ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಜಾಗ ಒತ್ತುವರಿ; ಸಮೀಕ್ಷೆಗೆ ಸೂಚನೆ

ಅರಣ್ಯ ಉಳಿಸಿ, ಆದಿವಾಸಿಗಳನ್ನೂ ರಕ್ಷಿಸಿ– ಕೆ.ಜಿ.ಬೋಪಯ್ಯ, ರವಿಕುಶಾಲಪ್ಪ ನಿರ್ದೇಶನ
Last Updated 17 ಜೂನ್ 2022, 3:01 IST
ಅಕ್ಷರ ಗಾತ್ರ

ಮಡಿಕೇರಿ: ತಲಕಾವೇರಿಯಿಂದ ಕುಶಾಲ ನಗರದವರೆಗೆ ಕಾವೇರಿ ನದಿ ಪಾತ್ರದಲ್ಲಿ ಭೂ ಒತ್ತುವರಿ ಮಾಡಿಕೊಂಡಿರುವ ಕುರಿತು ಕೂಡಲೇ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಇಬ್ಬರೂ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‍‘ಒಂದೆಡೆ ಕಾವೇರಿ ನದಿ ಪಾತ್ರವನ್ನು ಒತ್ತುವರಿ ಮಾಡಿಕೊಂಡು ಪರಿಸರಕ್ಕೆ ಧಕ್ಕೆ ತರುವ ಪ್ರಕ್ರಿಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಕಾಡಿನಿಂದ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇಷ್ಟೆಲ್ಲ ಪರಿಸರಕ್ಕೆ ಧಕ್ಕೆ ತರುವ ಕೃತ್ಯಗಳು ನಡೆಯುತ್ತಿದ್ದರೂ ಕಾಣದಂತಿರುವ ಅರಣ್ಯ ಅಧಿಕಾರಿಗಳು ಹಾಡಿ ಜನರಿಗೆ ನ್ಯಾಯಬದ್ಧ ಸೌಲಭ್ಯಗಳನ್ನು ನಿರಾಕರಿಸಿ ಕಿರುಕುಳ ಕೊಡುತ್ತಿದ್ದಾರೆ’ ಎಂದು ದೂರಿದರು.

‘ಅರಣ್ಯವನ್ನೂ ಉಳಿಸಬೇಕು, ಅಲ್ಲಿರುವ ಆದಿವಾಸಿಗಳಿಗೂ ಸೌಕರ್ಯ ಗಳನ್ನು ಒದಗಿಸಿಕೊಡುವ ಮೂಲಕ ಎರಡನ್ನೂ ರಕ್ಷಿಸುವ ಕೆಲಸ ಆಗಬೇಕು’ ಎಂದು ಇಬ್ಬರೂ ಹೇಳಿದರು.

‘ಕಾವೇರಿ ನದಿ ಪಾತ್ರ ಒತ್ತುವರಿ ತೆರವು ಪ್ರಕ್ರಿಯೆ ಕೊಡಗು ಜಿಲ್ಲೆ ಯಿಂದಲೇ ಆರಂಭವಾಗಬೇಕು. ನಿಸರ್ಗ ಧಾಮದ ಅಕ್ಕಪಕ್ಕ ಒತ್ತುವರಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದು ರಾಜಕಾರಣಕ್ಕಾಗಿ ಮಾಡುತ್ತಿಲ್ಲ. ಮನುಕುಲದ ಒಳಿತಿಗಾಗಿ ಈ ಕೆಲಸ ಮಾಡಲಾಗುತ್ತಿದೆ’ ಎಂದು ರವಿಕುಶಾಲಪ್ಪ ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ‘ಕಾವೇರಿ ನದಿ ದಡದಲ್ಲಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಆದಿವಾಸಿಗಳಿಗೆ ವಿದ್ಯುತ್ ಕೊಡಿ: ಕೊಡಗು ಜಿಲ್ಲೆಯ ಮಾಲ್ದಾರೆ ವ್ಯಾಪ್ತಿಯ ಹಲವು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅರಣ್ಯಾಧಿಕಾರಿಗಳು ತೊಂದರೆ ಕೊಡುತ್ತಿರುವುದಕ್ಕೆ ಶಾಸಕ ಕೆ.ಜಿ.ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು.

‘ಅವರಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎನ್ನುವ ಸರ್ಕಾರದ ಆದೇಶ ಎಲ್ಲಿದೆ’ ಎಂದು ಪ್ರಶ್ನಿಸಿದ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಎಲ್ಲರಿಗೂ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಹೇಳಿರುವಾಗ ಅಧಿಕಾರಿಗಳು ತಡೆಯು ತ್ತಿರುವುದು ಸರಿಯಲ್ಲ’ ಎಂದರು.

ಮಾಲ್ದಾರೆ ವ್ಯಾಪ್ತಿಯ ಕುಟುಂಬ ಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಏಳೆಂಟು ವರ್ಷದಿಂದ ಬಾಕಿ ಇದೆ. ಅವರೇನು ಬದುಕಲೇಬಾರದೇ ಎಂದೂ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.

‘ಅವರಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ಆದರೂ, ತಿತಿಮತಿ, ಬಾಳೆಲೆ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್‌ ಸಂಪರ್ಕಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಕಾನೂನಿನ ಇತಿಮಿತಿಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು. ‌

‘ಕೂಟಿಯಾಲ ಸೇತುವೆ ನಿರ್ಮಾಣಕ್ಕೆ ₹3.01 ಕೋಟಿ ಬಿಡುಗಡೆಯಾಗಿದೆ. ಚೆಟ್ಟಿಮಾನಿ, ಚೆಂಬು, ದಬ್ಬಡ್ಕ, ಗಾಳಿಬೀಡು–ಸುಬ್ರಹ್ಮಣ್ಯ– ಕಡಮಕಲ್ಲು ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ ಭೂಮಿ ನೀಡಲಾಗಿದೆ. ನಿರ್ಮಾಣಕ್ಕೆ ಮುಂದಾಗ ಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಪೂವಯ್ಯ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಗಿರೀಶ್ ಗಣಪತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಇದ್ದರು.

ಅರಣ್ಯ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಪಿ.ಟಿ.ಶಶಿ, ಸುನಿಲ್ ಅಹ್ಮದ್, ಮಲ್ಲನಗೌಡ, ಶಿವಕುಮಾರ್, ಸುಬ್ರಾಯ, ಬಾಬು ರಾಠೋಡ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT