ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದೂ ಇಲ್ಲದಂತಾದ ಖರೀದಿ ಕೇಂದ್ರಗಳು

ಆಕರ್ಷಕ ದರ ಇಲ್ಲ, ಸಾಗಾಟ ಬಲು ಕಷ್ಟ; ತಕ್ಷಣಕ್ಕೆ ಹಣ ಸಿಗುವುದಿಲ್ಲ...
Last Updated 6 ಫೆಬ್ರುವರಿ 2023, 12:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ರೈತರು ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಯಾವುದೇ ಕ್ರಮಗಳು ರೈತರಿಗೆ ಭಾಗ್ಯದ ಬಾಗಿಲನ್ನು ತೆರೆಸಿಲ್ಲ. ಬದಲಿಗೆ, ಕಷ್ಟ, ನಷ್ಟವೇ ಹೆಚ್ಚಿದೆ.

ವಿಶೇಷವಾಗಿ ಭತ್ತಕ್ಕೆ ಸಂಬಂಧಿಸಿದಂತೆ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದರೂ ಅವು ರೈತರಿಂದ ಸಾಕಷ್ಟು ದೂರದಲ್ಲೇ ಉಳಿದಿವೆ. ಸುಮಾರು 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದರೂ, ಈ ಕೇಂದ್ರಗಳಿಗೆ ನೋಂದಣಿ ಮಾಡಿರುವ ರೈತರ ಸಂಖ್ಯೆ ಕೇವಲ 467.

ಕಳೆದ ವರ್ಷ 860 ರೈತರು ನೋಂದಣಿ ಮಾಡಿಸಿಕೊಂಡು 28 ಸಾವಿರ ಕ್ವಿಂಟಲ್‌ ಭತ್ತವನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ್ದರು. ಈ ಬಾರಿ ನೋಂದಣಿಯಾದ ರೈತರ ಪ್ರಮಾಣ ಹಿಂದಿನ ವರ್ಷದ ಶೇ 50ರ ಆಸುಪಾಸಿನಲ್ಲಿದೆ. ಬಹುಪಾಲು ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ.

ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಕ್ವಿಂಟಲ್‌ಗೆ ₹ 2,060 ದರ ನೀಡಿ ಖರೀದಿಸುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಇಷ್ಟೇ ದರ ನೀಡಿ ಖರೀದಿಸುತ್ತಿದ್ದಾರೆ. ಖರೀದಿ ಕೇಂದ್ರಕ್ಕಾದರೆ ರೈತರೇ ಭತ್ತ ತರಬೇಕು. ಆದರೆ, ಮಧ್ಯವರ್ತಿಗಳು ಇಷ್ಟೇ ದರ ನೀಡಿ ಗದ್ದೆಯಲ್ಲೇ ಖರೀದಿಸುವುದರಿಂದ, ಖರೀದಿ ಕೇಂದ್ರಗಳು ಇದ್ದೂ ಇಲ್ಲದಂತಾಗಿದೆ.

ಸರ್ಕಾರ ನಿಗದಿ ಮಾಡಿರುವ ದರ ಏನೇನೂ ಸಾಲದು ಎಂಬುದು ಬಹುತೇಕ ರೈತರ ಅಭಿಪ್ರಾಯ. ದಿನದಿಂದ ದಿನಕ್ಕೆ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ಭತ್ತದ ಕೃಷಿಯೇ ಸಾಕಾಗಿ ಹೋಗಿದೆ. ಹೆಚ್ಚಿನ ಹಣ ಖರ್ಚು ಮಾಡಿ ಬೆಳೆದರೂ; ಸರ್ಕಾರ ಸಹ ಮಧ್ಯವರ್ತಿಗಳು ನೀಡುವಷ್ಟೇ ಕನಿಷ್ಠ ದರ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕಿನಲ್ಲಿ ಮಾತ್ರವೇ ಖರೀದಿ ಕೇಂದ್ರ ತೆರೆಯಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 17 ರೈತರು ನೋಂದಣಿ ಮಾಡಿಕೊಂಡಿದ್ದರೆ, ಸೋಮವಾರಪೇಟೆಯಲ್ಲಿ 175, ವಿರಾಜಪೇಟೆ ತಾಲ್ಲೂಕಿನಲ್ಲಿ 275 ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕೊಯ್ಲು ನಡೆಯುತ್ತಿದ್ದು, ಈಗಷ್ಟೇ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ.

ಖರೀದಿ ಕೇಂದ್ರಗಳೂ ರೈತರಿಗೆ ಸಾಕಷ್ಟು ಹತ್ತಿರದಲ್ಲಿಲ್ಲ. ಸೋಮವಾರಪೇಟೆ ತಾಲ್ಲೂಕಿನ ಖರೀದಿ ಕೇಂದ್ರ ಕುಶಾಲನಗರದಲ್ಲಿದೆ. ವಿರಾಜಪೇಟೆಯ ಖರೀದಿ ಕೇಂದ್ರ ಗೋಣಿಕೊಪ್ಪಲಿನಲ್ಲಿದೆ. ಖರೀದಿ ಕೇಂದ್ರಕ್ಕೆ ಭತ್ತ ತರುವುದಕ್ಕೆ ಸಾಕಷ್ಟು ಹಣ ವ್ಯಯಿಸಬೇಕಿದೆ. ಎಲ್ಲ ಭಾಗದ ರೈತರನ್ನು ಸಂಪರ್ಕಿಸುವ ಕೇಂದ್ರಗಳಿಲ್ಲದೇ ಇರುವುದೂ ರೈತರ ನಿರಾಸಕ್ತಿಗೆ ಕಾರಣವಾಗಿದೆ.

ಹೆಚ್ಚಿದ ಆಸಕ್ತಿ

ಗೋಣಿಕೊಪ್ಪಲು: ಕೃಷಿ ಮಾರಾಟ ಮಂಡಳಿಯಿಂದ ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಗೊಂಡಿದೆ. ವಿರಾಜಪೇಟೆ ತಾಲ್ಲೂಕಿನ 260 ಕೃಷಿಕರು ಇಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 10 ಸಾವಿರ ಕ್ವಿಂಟಲ್ ಭತ್ತ ಬರುವ ನಿರೀಕ್ಷೆಯಿದೆ. ಈಗಾಗಲೇ 2 ಸಾವಿರ ಕ್ವಿಂಟಲ್ ಬಂದಿದೆ. ಬೆಳೆಗಾರರು ಇದೀಗ ಆಸಕ್ತಿ ತೋರುತ್ತಿದ್ದಾರೆ ಎಂದು ಗೋಣಿಕೊಪ್ಪಲು ಎಪಿಎಂಸಿ ಕಾರ್ಯದರ್ಶಿ ಬಸವಣ್ಣ ತಿಳಿಸಿದರು.

ಕಟಾವಿನಲ್ಲೇ ಮಾರಾಟ

ವಿರಾಜಪೇಟೆ: ತಾಲ್ಲೂಕಿನಲ್ಲಿ ಅತಿರ, ತುಂಗ, ದೊಡ್ಡಿ, ಆರ್.ಎನ್.ಆರ್ ಸೇರಿದಂತೆ ಇನ್ನಿತರೆ ಭತ್ತದ ತಳಿ ಬೆಳೆಯಲಾಗುತ್ತದೆ. ಸಾಕಷ್ಟು ರೈತರು ಕಟಾವಿನ ಸಂದರ್ಭದಲ್ಲೇ ಮಧ್ಯವರ್ತಿಗಳಿಗೆ ಅಥವಾ ಭತ್ತದ ಮಿಲ್‌ಗಳಿಗೆ ಗದ್ದೆಯಿಂದಲೇ ಮಾರಾಟ ಮಾಡುತ್ತಾರೆ. ವಿರಾಜಪೇಟೆಯಲ್ಲಿ ಎಪಿಎಂಸಿ ಇಲ್ಲದಿರುವುದರಿಂದ ಹಾಗೂ ಇತರ ಕಾರಣಗಳಿಂದಲೂ ಎಪಿಎಂಸಿಗೆ ಮಾರಾಟ ಮಾಡುವ ಪ್ರಮಾಣ ಕಡಿಮೆಯಿದೆ.

ತಕ್ಷಣವೇ ಹಣ ಸಿಗಲ್ಲ

ಸಿದ್ದಾಪುರ: ಸರ್ಕಾರ ತೆರೆದಿರುವ ಖರೀದಿ ಕೇಂದ್ರಗಳಿಗೆ ಭತ್ತ ಮಾರಾಟ ಮಾಡಿದರೆ ತಕ್ಷಣಕ್ಕೆ ಹಣ ಸಿಗುವುದಿಲ್ಲ. ಭತ್ತ ಬೆಳೆಯಲು, ಕಟಾವು ಮಾಡಲು ಹಣ ಖರ್ಚು ಮಾಡಿರುವ ರೈತರು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ ಬಳಿಕ ತಿಂಗಳುಗಟ್ಟಲೇ ಕಾಯಬೇಕಿದೆ. ಹೀಗಾಗಿ, ಬಹುತೇಕ ರೈತರು ಬೆಲೆ ಸ್ವಲ್ಪ ಕಡಿಮೆಯಾದರೂ ಸರಿ, ತಕ್ಷಣ ಹಣ ಕೈಗೆ ಸಿಕ್ಕರೆ ಸಾಕು ಎಂಬ ದೃಷ್ಟಿಯಿಂದ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಹೊರಗಡೆ ಮಾರುಕಟ್ಟೆಯಲ್ಲಿರುವ ದರಕ್ಕಿಂತ ಹೆಚ್ಚಿನ ದರ ನೀಡಿದರೆ, ಖರೀದಿಸಿದ ಹಣವನ್ನು ತಕ್ಷಣವೇ ನೀಡಿದರೆ, ರೈತರು ಸುಲಭವಾಗಿ ತಲುಪಬಲ್ಲ ಕಡೆ ಕೇಂದ್ರಗಳಿದ್ದರೆ, ಖಂಡಿತವಾಗಿಯೂ ಖರೀದಿ ಕೇಂದ್ರ ಯಶಸ್ವಿಯಾಗುತ್ತದೆ. ರೈತರಿಗೆ ಗುಟುಕು ಜೀವ ನೀಡಿದಂತಾಗುತ್ತದೆ ಎನ್ನುತ್ತಾರೆ ರೈತರು.

ತಡವಾಗಿ ಖರೀದಿ

ನವೆಂಬರ್, ಡಿಸೆಂಬರ್‌ನಲ್ಲಿ ಭತ್ತ ಕಟಾವು ಮಾಡುತ್ತೇವೆ. ಸರ್ಕಾರ ತಡವಾಗಿ ಖರೀದಿಸುತ್ತದೆ, ಬೆಂಬಲ ಬೆಲೆ ಘೋಷಿಸುತ್ತದೆ. ಈ ನಡುವೆ ಶೇಖರಣೆ ಸಾಧ್ಯವಾಗುವುದಿಲ್ಲ. ಖರೀದಿ ಕೇಂದ್ರದಲ್ಲಿ ಹಣ ಸಿಗಲು ತಿಂಗಳು ಸಮಯ ಬೇಕಾಗುತ್ತದೆ. ಹೀಗಾಗಿ, ನಷ್ಟವಾದರೂ ಸ್ಥಳೀಯ ವ್ಯಾಪಾರಿಗಳಿಗೆ ಭತ್ತವನ್ನು ಮಾರಾಟ ಮಾಡುತ್ತಿದ್ದೇವೆ.

ಹೊಸಮನೆ ವಸಂತ್, ಕೃಷಿಕರು, ನೆಲ್ಯಹುದಿಕೇರಿ

ಎಲ್ಲಾ ಭತ್ತ ಖರೀದಿಸುವುದಿಲ್ಲ

ಸರ್ಕಾರ ತೆರೆದಿರುವ ಭತ್ತ ಖರೀದಿ ಕೇಂದ್ರಗಳಲ್ಲಿ ಎಲ್ಲ ಬಗೆಯ ಭತ್ತವನ್ನು ಖರೀದಿಸುತ್ತಿಲ್ಲ. ನಾವು ಬೆಳೆದದ್ದು ಅತಿರ ತಳಿಯ ಭತ್ತ. ಅದನ್ನು ಖರೀದಿ ಕೇಂದ್ರದಲ್ಲಿ ಖರೀದಿಸದೇ ಇದ್ದರೆ, ನಾವು ಅನಿವಾರ್ಯವಾಗಿ ಖಾಸಗಿಯಾಗಿಯೇ ಮಾರಾಟ ಮಾಡಬೇಕು. ಅದನ್ನು ಸ್ಥಳೀಯವಾಗಿಯೇ ಕ್ವಿಂಟಲ್‌ಗೆ ₹ 2,200ರಂತೆ ಮಾರಾಟ ಮಾಡಲಾಯಿತು.

ಪೊಡಮಾಡ ಮೋಹನ್, ಕೃಷಿಕ

ಹೆಚ್ಚಿನ ವ್ಯತ್ಯಾಸ ಇಲ್ಲ

ಸರ್ಕಾರ ತೆರೆದಿರುವ ಭತ್ತ ಖರೀದಿ ಕೇಂದ್ರದಲ್ಲಿನ ಬೆಲೆಗೂ ಖಾಸಗಿಯಾಗಿ ಖರೀದಿಸುವವರ ಬೆಲೆಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಜತೆಗೆ, ಅತಿರ, ದೊಡ್ಡಿ ಮುಂತಾದ ಭತ್ತವನ್ನು ಕೇಂದ್ರಗಳು ಖರೀದಿಸುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿಯೂ ಭತ್ತ ಖರೀದಿ ನಡೆಯುತ್ತಿಲ್ಲ. ಹೀಗಾಗಿ, ಭತ್ತದ ಮಿಲ್‌ಗೆ ಮಾರಾಟ ಮಾಡಿದ್ದೇವೆ. ಈ ಬಾರಿ ಅತಿರ ಭತ್ತಕ್ಕೆ ಕ್ವಿಂಟಾಲ್‌ಗೆ ₹ 2,100 ನಂತೆ ಮಾರಾಟ ಮಾಡಲಾಗಿದೆ

ಯು.ನಾಚಪ್ಪ, ಕದನೂರು

ಸರ್ಕಾರದ ಆದೇಶದಂತೆ ಕ್ರಮ

ಸರ್ಕಾರದ ಆದೇಶದಂತೆ ನಿಗದಿತ ದರ ನೀಡಿ ರೈತರಿಂದ ಭತ್ತ ಖರೀದಿ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ₹ 1,700ರವರೆಗೂ ದರ ಸಿಗುತ್ತಿದೆ. ರೈತರು ಖರೀದಿ ಕೇಂದ್ರಕ್ಕೆ ಭತ್ತವನ್ನು ತರುವುದೇ ಸಮಸ್ಯೆಯಾಗಿದೆ. ಆದರೆ, ಮನೆ ಬಾಗಿಲಿಗೆ ಬಂದು ಖರೀದಿ ಮಾಡುವುದರಿಂದ ಲಾಭ ಕಡಿಮೆಯಾದರೂ ಸಮಸ್ಯೆಯಾಗುವುದಿಲ್ಲ ಎಂಬುದು ಹೆಚ್ಚಿನ ರೈತರ ಅಭಿಪ್ರಾಯವಾಗಿದೆ.

ಯಾದವ್‌ಬಾಬು, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಸೋಮವಾರಪೇಟೆ

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಜೆ.ಸೋಮಣ್ಣ, ಡಿ.ಪಿ.ಲೋಕೇಶ್, ರಘು ಹೆಬ್ಬಾಲೆ, ರೆಜಿತ್‌ಕುಮಾರ್ ಗುಹ್ಯ, ಎಂ.ಎನ್.ಹೇಮಂತ್, ಸಿ.ಎಸ್.ಸುರೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT