ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಅಂತೂ, ಇಂತೂ ನನಸಾಗುತ್ತಿರುವ ಗಾಂಧೀಜಿ ಸ್ಮಾರಕ ಉದ್ಯಾನ

Published 14 ಅಕ್ಟೋಬರ್ 2023, 5:22 IST
Last Updated 14 ಅಕ್ಟೋಬರ್ 2023, 5:22 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿ ಅವರ ‘ಸ್ಮಾರಕ ಉದ್ಯಾನ’ ನಿರ್ಮಾಣಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅ.17ರಂದು ಭೂಮಿಪೂಜೆ ನೆರವೇರಿಸಲಿದ್ದಾರೆ.

ಈ ಕುರಿತು ಶುಕ್ರವಾರ ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಈಗಾಗಲೇ ಸರ್ಕಾರದಿಂದ ಗಾಂಧಿ ಸ್ಮಾರಕ ಉದ್ಯಾನ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆಯಾಗಿದ್ದು, ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವಿಟ್ಟು ಶಾಶ್ವತವಾದ ಸ್ಮಾರಕ ಉದ್ಯಾನ ನಿರ್ಮಾಣ ಮಾಡಬೇಕು. ಹೊಸ ತಂತ್ರಜ್ಞಾನದಂತೆ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು. ಜೊತೆಗೆ, 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಶಾಸಕ ಡಾ.ಮಂತರ್‌ಗೌಡ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಉದ್ಯಾನದ ಕಾಮಗಾರಿಯನ್ನು ಯೋಜನೆಯಂತೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಮಾತನಾಡಿ, ‘ಈಗಾಗಲೇ ₹ 50 ಲಕ್ಷ ಬಿಡುಗಡೆಯಾಗಿದ್ದು, ಗಾಂಧಿ ಸ್ಮಾರಕ ಉದ್ಯಾನ ಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಲಿಯಾಕತ್ ಅಲಿ, ಅಂಬೆಕಲ್ಲು ನವೀನ್, ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಹಲವು ಮಾಹಿತಿ ನೀಡಿದರು.

ಯೋಜನೆಯ ಹೆಜ್ಜೆಗುರುತುಗಳು

ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ದೆಹಲಿಯ ರಾಜಘಾಟ್‍ನಲ್ಲಿ ಇರುವಂತೆ ಇಲ್ಲಿನ ಗಾಂಧಿ ಮೈದಾನದ ಬಳಿ ಇರುವ ಗಾಂಧಿಮಂಟಪದ ಸ್ಥಳದಲ್ಲೇ ಶಾಶ್ವತವಾದ ಸ್ಮಾರಕ ಉದ್ಯಾನವನ್ನು ನಿರ್ಮಿಸುವ ಸಲುವಾಗಿ ಸರ್ವೋದಯ ಸಮಿತಿಯವರು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ₹ 1 ಕೋಟಿ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ ಸರ್ಕಾರ 2023ರ ಮಾರ್ಚ್ ತಿಂಗಳಲ್ಲಿ ₹ 50 ಲಕ್ಷ ಹಣ ಬಿಡುಗಡೆ ಮಾಡಿತ್ತು.

ಆ ನಿಟ್ಟಿನಲ್ಲಿ ಗಾಂಧಿ ಮಂಟಪ ಸರ್ವೇ ಸಂಖ್ಯೆ 471/1 ರಲ್ಲಿ 12 ಸೆಂಟ್ ಹಾಗೂ ಸರ್ವೆ ಸಂಖ್ಯೆ 471/4 ರಲ್ಲಿ 0.20 ಸೆಂಟ್ ಒಟ್ಟು 0.32 ಸೆಂಟ್ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಿದ್ದರೂ ಕಾಮಗಾರಿ ಆರಂಭವೇ ಆಗಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಗಮನ ಸೆಳೆದಿದ್ದ ‘ಪ್ರಜಾವಾಣಿ’

ಅ. 2ರಂದು ‘ಪ್ರಜಾವಾಣಿ’ಯು ‘ನಮ್ಮ ನಗರ ನಮ್ಮ ಧ್ವನಿ’ ಅಂಕಣದಲ್ಲಿ ‘ಉಳಿಯಲಿ ಕೊಡಗಿನಲಿ ಗಾಂಧಿ ಸ್ಮೃತಿ’ ಶೀರ್ಷಿಕೆಯಡಿ ಕಳೆದ ವರ್ಷವೇ ಹಣ ಬಿಡುಗಡೆಯಾಗಿದ್ದರೂ ಗಾಂಧಿ ಸ್ಮಾರಕ ಉದ್ಯಾನದ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂಬ ವಿಶೇಷ ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಶಾಸಕ ಡಾ.ಮಂತರ್‌ಗೌಡ ಶೀಘ್ರದಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು.

ಗಾಂಧಿ ಮಂಟಪದಲ್ಲಿ ಗಾಂಧಿ ಸ್ಮಾರಕ ಉದ್ಯಾನ ನಿರ್ಮಿಸುವ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರೊಂದಿಗೆ ಶಾಸಕ ಡಾ.ಮಂತರ್‌ಗೌಡ ಅವರು ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಚರ್ಚೆ ನಡೆಸಿದರು
ಗಾಂಧಿ ಮಂಟಪದಲ್ಲಿ ಗಾಂಧಿ ಸ್ಮಾರಕ ಉದ್ಯಾನ ನಿರ್ಮಿಸುವ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರೊಂದಿಗೆ ಶಾಸಕ ಡಾ.ಮಂತರ್‌ಗೌಡ ಅವರು ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಚರ್ಚೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT