ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಕುಡಿಯುವ ನೀರಿನ ಘಟಕದ ಬಳಿಯೇ ಕಸ ವಿಲೇವಾರಿ!

Published 7 ಫೆಬ್ರುವರಿ 2024, 5:48 IST
Last Updated 7 ಫೆಬ್ರುವರಿ 2024, 5:48 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿನ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇಂದಿಗೂ ಸಿಕ್ಕ ಸಿಕ್ಕ ಸ್ಥಳಗಳಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಘಟಕದ ಪಕ್ಕದಲ್ಲಿಯೇ ವಿಲೇವಾರಿಗೆ ಮುಂದಾಗಿರುವುದು ಆತಂಕ ಮೂಡಿಸಿದೆ.

ಪಂಚಾಯಿತಿ ಸಂಗ್ರಹಿಸುವ ತ್ಯಾಜ್ಯದಲ್ಲಿ ಹೊಟೇಲ್, ಮೆಡಿಕಲ್ ಕ್ಲಿನಿಕ್‍ಗಳು, ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಲ್ಯಾಬ್ ಸೇರಿದಂತೆ ಹಲವೆಡೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. 2–3 ದಿನಗಳು ಸಂಗ್ರಹಿಸಿದ ತ್ಯಾಜ್ಯವನ್ನು ಶುದ್ಧ ಕುಡಿಯುವ ನೀರಿನ ಘಟಕದ ಬಳಿಯಲ್ಲಿ ಗುಂಡಿಮಾಡಿ, ಅದರಲ್ಲಿ ತ್ಯಾಜ್ಯವನ್ನು ಸುರಿದು ಮೇಲೆ ಮಣ್ಣು ಹಾಕಲಾಗುತ್ತಿದೆ. ಈ ಸ್ಥಳಕ್ಕೂ, ಶುದ್ಧ ನೀರು ಸರಬರಾಜಿನ ನೀರಿನ ತೊಟ್ಟಿಗಳಿಗೂ ಕೆಲವೇ ಅಡಿಗಳ ಅಂತರವಿದೆ. ತ್ಯಾಜ್ಯದಲ್ಲಿ ನೀರಿನ ಸಂಗ್ರಹವಿರುವುದು ಮತ್ತು ಮಳೆಯಾದರೆ ಭೂಮಿಯ ಒಳಭಾಗದಲ್ಲಿಯೇ ತ್ಯಾಜ್ಯ ಕೊಳೆತು ಅದರ ನೀರು ಹರಿಯಲು ಪ್ರಾರಂಭಿಸಲಿದೆ.

ಈ ಮೊದಲೇ ಎಲ್ಲ ರಸ್ತೆಗಳಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು, ಹೆಚ್ಚಿನ ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗಿ ತಿಂಗಳುಗಳೇ ಕಳೆದಿವೆ. ಇದರ ಸ್ವಚ್ಛತೆ ಕಡೆಗೆ ಗಮನ ಹರಿಸಿಲ್ಲ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿ 8 ವರ್ಷಗಳು ಕಳೆಯುತ್ತಾ ಬಂದರೂ, ಎಲ್ಲೆಡೆ ಬಳಸಲಾಗುತ್ತಿದೆ. ಹೊರ ಜಿಲ್ಲೆಯಿಂದ ಹಣ್ಣು ಮತ್ತು ತರಕಾರಿ ಮಾರುವವರು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ತಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ.

‘ಪಟ್ಟಣ ಪಂಚಾಯಿತಿಗೆ ಹೈಟೆಕ್ ತ್ಯಾಜ್ಯ ವಿಲೇವಾರಿಗಾಗಿ ಸಮೀಪದ ಸಿದ್ಧಲಿಂಗಪುರದಲ್ಲಿ ಸ್ಥಳ ಖರೀದಿಸಿ, ಸುತ್ತಲೂ ಆವರಣಗೋಡೆಯನ್ನು ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ತ್ಯಾಜ್ಯ ವಿಲಾವಾರಿಗೆ ಪಂಚಾಯಿತಿ ಮುಂದಾಗಿಲ್ಲ. ಮುಖ್ಯ ರಸ್ತೆ ಬಿಟ್ಟು ಒಳ ರಸ್ತೆಗಳ ಸ್ವಚ್ಚತೆ ಕಡೆಗೂ ಗಮನ ಹರಿಸಿಲ್ಲ. ಎರಡು– ಮೂರು ತಿಂಗಳು ಕಳೆದರೂ, ರಸ್ತೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ’ ಎಂದು ನಾಲ್ಕನೇ ವಾರ್ಡ್ ನಿವಾಸಿ ಅಶೋಕ್ ದೂರಿದರು.

‘ಚಿಕ್ಕ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಮಾರುಕಟ್ಟೆ ಆವರಣಕ್ಕೆ ತ್ಯಾಜ್ಯ ತಂದು ರಾಶಿ ಹಾಕಿ ಬೆಂಕಿ ಹಾಕುತ್ತಿದ್ದಾರೆ. ನ್ಯಾಯಾಲಯ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಡಬಾರದು ಎಂಬ ಆದೇಶಕ್ಕೂ ಇಲ್ಲಿ ಬೆಲೆ ಇಲ್ಲದಾಗಿದೆ’ ಎಂದು ಕಿರಗಂದೂರು ಗೌತಮ್ ಹೇಳಿದರು.

‘ಸಾರ್ವಜನಿಕರಿಗೆ ಪರಿಸರ ಉಳಿಸಿ ಎಂದು ಬೆಳಿಗ್ಗೆಯಿಂದ ರಸ್ತೆಯಲ್ಲಿ ಪ್ರಚಾರ ಮಾಡುವ ಮೂಲಕ ಸಂಗ್ರಹಿಸುವ ತ್ಯಾಜ್ಯಕ್ಕೆ ಹೀಗೆ ಬೆಂಕಿ ಹಾಕಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಉದ್ಯಮಿ ರಂಗಸ್ವಾಮಿ ಆರೋಪಿಸಿದರು.

ಸೋಮವಾರಪೇಟೆ ಶುದ್ಧ ಕುಡಿಯುವ ನೀರಿನ ಘಟಕದ ಬಳಿಯಲ್ಲಿ ಈಚೆಗೆ ಪ್ಲಾಟಿಕ್ ಚೀಲಗಳಿಗೆ ಬೆಂಕಿ ಹಾಕಿರುವುದು
ಸೋಮವಾರಪೇಟೆ ಶುದ್ಧ ಕುಡಿಯುವ ನೀರಿನ ಘಟಕದ ಬಳಿಯಲ್ಲಿ ಈಚೆಗೆ ಪ್ಲಾಟಿಕ್ ಚೀಲಗಳಿಗೆ ಬೆಂಕಿ ಹಾಕಿರುವುದು

‘ಬೇರೆಡೆ ವಿಲೇವಾರಿ ಮಾಡಿ’

ಸೋಮವಾರಪೇಟೆಯಲ್ಲಿ ಕುಡಿಯುವ ನೀರಿನ ಫಿಲ್ಟರ್ ಹೌಸ್ ಬಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಮುಂದಾಗಿರುವುದು ಖಂಡನೀಯ. ಕೂಡಲೇ ಮಣ್ಣಿನಡಿಯಲ್ಲಿ ಹೂತಿರುವ ತ್ಯಾಜ್ಯವನ್ನು ತೆಗೆದು ಬೇರೆಡೆಯಲ್ಲಿ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು -ಕೆ.ಎನ್. ದೀಪಕ್ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ.

ತ್ಯಾಜ್ಯಕ್ಕೆ ಬೆಂಕಿ ಸರಿಯಲ್ಲ’

ಕುಡಿಯುವ ನೀರು ಸರಬರಾಜು ಮಾಡುವ ಕೇಂದ್ರದ ಬಳಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪಂಚಾಯಿತಿ ಮುಂದಾಗಿರುವ ಕ್ರಮ ತಪ್ಪು. ಇದು ಪರಿಸರಕ್ಕೆ ಹಾನಿಯೊಂದಿಗೆ ಜನರು ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ತ್ಯಾಜ್ಯ ವಿಲೇವಾರಿಗೆ ಎಷ್ಟೇ ಹಣ ಬಂದರೂ ಸರಿಯಾಗಿ ಪಂಚಾಯಿತಿ ಬಳಸಿಕೊಳ್ಳುತ್ತಿಲ್ಲ. -ಸುರೇಶ್ ಶೆಟ್ಟಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ.

‘ಶಾಸಕರು ನೇತೃತ್ವ ವಹಿಸಲಿ’

ಸೋಮವಾರಪೇಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಆದರೆ ಅದನ್ನು ನಿರ್ವಹಣೆ ಮಾಡಬೇಕಾದ ಪಂಚಾಯಿತಿ ಮಾತ್ರ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಕ್ಷೇತ್ರಕ್ಕೆ ನೂತನ ಶಾಸಕರು ಆಯ್ಕೆಯಾಗಿ ಬಂದಿದ್ದು ಅವರ ನೇತೃತ್ವದಲ್ಲಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಬೇಕಿದೆ -ಎಚ್.ಎನ್. ನಾಗರಾಜು ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ.

‘ನನ್ನ ಗಮನಕ್ಕೆ ಬಂದಿಲ್ಲ’

ಸೋಮವಾರಪೇಟೆ ಪಂಚಾಯಿತಿ ವತಿಯಿಂದ ಸಿದ್ಧಲಿಂಗಪುರದಲ್ಲಿ ಖರೀದಿಸಿರುವ ತ್ಯಾಜ್ಯ ವಿಲೇವಾರಿಗೆ ಕಾಮಗಾರಿ ನಡೆಯುತ್ತಿದೆ. ಸಿದ್ಧಲಿಂಗಪುರದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ 2015ರಲ್ಲಿ ಶೆಡ್ ನಿರ್ಮಾಣ ಮಾಡಲು ₹ 34 ಲಕ್ಷಕ್ಕೆ ಡಿಪಿಆರ್ ಆಗಿತ್ತು. ಈಗ ಬೆಲೆ ಹೆಚ್ಚಾಗಿದ್ದು ₹ 82 ಲಕ್ಷದ ಶೆಡ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಡಿಪಿಆರ್ ಹೋಗಿದ್ದು  ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕುಡಿಯುವ ನೀರಿನ ಘಟಕದ ಬಳಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ - ನಾಚಪ್ಪ ಸೋಮವಾರಪೇಟೆ ಪಂಚಾಯಿತಿ ಮುಖ್ಯಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT