಸ್ಥಿತಿ ಎದುರಾಗಿದೆ.

ಇಲ್ಲಿನ ಶಾಂತಿಗೇರಿ, ನೆಟ್ಲಿ’ಬಿ’, ಎಮ್ಮೆಗುಂಡಿ, ನಾಕೂರು ಶಿರಂಗಾಲ, ಐಗೂರು, ಕಾಜೂರು, ಸೇರಿದಂತೆ ಹಲವು ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಬಾಳೆ, ಕಾಫಿ, ಮತ್ತಿತರ ಗಿಡಗಳನ್ನು ನಾಶಪಡಿಸಿ ಜನವಸತಿ ಪ್ರದೇಶದಲ್ಲಿ ಹಾಡಹಗಲೇ ಪ್ರತ್ಯಕ್ಷವಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಸಮೀಪದ ನಾಕೂರು ಶಿರಂಗಾಲ ಗ್ರಾಮಪಂಚಾಯಿತಿಯ ವ್ಯಾಪ್ತಿಯ ಎಮ್ಮೆಗುಂಡಿ, ನೆಟ್ಲಿ ’ಬಿ’, ಶಾಂತಿಗೇರಿ ಗ್ರಾಮದಲ್ಲಿ ಜಿ.ಎಸ್. ಚಂದ್ರ, ರವಿ ಅವರ ಮನೆ ಸಮೀಪ ರಾತ್ರಿ ಕಾಡಾನೆಯೊಂದು ಬಾಳೆ ಗಿಡ ಧ್ವಂಸಗೊಳಿಸಿ ಅಲ್ಲಿಂದ ತೆರಳಿದೆ. ನಂತರ ಹಾಡಹಗಲಿನಲ್ಲಿ ಕಾನ್‌ಬೈಲು ಬೈಚನ ಹಳ್ಳಿ ಅಂಚೆಕಚೇರಿ ಮುಂಭಾಗದ ಕಾಫಿ ತೋಟದಲ್ಲಿ ಪ್ರತ್ಯಕ್ಷವಾಗಿದ್ದು, ಕಾರ್ಮಿಕರು ಆನೆಯನ್ನು ಕಂಡು ಹೆದರಿ ದಿಕ್ಕುಪಾಲಾಗಿ ಓಡಿದ ಘಟನೆ ನಡೆದಿದೆ. ಇದರಿಂದ ತೋಟದ ಮಾಲೀಕರು ಮತ್ತು ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಈ ರೀತಿಯಾಗಿ ಜನವಸತಿ ಸ್ಥಳದಲ್ಲಿ ಆನೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೇ ಮನೆಗಳಲ್ಲಿ ಇರಿಸುವಂತಹ ಪರಿಸ್ಥಿತಿ ಎದುರಾಗಿದೆ.

ವಿಷಯ ಅರಿತ ಅರಣ್ಯ ಅಧಿಕಾರಿಗಳಾದ ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ಮಂಜೇಗೌಡ, ಆನಂದ ತಿಮ್ಮಯ್ಯ, ರವಿ, ಸುನಿಲ್, ಶಾಂತ, ಲೋಕೇಶ್ ಅವರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಕಮ್ತತಳಿ ಹಾರಂಗಿ ಹಿನ್ನೀರು ಪ್ರದೇಶದ ಬಳಿ ಮಧ್ಯಾಹ್ನದ ವೇಳೆ ಮರಿಗಳು ಸೇರಿದಂತೆ ಕಾಡಾನೆಗಳ ಹಿಂಡು ಕಳೆದೆರಡು ದಿನಗಳಿಂದ ಕಂಡುಬರುತ್ತಿದ್ದು, ಶಾಲಾ ಕಾಲೇಜು ಬಿಟ್ಟು ಮನೆಗೆ ತೆರಳುತ್ತಿರುವ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.

ರಾತ್ರಿ ವೇಳೆಯಲ್ಲಿ ಬಂದು ತೋಟದ ಬೆಳೆಗಳನ್ನು ಧ್ವಂಸಗೊಳಿಸುತ್ತಿದ್ದ ಕಾಡಾನೆಗಳು ಇದೀಗ ಹಗಲು ವೇಳೆಯಲ್ಲಿ ತೋಟದ ಮೂಲಕ ರಸ್ತೆಯಲ್ಲಿ ಸಂಚರಿಸುತ್ತಿರುವುದು ನಮಗೆ ಭಯ ಉಂಟುಮಾಡಿದೆ. ಇದಕ್ಕೆ ಸಂಬಂಧಪಟ್ಟವರು ಪರಿಹಾರ ನೀಡಲಿ ಎಂದು ಕಾಲೇಜು ವಿದ್ಯಾರ್ಥಿನಿ ಲೋಹಿತಾಕ್ಷಿ ಹೇಳುತ್ತಾರೆ.

ಅಷ್ಟೇ ಮಾತ್ರವಲ್ಲ, ರಾತ್ರಿ ವೇಳೆಯಲ್ಲಿ ಮಳೂರು, ಹೊರೂರು, ಚಿಕ್ಲಿಹೊಳೆ, ಮತ್ತಿಕಾಡು ಸೇರಿದಂತೆ ಇತರೆಡೆ ತೋಟಗಳಲ್ಲಿ ಬೀಡುಬಿಟ್ಟು ಫಸಲು ಬಂದ ಬೆಳೆಗಳನ್ನು ತಿಂದು ಧ್ವಂಸಗೊಳಿಸುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಐಗೂರಿನ ಬಾಲಕೃಷ್ಣ, ಶಾಂತಿಗೇರಿ ಚಂದ್ರ, ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು