ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ರಸ್ತೆ ಬದಿಗಳಲ್ಲಿ ಗುಲ್‌ಮೊಹರ್ ರಂಗು

Published 14 ಮೇ 2024, 5:46 IST
Last Updated 14 ಮೇ 2024, 5:46 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಇದೀಗ ಗುಲ್‌ಮೊಹರ್ ತನ್ನ ಸೌಂದರ್ಯದ ಮೊಹರನ್ನೊತ್ತಿದೆ. ಮರದ ತುಂಬೆಲ್ಲ ಕೆಂಪು ಹೂಗಳನ್ನರಳಿಸಿಕೊಂಡು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಉತ್ತರ ಕೊಡಗಿನಲ್ಲೇ ಹೆಚ್ಚಾಗಿ ಕಾಣಸಿಗುವ ಈ ಮರಗಳು ಬಿರುಬೇಸಿಗೆಯಲ್ಲೂ ಹೂವರಳಿಸಿಕೊಂಡು ಬಿಸಿಲಿಗೆ ಸೆಡ್ಡು ಹೊಡೆದಿವೆ. ಮಾತ್ರವಲ್ಲ, ಈಚೆಗೆ ಬೀಸಿದ ಬಿರುಗಾಳಿ ಮಳೆಗೂ ಜಗ್ಗದೇ, ಅಳುಕದೇ ಎಲ್ಲರ ಕಣ್ಮನಗಳನ್ನು ತನ್ನತ್ತ ಆಕರ್ಷಿಸುತ್ತಿವೆ.

ಕುಶಾಲನಗರದ ವ್ಯಾಪ್ತಿಯಲ್ಲಿ ಹೆಚ್ಚಿರುವ ಈ ಮರಗಳು ಕುಶಾಲನಗರದಿಂದ ಮಡಿಕೇರಿಗೆ ಬರುವ ಹಾದಿಗುಂಟ ಅಲ್ಲಲ್ಲಿ ತನ್ನ ರಂಗನ್ನು ಚೆಲ್ಲಿವೆ. ಈ ಹೂಮರಗಳು ಪ್ರವಾಸಿಗರಿಗೆ ರಂಗಿನ ಸ್ವಾಗತ ಕೋರುತ್ತಿವೆ. ಪ್ರಕೃತಿ ಸೌಂದರ್ಯಕ್ಕೆ ಕಿರೀಟವಿಟ್ಟಂತಿರುವ ಇವುಗಳ ಸೌಂದರ್ಯಕ್ಕೆ ಎಣೆ ಇಲ್ಲದಂತಿದೆ.

ಕವಿ ನಿಸಾರ್ ಅಹಮ್ಮದ್ ಅವರು ಗುಲ್‌ಮೊಹರಿನ ಈ ಹೂಗಳ ಅಂದವನ್ನು ತಮ್ಮ 2 ಕವನಗಳಲ್ಲಿ ವರ್ಣಿಸಿದ್ದಾರೆ. ‘ಗುಲ್‌ಮೊಹರ್‌ ಗೀತ’ ಎಂಬ ತಮ್ಮ ಒಂದು ಪದ್ಯದಲ್ಲಿ ಅವರು ‘ಬಿಸಿಲೆಣ್ಣೆಗೆ ಹೊತ್ತಿವೆ ಕೊಂಬೆಯ ಬತ್ತಿ ಝಗಝಗಿಸಿದೆ ತಣ್ಣಗೆ ನೆತ್ತಿ...’ ಎಂಬ ಸಾಲಿನಲ್ಲಿ ಚೆಂದವಾಗಿ ಹಿಡಿದಿಟ್ಟಿದ್ದಾರೆ. ಜೊತೆಗೆ, ‘ಹೂ ಮೊಗ್ಗಿಗೆ ಎದೆ ಕದಿಯುವ ಹಿಗ್ಗಿದೆ ಮರಕಿದೆ ಸ್ವಂತದ ಮೊಹರು...’ ಎಂಬ ಸಾಲುಗಳಲ್ಲಿ ಈ ಹೂವಿನ ಸೆಳೆಯುವಿಕೆಯ ಗಮ್ಮತ್ತನ್ನು ಹೇಳಿದ್ದಾರೆ.

ಕೇವಲ ಈ ಹೂಗಳು ಪ್ರಕೃತಿ ಪ್ರಿಯರ ಕಣ್ಣಿಗೆ ಮಾತ್ರ ಹಬ್ಬವಲ್ಲ, ಜೇನ್ನೋಣಗಳ ಪಾಲಿಗೂ ಇವು ಸುಗ್ಗಿ. ಸಾವಿರಾರು ಜೇನ್ನೋಣಗಳನ್ನು ತನ್ನತ್ತ ಬರೆಸೆಳೆಯುವ ಈ ಪುಷ್ಪಗಳು ಜೀವವೈವಿಧ್ಯ ಉಳಿಸುವಲ್ಲಿಯೂ ಮಹತ್ವದ್ದಾಗಿವೆ.

ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಹೂಗಳು ಅರಳುವುದರಿಂದ ಈ ಮರವನ್ನು ಮೇ ಫ್ಲವರ್ ಎಂದೇ ಕರೆಯುತ್ತಾರೆ. ಡೆಲೋನಿಕ್ ರೆಜಿಯಾ ರಾಫ್’ ಅಥವಾ ಡೆಲೋನಿಕ್ಸ್ ಎಂಬ ಹೆಸರಿನಿಂದ ಕರೆಯಲಾಗುವ ಈ ಹೂವನ್ನು ಹಿಂದಿಯಲ್ಲಿ ಗುಲ್‌ಮೊಹರ್‌ ಎಂದು ಅರ್ಥಪೂರ್ಣವಾಗಿಯೇ ಹೆಸರಿಸಲಾಗಿದೆ.

ಈ ಹೂಗಳ ದಳಗಳನ್ನು ಬಿಡಿಸಿ ಅವುಗಳಿಂದ ಕೋಳಿಜಗಳದ ಆಟವನ್ನು ಆಡುವ ಮೂಲಕ ಚಿಣ್ಣರಿಗೂ ಈ ಹೂಗಳೆಂದರೆ ಪಂಚಪ್ರಾಣ. ಎಲ್ಲಿಯಾದರೂ ಕೈಗೆ ರೆಂಬೆಗಳು ಸಿಕ್ಕರಂತೂ ಮುಗಿದೇ ಹೋಯಿತು. ಹೂಗಳನ್ನೆಲ್ಲ ಕಿತ್ತು ಅವುಗಳ ದಳಗಳಿಂದ ಆಟವಾಡುತ್ತಾರೆ.

ಅಪಾಯದ ಮರ!

ಗುಲ್‌ಮೊಹರ್ ಹೂ ನೋಡುವುದಕಷ್ಟೇ ಚೆಂದ. ಆದರೆ, ಈ ಮರ ಅತ್ಯಂತ ಟೊಳ್ಳಾಗಿರುವ ಮರವೂ ಹೌದು. ಬೀಸುವ ಗಾಳಿಗೆ ಸುಲಭವಾಗಿ ಇವು ಧರೆಗುರುಳಬಲ್ಲವು. ವಿಶೇಷವಾಗಿ ಪೂರ್ವಮುಂಗಾರಿನಲ್ಲಿ ಬೀಸುವ ಬಿರುಗಾಳಿಗೆ ಇವು ಬೀಳುವ ಸಾಧ್ಯತೆಗಳು ಅಧಿಕ. ಹಾಗಾಗಿ, ಇಂತಹ ಮರಗಳ ಕೆಳಗೆ ಗಾಳಿ ಬೀಸುವಾಗ ನಿಲ್ಲುವುದು, ವಾಹನಗಳನ್ನು ನಿಲ್ಲಿಸುವುದರಿಂದ ಅಪಾಯಗಳೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT