ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗೋಡು: ವಿಜಯನಗರ ತಂಡ ಚಾಂಪಿಯನ್

ಹುತ್ತರಿ ಕಪ್ ಫುಟ್‌ಬಾಲ್‌ ಟೂರ್ನಿ: ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ನೆಹರೂ ಎಫ್ಸಿ
Last Updated 16 ಡಿಸೆಂಬರ್ 2019, 12:40 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಮರಗೋಡು ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ, ಮುಕ್ತಾಯವಾದ ಪ್ರತಿಷ್ಠಿತ ಹುತ್ತರಿ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಮೈಸೂರಿನ ವಿಜಯನಗರದ ಎಫ್ಸಿ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಫೈನಲ್ ಹಣಾಹಣಿಯಲ್ಲಿ ವಿಜಯನಗರ ತಂಡವು ಹಾಲಿ ಚಾಂಪಿಯನ್ ಪಾಲಿಬೆಟ್ಟದ ನೆಹರೂ ಎಫ್ಸಿ ತಂಡವನ್ನು 1-0 ಗೋಲುಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಆರಂಭದಿಂದಲೇ ಯೋಜಿತ ಪ್ರದರ್ಶನ ನೀಡಿದ ವಿಜಯ ನಗರ ತಂಡವು ಮೊದಲಾರ್ಧದಲ್ಲೇ ಗೋಲು ದಾಖಲಿಸಿತು. ತಂಡದ ಪರ ಮುನ್ನಡೆ ಆಟಗಾರ ಕಾರ್ಯಪ್ಪ ನೆಹರೂ ತಂಡದ ರಕ್ಷಣಾ ಗೋಡೆ ಬೇಧಿಸಿ ಗೋಲುಗಳಿಸಿದರು.

ದ್ವಿತೀಯಾರ್ಧದ ಪಂದ್ಯವಂತೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ವಿಜಯ ನಗರ ತಂಡ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದರಿಂದ ನೆಹರೂ ಎಫ್ಸಿಗೆ ಗೋಲುಗಳಿಸಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ವಿಜಯನಗರದ ಎಫ್ಸಿ ತಂಡ ಪಾಲಿಬೆಟ್ಟದ ಮಿಲನ್ಸ್ ಅಮ್ಮತ್ತಿ ತಂಡವನ್ನು ಮಣಿಸಿ, ಫೈನಲ್ ಪ್ರವೇಶಿಸಿತ್ತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ವೈಷ್ಣವಿ ಎಫ್ಸಿ ತಂಡವು, ನೆಹರೂ ಎಫ್ಸಿ ತಂಡದ ವಿರುದ್ಧ 6-0 ಗೋಲುಗಳಿಂದ ಸೋಲನುಭವಿಸಿತು.

ನೃತ್ಯ ಕಾರ್ಯಕ್ರಮ: ಪಂದ್ಯಾವಳಿಯ ಅಂಗವಾಗಿ ಮಡಿಕೇರಿಯ ಅಲ್ಟಿಮೇಟ್ ವೇವ್ಸ್ ತಂಡದಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಳಿಕ ಟೀಮ್ ಪವರ್ ತಂಡದಿಂದ ಬೈಕ್ ಸ್ಟಂಟ್ ಏರ್ಪಡಿಸಲಾಗಿತ್ತು.

ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ₹ 30,000 ನಗದು, ರನ್ನರ್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ₹ 20,000 ನಗದು ನೀಡಲಾಯಿತು. ಸೆಮಿಫೈನಲ್ ಪ್ರವೇಶಿಸಿದ ವೈಷ್ಣವಿ ಎಫ್ಸಿ ಹಾಗೂ ಅಮ್ಮತ್ತಿ ಮಿಲನ್ಸ್ ತಂಡಕ್ಕೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಯಿತು.

ಸಮಾರಂಭದಲ್ಲಿ ಹಿರಿಯ ಕ್ರೀಡಾಕೂಟದಲ್ಲಿ ಅತರರಾಷ್ಟ್ರೀಯ ಸಾಧನೆ ಮಾಡಿದ ಕೊಂಪುಳಿರ ಪೊನ್ನಮ್ಮ ಉತ್ತಪ್ಪ, ಪ್ರಾಮಾಣಿಕ ಯುವಕ ಸುಜಯ್, ಮತ್ತು ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಮಾಡಿರುವ ಐಮಂಡ ಗೋಪಾಲ್ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.
ಸಮಾರೋಪದಲ್ಲಿ ವೈಷ್ಣವಿ ಫುಟ್‌ಬಾಲ್‌ ಕ್ಲಬ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಮಾಜಿ ಅಂತರರಾಷ್ಟ್ರೀಯ ಫುಟ್‌ಬಾಲ್‌ ಆಟಗಾರ ಬೆಪ್ಪುರನ ಅಣ್ಣಪ್ಪ, ಇಟ್ಟಣಿಕೆ ರಾಮಕೃಷ್ಱ, ಜಯಪ್ರಕಾಶ್ ರೈ, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ, ಉದ್ಯಮಿಗಳಾದ ಕಿಶೋರ್ ಸುಬ್ಬಯ್ಯ, ನೀತು ಪೂಜಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT