ಬುಧವಾರ, ನವೆಂಬರ್ 13, 2019
23 °C
ಒಂದು ವರ್ಷ ಮೂರು ತಿಂಗಳು ಕಳೆದರೂ ತೆರೆಯದ ಶಾಲಾ ಬಾಗಿಲು

ನೆರೆ ಪೀಡಿತ ಪ್ರದೇಶ: ನಾಲ್ಕು ಸರ್ಕಾರಿ ಶಾಲೆಗಳು ಬಂದ್‌!

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸತತ ಎರಡು ವರ್ಷಗಳಿಂದ ಪ್ರವಾಹ, ಭೂಕುಸಿತವಾಗಿ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 2018ರ ಆಗಸ್ಟ್‌ನಲ್ಲಿ ಸುರಿದಿದ್ದ ಧಾರಾಕಾರ ಮಳೆಯು, ಜಿಲ್ಲೆಯ ಜನರ ಜಂಘಾಬಲವನ್ನೇ ಉಡುಗಿಸಿತ್ತು. ಆಗ ನೆರೆ ಪೀಡಿತ ಪ್ರದೇಶಗಳಲ್ಲಿ ಬಾಗಿಲು ಮುಚ್ಚಿದ್ದ ಶಾಲೆಗಳ ಪೈಕಿ ನಾಲ್ಕು ಶಾಲೆಗಳು ಮಾತ್ರ ಇನ್ನೂ ಬಾಗಿಲನ್ನೇ ತೆರೆದಿಲ್ಲ!

ಸದಾ ಚಟುವಟಿಕೆ ಹಾಗೂ ಮಕ್ಕಳ ಕಲರವದಿಂದ ಕೂಡಿರುತ್ತಿದ್ದ ಶಾಲಾ ಆವರಣ ಕಳೆದ ಒಂದು ವರ್ಷ ಮೂರು ತಿಂಗಳಿಂದ ಬಿಕೋ ಎನ್ನುತ್ತಿದೆ. ಅಲ್ಲಿ ನೀರವಮೌನ ನೆಲೆಸಿದೆ.

ಜಿಲ್ಲೆಯ 2ನೇ ಮೊಣ್ಣಂಗೇರಿ, ಕಾಲೂರು, ಹೆಬ್ಬಟ್ಟಗೇರಿ, ಅರೆಕಲ್ಲು ಗ್ರಾಮದ ಸರ್ಕಾರಿ ಶಾಲೆಗಳು ಬಂದ್‌ ಆಗಿವೆ. ‘ಇವುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದೇವೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದರೂ, ಅವುಗಳ ಸ್ಥಿತಿ ನೋಡಿದರೆ ಶಾಶ್ವತವಾಗಿಯೇ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ. 

100 ಮಕ್ಕಳಿಗೆ ತೊಂದರೆ: ಈ ನಾಲ್ಕು ಶಾಲೆಗಳಲ್ಲಿ ಕಲಿಯುತ್ತಿದ್ದ ಸುಮಾರು 100 ಮಕ್ಕಳು, ಈಗ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಣ ಮುಂದುವರಿಸಿದ್ದಾರೆ. ಶಾಲಾ ಆವರಣದ ಸುತ್ತ ಗಿಡಗಂಟಿಗಳು ಬೆಳೆದಿವೆ. ಬಿಸಿಯೂಟ ತಯಾರಿಸುತ್ತಿದ್ದ, ಅಡುಗೆ ಕೋಣೆಯಲ್ಲಿ ಸದ್ದಿಲ್ಲ. ಬಿಸಿಯೂಟ ತಯಾರಕ ಸಿಬ್ಬಂದಿಯೂ ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಾಲ್ಕು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನೂ ಹತ್ತಿರದ ಶಾಲೆಗಳಿಗೆ ನಿಯೋಜಿಸಲಾಗಿದೆ.

ಏಕೆ ಈ ರೀತಿಯ ಸಂಕಷ್ಟ?: 2018ರ ಆಗಸ್ಟ್‌ 1ರಿಂದ 14ರ ತನಕ ಸುರಿದ ಭಾರೀ ಮಳೆಯಿಂದ ಈ ಭಾಗದಲ್ಲಿ ಬೃಹತ್‌ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು. ಅದಾದ ನಂತರ ಸಂಭವನೀಯ ಭೂಕುಸಿತಕ್ಕೆ ಹೆದರಿದ ಗ್ರಾಮಸ್ಥರು ಗ್ರಾಮದತ್ತ ಮುಖಮಾಡಿಲ್ಲ. ಹೀಗಾಗಿ, ವಿದ್ಯಾರ್ಥಿಗಳೂ ಈ ಶಾಲೆಗಳತ್ತ ಬಂದಿಲ್ಲ. ನೆರೆ ಪೀಡಿತ ಪ್ರದೇಶದ ಮಕ್ಕಳು ಪೊನ್ನಂಪೇಟೆ ಸಾಯಿ ಶಿಕ್ಷಣ ಸಂಸ್ಥೆ ಹಾಗೂ ಕರಾವಳಿ ಭಾಗದ ಕೆಲವು ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಶಾಲೆಗಳಿಗೆ ಬಾರದ ಕಾರಣಕ್ಕೆ, ನಾಲ್ಕು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ.

ಈ ನಾಲ್ಕು ಗ್ರಾಮಗಳಲ್ಲಿ ವಾಸಕ್ಕೆ ಜನರು ಈಗಲೂ ಭಯ ಪಡುತ್ತಿದ್ದಾರೆ. ರಸ್ತೆಯೂ ಸರಿಯಿಲ್ಲ. 2ನೇ ಮೊಣ್ಣಂಗೇರಿ ಗ್ರಾಮದ ಜನರು ಹೆದರಿ ಮದೆ ಭಾಗಕ್ಕೆ ಬಂದು ನೆಲೆಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ಗುಡ್ಡ ಕುಸಿದಿರುವುದು, ಬೆಟ್ಟವೇ ಬಾಯ್ಬಿಟ್ಟು ಅಪಾಯ ಆಹ್ವಾನಿಸುತ್ತಿರುವ ಪರಿಣಾಮ 2ನೇ ಮೊಣ್ಣಂಗೇರಿ, ಕಾಲೂರು, ಹೆಬ್ಬಟ್ಟಗೇರಿ, ಅರೆಕಲ್ಲು ಗ್ರಾಮಸ್ಥರು ಮತ್ತೆ ಅಲ್ಲಿ ನೆಲೆಸಲು ಇಚ್ಛಿಸುತ್ತಿಲ್ಲ. ಈ ನಾಲ್ಕು ಸರ್ಕಾರಿ ಶಾಲೆಗಳೂ ಶಾಶ್ವತವಾಗಿಯೇ ಬಂದ್‌ ಆಗುವ ಸಾಧ್ಯತೆ ದಟ್ಟವಾಗಿದೆ.

ಬಾಡಿಗೆ ಮನೆಯಲ್ಲಿ ವಾಸ: ಕರ್ಣಂಗೇರಿ ಗ್ರಾಮದಲ್ಲಿ ಮಾತ್ರ 35 ಮನೆಗಳನ್ನು ಹಸ್ತಾಂತರ ಮಾಡಿರುವ ಸರ್ಕಾರವು ಉಳಿದ ಕಡೆಗಳಲ್ಲಿ ಸಂತ್ರಸ್ತರೂ ಇನ್ನೂ ಬಾಡಿಗೆ ಮನೆಗಳಲ್ಲೇ ನೆಲೆಸಿದ್ದಾರೆ. ಇನ್ನೂ 700ಕ್ಕೂ ಹೆಚ್ಚು ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾರ್ಚ್‌ ಅಂತ್ಯಕ್ಕೆ 600 ಮನೆಗಳನ್ನಾದರೂ ಹಸ್ತಾಂತರ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)