ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನತಾ ಕರ್ಫ್ಯೂ’: ಕೊಡಗು ಸಂಪೂರ್ಣ ಸ್ತಬ್ಧ

ಅಂಗಡಿ ಬಂದ್‌ ಮಾಡಿ ವರ್ತಕರ ಸಹಕಾರ, ಪ್ರಮುಖರ ರಸ್ತೆಗಳು ಎಲ್ಲವೂ ಬಿಕೋ
Last Updated 22 ಮಾರ್ಚ್ 2020, 10:54 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾ ವೈರಸ್ ಮತ್ತಷ್ಟು ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದ ‘ಜನತಾ ಕರ್ಫ್ಯೂ’ ಕರೆಗೆ ಭಾನುವಾರ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ದೊರೆತಿದೆ. ಕೊಡಗು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

ಸದಾ ಪ್ರವಾಸಿಗರು ಹಾಗೂ ಸ್ಥಳೀಯ ಜನರಿಂದ ತುಂಬಿ ತುಳುಕುತ್ತಿದ್ದ ಮಂಜಿನ ನಗರಿಯಲ್ಲಿ ಮೌನ ಆವರಿಸಿತ್ತು. ವಾಹನಗಳ ಸದ್ದು ಇರಲಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತುರ್ತು ಸೇವೆಗಳಾದ ಪೊಲೀಸ್, ಮೆಡಿಕಲ್ ಶಾಪ್‌ಗಳು, ಆರೋಗ್ಯ ಸೇವೆ ಮಾತ್ರ ಲಭ್ಯವಿತ್ತು. ಪೆಟ್ರೋಲ್‌ ಬಂಕ್‌ ಸಹ ಇರಲಿಲ್ಲ.

ಜಿಲ್ಲೆಯ ಮಡಿಕೇರಿ ನಗರ ಸೇರಿದಂತೆ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ ಭಾಗದಲ್ಲಿ ಜನರ ಓಡಾಟ ಬೆಳಿಗ್ಗೆಯಿಂದಲೂ ಇರಲಿಲ್ಲ. ಜನರು ಮನೆಯಿಂದ ಹೊರಗೆ ಬಾರದ ಕಾರಣ ಇಡೀ ಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು. ಸದಾ ವಾಹನ ದಟ್ಟಣೆಯಿಂದ ತುಂಬಿರುವ ಮಡಿಕೇರಿ ನಗರದ ಜಿ.ಟಿ ಸರ್ಕಲ್‌, ಚೌಕಿ, ಮಹದೇವಪೇಟೆ, ಕಾಲೇಜು ರಸ್ತೆಗಳಲ್ಲೂ ಜನರು ಸುಳಿಯಲಿಲ್ಲ.

ಕೆಎಸ್ಆರ್‌ಟಿಸಿ, ಖಾಸಗಿ ಬಸ್‌, ಬಾಡಿಗೆ ಆಟೋ, ಜೀಪು ವಾಹನ ಚಾಲಕರು ರಸ್ತೆಗೆ ಇಳಿಯದೆ ಸ್ವಯಂ ಪ್ರೇರಿತ ಬಂದ್‌ಗೆ ಸಹಕರಿಸಿದರು.

ಬೆಳಿಗ್ಗೆ ನಗರದ ರಾಜಾಸೀಟ್‌ ಹಾಗೂ ಹೆಲವು ರಸ್ತೆಗಳಲ್ಲಿ ವಾಕಿಂಗ್ ಹೋಗುವ ಮಂದಿಯು ಕಡಿಮೆ ಇದ್ದರು. ಇನ್ನು ಮುಂಜಾನೆ ಪೇಪರ್, ಹಾಲು ಕೊಳ್ಳುವವರ ಸಂಖ್ಯೆಯೂ ಕಡಿಮೆ ಆಗಿತ್ತು.

ಜನವಸತಿ ಪ್ರದೇಶಗಳಲ್ಲಿ ಯಾರೊಬ್ಬರೂ ಕಾಣದ ಕಾರಣ ಮುಖ್ಯರಸ್ತೆ ಸೇರಿದಂತೆ ರಸ್ತೆಗಳು ನಿರ್ಜನವಾಗಿದ್ದವು. ಬಸ್ ನಿಲ್ದಾಣದಲ್ಲಿ ಬಸ್‌ಗಳು ಹಾಗೂ ಜನರ ಸುಳಿವು ಇಲ್ಲದೇ ಬಿಕೋ ಎನ್ನುತ್ತಿತ್ತು. ಅಂಗಡಿ ಮುಂಗಟ್ಟು ಬಾರ್ ರೆಸ್ಟೋರೆಂಟ್, ಹೊಟೇಲ್, ಸರ್ವಿಸ್ ಸ್ಟೇಷನ್‌, ವಾಹನ ಶೋ ರೂಮ್‌, ಬಟ್ಟೆ, ಶೂ, ಮೊಬೈಲ್ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ವರ್ತಕರು ಸಹಕರಿಸಿದರು.

ಜಿಲ್ಲಾ ಆಸ್ಪತ್ರೆಯತ್ತ ಜನರು:ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೌಲಭ್ಯ ಇಲ್ಲದ ಕಾರಣ, ನಗರದ ಜಿಲ್ಲಾ ಆಸ್ಪತ್ರೆಯತ್ತ ರೋಗಿಗಳು ಬಂದು ಚಿಕಿತ್ಸೆ ಪಡೆದರು. ಇನ್ನು ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಆಸ್ಪತ್ರೆಯ ಒಳಭಾಗ ಹಾಗೂ ಹೊರಭಾಗದಲ್ಲಿ ಕ್ರಿಮಿ ನಾಶಕಗಳನ್ನು ಸಿಂಪಡಿಸಲಾಯಿತು.

ಇನ್ನಷ್ಟು ನಿಗಾ:ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೇರಳ –ಕೊಡಗು ಮಾರ್ಗದ ಚೆಕ್‌ಪೋಸ್ಟ್ ಮೂಲಕ ತೆರಳುವ ಎಲ್ಲಾ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ. ರಾಜ್ಯದ ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ ರಸ್ತೆ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು ಅಲ್ಲಿ ಇನ್ನಷ್ಟು ನಿಗಾ ವಹಿಸಲಾಗಿದೆ.

ಕೋವಿಡ್-19 ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯವನ್ನು ನಡೆಯುತ್ತಿದೆ. ಮಡಿಕೇರಿ ತಾಲ್ಲೂಕಿನಲ್ಲಿ 109, ವಿರಾಜಪೇಟೆ ತಾಲ್ಲೂಕಿನಲ್ಲಿ 88 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 91 ಜನರನ್ನು ಪತ್ತೆ ಹಚ್ಚಲಾಗಿದೆ. ನೆಗೆಟಿವ್ ವರದಿ ಕಾರಣ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ಒಂದು ಪ್ರಕರಣ ಸೇರಿದಂತೆ ಒಟ್ಟು 278 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಕೊರಂಟೈನ್‌ಗೆ ಒಳಪಡಿಸಲಾಗಿದೆ. 5 ಮಂದಿ ಪ್ರವಾಸಿಗರನ್ನು ರೆಸಾರ್ಟ್, ಹೋಂ ಸ್ಟೇಗಳಲ್ಲಿ ಸಂಪರ್ಕ ತಡೆ ಮಾಡಲಾಗಿದೆ.

ಒಟ್ಟು 5 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆಯಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT