ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ | ಬಗೆಹರಿದ ಕಸ ವಿಲೇವಾರಿ ಘಟಕದ ಸಮಸ್ಯೆ

ಸ್ವಚ್ಛ ಪಟ್ಟಣವಾಗಲಿದೆಯೇ ಶನಿವಾರಸಂತೆ?
ಶರಣ್ ಎಚ್ ಎಸ್
Published 6 ಮೇ 2024, 6:29 IST
Last Updated 6 ಮೇ 2024, 6:29 IST
ಅಕ್ಷರ ಗಾತ್ರ

ಶನಿವಾರಸಂತೆ: ಇಲ್ಲಿನ ಆರೋಗ್ಯ ಕೇಂದ್ರದ ಸಮೀಪವಿದ್ದ ಕಸ ವಿಲೇವಾರಿ ಘಟಕದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಯಶಸ್ವಿಯಾಗಿದೆ.

ಇಲ್ಲಿನ ಮುಖ್ಯ ರಸ್ತೆಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಶಾಲಾ ಕಾಲೇಜಿನ ಸಮೀಪದಲ್ಲಿ ಕಸ ವಿಲೇವಾರಿ ಘಟಕವಿತ್ತು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಹಾಗೆಯೇ ಸುರಿಯಲಾಗುತ್ತಿತ್ತು. ದುರ್ವಾಸನೆಯಿಂದ ಪಟ್ಟಣದ  ಜನತೆ ಹಲವು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದರು.

ಇತ್ತೀಚೆಗೆ ಶನಿವಾರಸಂತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿಯ ಉದ್ಘಾಟನೆಯ ವೇಳೆ ಶಾಸಕ ಡಾ.ಮಂತರ್‌ಗೌಡ ಕಸ ವಿಲೇವಾರಿ ಘಟಕವನ್ನು ತಕ್ಷಣದಲ್ಲೇ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ನೂತನವಾಗಿ ಕಸ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸುವಂತೆ ತಿಳಿಸಿದರು. ಆದರೆ, ದುಂಡಳ್ಳಿ ಗ್ರಾಮಸ್ಥರು ಕಸ ವಿಲೇವಾರಿ ಘಟಕಕ್ಕೆ ಕಾಂಪೌಂಡ್ ಇಲ್ಲದೆ ಕಸವನ್ನು ವಿಲೇವಾರಿ ಮಾಡಬಾರದು ಎಂದು ಪಟ್ಟು ಹಿಡಿದಿದ್ದರು.

ಇದೀಗ ಕಾಂಪೌಂಡ್ ನಿರ್ಮಾಣ ಪೂರ್ಣಗೊಂಡಿದ್ದು, ಎರಡು ದಿನಗಳಿಂದ ಪಟ್ಟಣದಲ್ಲಿ ಕಸವನ್ನು ಸಂಗ್ರಹಿಸಿ ನೂತನ ಕಸ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿದೆ. ಈ ಹಿಂದೆ ಇದ್ದ ಕಸ ವಿಲೇವಾರಿ ಘಟಕವನ್ನು ಸಂಪೂರ್ಣವಾಗಿ ಬಂದ್ ಮಾಡಲು ಶನಿವಾರಸಂತೆ ಗ್ರಾಮ ಪಂಚಾಯಿತಿ ನಿರ್ಧರಿಸಿದೆ. ಆದಾಗ್ಯೂ, ಇಲ್ಲಿನ ಜನರು ಮತ್ತು ಅಕ್ಕಪಕ್ಕದ ಗ್ರಾಮ ಪಂಚಾಯಿತಿಯ ಜನರು ಆಸ್ಪತ್ರೆ ಸಮೀಪವಿರುವ ಕಸ ವಿಲೇವಾರಿ ಘಟಕಕ್ಕೆ ಕಸವನ್ನು ತಂದು ಹಾಕುತ್ತಿದ್ದಾರೆ. ಇವರನ್ನು ಪತ್ತೆಹಚ್ಚಲು 4 ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನೂತನವಾಗಿ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ಜನರಿಗೆ ಹರ್ಷ ತಂದಿದೆ. ಕಸ ವಿಲೇವಾರಿ ಘಟಕದಲ್ಲಿ ಸುತ್ತ ಕಾಂಪೌಂಡ್ ಅನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರ ಮಾಡಲು 5 ಗುಂಡಿಗಳನ್ನು ತೋಡಲಾಗಿದೆ. ಒಣ ಕಸವನ್ನು ಕಸ ವಿಲೇವಾರಿ ಘಟಕದಲ್ಲಿ ವಿಂಗಡನೆ ಮಾಡಲಾಗುತ್ತಿದೆ. ಕಸ ವಿಲೇವಾರಿ ಘಟಕಕ್ಕೆ ಕೊಡಗು ಜಿಲ್ಲಾ ಪಂಚಾಯಿತಿ ಸಹಕಾರದಿಂದ ಟಾಟಾ ಕಾಫಿ ಲಿಮಿಟೆಡ್ ವತಿಯಿಂದ ₹ 3 ಲಕ್ಷ ವೆಚ್ಚದಲ್ಲಿ ಘಟಕಕ್ಕೆ ಕಸ ವಿಂಗಡಣ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ.

ಫೆಬ್ರುವರಿ 8ರಂದು ‘ಪ್ರಜಾವಾಣಿ’ಯಲ್ಲಿ ‘ಘಟಕ ನಿರ್ಮಿಸಿದರೂ ಕರಗದ ಕಸದ ರಾಶಿ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿ
ಫೆಬ್ರುವರಿ 8ರಂದು ‘ಪ್ರಜಾವಾಣಿ’ಯಲ್ಲಿ ‘ಘಟಕ ನಿರ್ಮಿಸಿದರೂ ಕರಗದ ಕಸದ ರಾಶಿ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿ

ವಿಶೇಷ ವರದಿ ಪ್ರಕಟಿಸಿದ್ದ ‘ಪ್ರಜಾವಾಣಿ’ ಫೆಬ್ರುವರಿ ತಿಂಗಳಿನಲ್ಲಿ ಮಾಡಿದ್ದ ‘ಉತ್ತರ ಕೊಡಗು ಕಸದ ಪಿಡುಗು ಸರಣಿ’ಯಲ್ಲಿ ‘ಘಟಕ ನಿರ್ಮಿಸಿದರೂ ಕರಗದ ಕಸದ ರಾಶಿ’ ಎಂಬ ಶೀರ್ಷಿಕೆಯಡಿ ಸಮಸ್ಯೆ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಕಸ ವಿಲೇವಾರಿ ಘಟಕ ಉದ್ಘಾಟನೆಯಾಗಿದ್ದರೂ ಕಾಂಪೌಂಡ್ ಇಲ್ಲದ ಕಾರಣಕ್ಕೆ ಸಮಸ್ಯೆ ಮಾತ್ರ ಇನ್ನೂ ಜೀವಂತ ಇರುವ ಕುರಿತು ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ್ದ  ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಗೀತಾ ಹರೀಶ್ ಶೀಘ್ರದಲ್ಲಿ ಕಾಂಪೌಂಡ್ ನಿರ್ಮಿಸುವ ಭರವಸೆ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT