ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶನಿವಾರಸಂತೆ: 4 ವರ್ಷದ ನಂತರ ನಡೆದ ಮೊದಲ ಗ್ರಾಮಸಭೆ!

ಶನಿವಾರಸಂತೆ: ಪ್ರಸ್ತಾಪಕ್ಕೆ ಬಂದ ಹಲವು ಸಮಸ್ಯೆಗಳು, ಜೆಜೆಎಂ ಕಾಮಗಾರಿ ಅಪೂರ್ಣಕ್ಕೆ ಅಸಮಾಧಾನ
Published 28 ಡಿಸೆಂಬರ್ 2023, 15:15 IST
Last Updated 28 ಡಿಸೆಂಬರ್ 2023, 15:15 IST
ಅಕ್ಷರ ಗಾತ್ರ

ಶನಿವಾರಸಂತೆ: ಅಂತೂ ಇಂತೂ ಶನಿವಾರಸಂತೆ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಬರೋಬ್ಬರಿ 4 ವರ್ಷಗಳ ನಂತರ ಗುರುವಾರ ನಡೆಯಿತು. ನಿರೀಕ್ಷೆಯಂತೆ ಸಭೆಯಲ್ಲಿ ಹಲವು ಸಮಸ್ಯೆಗಳು ರಿಂಗಣಿಸಿದವು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ನಾಡ ಕಚೇರಿ ಆವರಣದಲ್ಲಿ ಆರಂಭವಾದ ಸಭೆಯಲ್ಲಿ ಮೊದಲಿಗೆ ಬಿ.ಕೆ.ಚಂದ್ರು ಅವರು ‘ಗ್ರಾಮಸಭೆಯನ್ನು ಕಳೆದ 4 ವರ್ಷಗಳಿಂದ ನಡೆಸದಿರುವುದಕ್ಕೆ ಕಾರಣ ಕೊಡಿ’ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಗ್ರಾಮಸ್ಥರೂ ಧ್ವನಿಗೂಡಿಸಿದರು. 

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಪ್ರತಿಕ್ರಿಯಿಸಿ, ‘2019-20ರ ಸಾಲಿನಲ್ಲಿ ಗ್ರಾಮಸಭೆ ನಡೆಸಲಾಗಿದೆ. ಆಗಿನ ಅವಧಿಯಲ್ಲಿ ನಾನು ಈ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸಿರಲಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

ಸರೋಜ ಶೇಖರ್ ಪ್ರತಿಕ್ರಿಯಿಸಿ, ‘ನಾನು ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ನಡೆಸಲಾಗುತ್ತಿರಲಿಲ್ಲ ಎಂದರೆ, 2ನೇ ಅವಧಿಗೆ ಅಧ್ಯಕ್ಷೆಯಾಗಿದ್ದ ಫರ್ಜಾನ ಶಾಹಿದ್ ಖಾನ್ ‘ಚುನಾವಣೆ ನೀತಿಸಂಹಿತೆಯಿಂದ ಗ್ರಾಮಸಭೆ ನಡೆಸಲಾಗಿರಲಿಲ್ಲ’ ಎಂದರು. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು.

ಸದಸ್ಯ ಶರತ್‍ ಶೇಖರ ಮಾತನಾಡಿ, ‘ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಅರಣ್ಯ ಇಲಾಖೆಗೆ ಸೇರಿದ ನೆಡುತೋಪು ಜಾಗದಲ್ಲಿ ಹಾವುಗೊಲ್ಲರ ಕೇರಿ ಇದ್ದು ಅಲ್ಲಿನ ನಿವಾಸಿಗಳು ನಮ್ಮ ಗ್ರಾಮ ಪಂಚಾಯಿತಿಯ ಮತದಾನದ ಹಕ್ಕುದಾರರಾಗಿದ್ದಾರೆ. ಮತಚೀಟಿ, ಪಡಿತರ ಚೀಟಿಯನ್ನು ಹೊಂದಿದ್ದಾರೆ. ಆದರೆ, ನಮ್ಮ ಗ್ರಾಮ ಪಂಚಾಯಿತಿಯಿಂದ ಅಲ್ಲಿನ ನಿವಾಸಿಗಳಿಗೆ ಮೂಲಸೌಲಣ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಯ ಪ್ರಸ್ತಾಪಿಸಿದರು. ಈ ಜಾಗವನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಉಪ ತಹಸಿಲ್ದಾರ್ ನಾಗರಾಜ್, ‘ಅರಣ್ಯ ಇಲಾಖೆಗೆ ಒಳಪಡುವ ಜಾಗವನ್ನು ಕಂದಾಯ ಇಲಾಖೆಯಿಂದ ಮಂಜೂರಾತಿ ಮಾಡಿಕೊಡಲು ಸಾಧ್ಯವಾಗುವುದಿಲ್ಲ’ ಎಂದರು.

ಆರ್.ಪಿ.ಮೋಹನ್, ಭುವನೇಶ್ವರಿ ಹರೀಶ್ ಅವರು ಕಂದಾಯ ಇಲಾಖೆಯ ಅಧಿಕಾರಿಗಳು ಅರ್ಜಿದಾರರ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ಸದಸ್ಯರಾದ ಶರತ್‍ಶೇಖರ್, ಎಸ್.ಎನ್.ರಘು, ಆದಿತ್ಯ ಗೌಡ, ಎಸ್.ಆರ್.ಮಧು, ಸರೋಜಾ ಶೇಖರ್, ಪರ್ಜಾನ ಶಾಹಿದ್ ಖಾನ್, ಕಾವೇರಿ, ಸರಸ್ವತಿ ಕಾರ್ಯದರ್ಶಿ ದೇವರಾಜ್ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆ ಸಭೆಯಲ್ಲಿ ಹಲವು ಮಂದಿ ಗ್ರಾಮಸ್ಥರು ಭಾಗಿ ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ

ಪ್ರತಿಧ್ವನಿಸಿದ ಸಂಚಾರ ದಟ್ಟಣೆ

ಸಮಸ್ಯೆ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಸಂಚಾರ ಸಮಸ್ಯೆ ಉಲ್ಬಣಿಸಿದೆ. ಪಟ್ಟಣದಲ್ಲಿ ದ್ವಿಚಕ್ರ ವಾಹನ ಸರಣಿ ಕಳ್ಳತನ ಪ್ರಕರಣಗಳೂ ಹೆಚ್ಚಾಗುತ್ತಿವೆ. ವರ್ತಕರ ಜಾಹೀರಾತು ಫಲಕಗಳನ್ನು ಚರಂಡಿಯಿಂದ ಈಚೆಗೆ ಇಡುತ್ತಿರುವುದರಿಂದ ವಾಹನ ನಿಲ್ಲಿಸಲು ಅಡಚಣೆಯಾಗುತ್ತಿದೆ ಎಂದು ಹರೀಶ್‍ಕುಮಾರ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಸರೋಜ ಶೇಖರ್ ಧ್ವನಿಗೂಡಿಸಿದರು. ಪೊಲೀಸ್ ಠಾಣಾಧಿಕಾರಿ ಗೋವಿಂದ್‍ರಾಜ್ ಪ್ರತಿಕ್ರಿಯಿಸಿ ‘ಸಂಚಾರ ಸಮಸ್ಯೆ ಪಟ್ಟಣದಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ ಮತ್ತು ನಾಗರಿಕರು ಸಹಕರಿಸಬೇಕು. ವಾಹನ ಕಳ್ಳತನ ಪ್ರಕರಣಗಳ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ’ ಎಂದರು.

ಜಲಜೀವನ್‌ ಮಿಷನ್‌ ಅಪೂರ್ಣ; ಕುಡಿಯುವ ನೀರಿಗೂ ಸಮಸ್ಯೆ

‘ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜುವಿಗೆ ಮೀಟರ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ವೇಳೆ ಗ್ರಾಮ ಪಂಚಾಯಿತಿಯಿಂದ ಸರಬರಾಜಾಗುತ್ತಿದ್ದ ಪೈಪ್‍ಲೈನ್ ಹಾನಿಯಾಗಿರುವುದರಿಂದ ಕುಡಿಯುವ ನೀರಿಗೆ ಈಗಲೂ ತೊಂದರೆಯಾಗುತ್ತಿದೆ’ ಎಂದು ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಎಸ್.ಸಿ.ಶರತ್‍ ಶೇಖರ್ ಮಾತನಾಡಿ ‘ಜಲಜೀವನ್ ಮಿಷನ್‌ನ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ನಮ್ಮ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಸಮಸ್ಯೆಯಾಗುತ್ತಿದೆ’ ಎಂದು ದೂರಿದರು. ಜಲಜೀವನ್ ಮಿಷನ್‌ನ ಎಂಜಿನಿಯರ್‌ ಕೀರ್ತನ್ ಪ್ರತಿಕ್ರಿಯಿಸಿ ‘ಈ ಸಮಸ್ಯೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಈ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT