ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊಡಗಿನಲ್ಲೂ ಹುತ್ತರಿ ಹಬ್ಬಕ್ಕೆ ಭರದ ಸಿದ್ಧತೆ

Published 27 ನವೆಂಬರ್ 2023, 6:10 IST
Last Updated 27 ನವೆಂಬರ್ 2023, 6:10 IST
ಅಕ್ಷರ ಗಾತ್ರ

ಸೋಮವಾರಪೇಟೆ: ಉತ್ತರ ಕೊಡಗಿನಲ್ಲೂ ಹುತ್ತರಿ ಹಬ್ಬ ಆಚರಣೆಯ ಮೂಲಕ ಹೊಸ ಅಕ್ಕಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಂಭ್ರಮಕ್ಕೆ ಜನರು ತಯಾರಿ ನಡೆಸುತ್ತಿದ್ದಾರೆ.

ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಭತ್ತದ ಪೈರು ಕುಯಿಲಿಗೆ ಬಂದ ಸಮಯ. ಮಾರ್ಗಶಿರ ಮಾಸದ ಹುಣ್ಣಿಮೆಯ ದಿನ ಕೊಡಗಿನಲ್ಲಿ ಕೊಡವರು ಸೇರಿದಂತೆ ಇತರ ಜನಾಂಗದವರು ಜಾತಿ ಬೇಧವಿಲ್ಲದೆ ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಹಬ್ಬದಲ್ಲಿ ವಿಶೇಷವಾಗಿ ಹೊಸ ಅಕ್ಕಿ ಪಾಯಸ, ತಂಬಿಟ್ಟು (ಉರಿದ ಹಸಿ ಅಕ್ಕಿಯನ್ನು ಹುಡಿಮಾಡಿ ಹಲವು ವಿಶೇಷ ವಸ್ತುಗಳೊಂದಿಗೆ ಹುತ್ತರಿ ಹಬ್ಬಕ್ಕೆ ಮಾತ್ರ ತಯಾರಿಸುವ ಒಂದು ಖಾದ್ಯ) ಉಳಿದಂತೆ ಅವರವರ ಅನುಕೂಲಕ್ಕೆ ತಕ್ಕಂತೆ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಬಂದು ಮಿತ್ರರೊಡಗೂಡಿ ಸೇವಿಸಿ ಸಂಭ್ರಮಿಸುತ್ತಾರೆ.

ಹುತ್ತರಿ ಹಬ್ಬವು ಸಮೀಪಿಸುತ್ತಿದ್ದಂತೆ ಕೊಡಗಿನ ಪ್ರತಿಯೊಂದು ಕುಟುಂಬಗಳು ತಮ್ಮ ಮನೆ ಮಠಗಳನ್ನು ಸುಣ್ಣ ಬಣ್ಣ, ತಳಿರು ತೋರಣಗಳಿಂದ ಶೃಂಗಾರ ಮಾಡುತ್ತಾರೆ. ಮಕ್ಕಳಿಗಂತೂ ಹೊಸ ಉಡುಪಿನ ಸಂಭ್ರಮ. ಅದರಂತೆ ಎಲ್ಲೆಡೆಯಲ್ಲಿಯೂ ಪಟಾಕಿಗಳ ಸಂಭ್ರಮ. ಮನೆ ಮಂದಿಗೆಲ್ಲ ಉತ್ಸವದ ಸಂಭ್ರಮ.

ಕೊಡವ ಜನಾಂಗದವರು ಹುತ್ತರಿ ಹಬ್ಬ ಹತ್ತಿರವಾಗುತ್ತಿದ್ದಂತೆ, ನಾಲ್ಕು ದಿವಸ ಮೊದಲು ಪ್ರತಿ ಊರಿನಾದ್ಯಂತ ‘ಮಂದ್‌’ಗೆ ಸೇರುವುದು ವಾಡಿಕೆ. ‘ಮಂದ್’ ಎಂದರೆ ಊರಿನ ನಾಗರಿಕರೆಲ್ಲ ಸೇರಿ ಸಾಂಪ್ರದಾಯಿಕ ಕೋಲಾಟ ನಡೆಸುವ ಸ್ಥಳ. ಹಾಗೆಯೆ, ಹುತ್ತರಿ ಕಳೆದ ಎರಡು ದಿವಸ ಊರು ‘ಮಂದ್‌’ನಲ್ಲಿ ಕೋಲಾಟ ನಡೆಸಿ ಮೂರನೆ ದಿನ ‘ನಾಡ್‌ ಮಂದ್‌’ ಕೋಲಾಟಕ್ಕೆ ತೆರಳಿ ಎರಡು ದಿನದ ಕೋಲಾಟದ ಬಳಿಕ ಹಬ್ಬಕ್ಕೆ ತೆರೆ ಎಳೆಯಲಾಗುವುದು.

ಸೋಮವಾರಪೇಟೆ ಸಮೀಪದ ಅರೆಯೂರು ಗ್ರಾಮದಲ್ಲಿ ಗ್ರಾಮಸ್ಥರು ಹುತ್ತರಿ ಹಬ್ಬವನ್ನು ಬುಧವಾರ ಆಚರಿಸಿದರು
ಸೋಮವಾರಪೇಟೆ ಸಮೀಪದ ಅರೆಯೂರು ಗ್ರಾಮದಲ್ಲಿ ಗ್ರಾಮಸ್ಥರು ಹುತ್ತರಿ ಹಬ್ಬವನ್ನು ಬುಧವಾರ ಆಚರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT