ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಮರುಗಿದ ಗೃಹ ಸಚಿವ; ಕಠಿಣ ಶಿಕ್ಷೆಯ ಭರವಸೆ

ಕೊಲೆಯಾದ ಬಾಲಕಿಯ ಮನೆಗೆ ಭೇಟಿ ನೀಡಿದ ಸಚಿವ ಡಾ.ಜಿ.ಪರಮೇಶ್ವರ
Published 16 ಮೇ 2024, 14:31 IST
Last Updated 16 ಮೇ 2024, 14:31 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಈಚೆಗೆ ಕೊಲೆಯಾದ 16 ವರ್ಷ ಬಾಲಕಿಯ ಕುಟುಂಬಕ್ಕೆ ಗುರುವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಬಾಲಕಿಯ ಪೋಷಕರ ಸ್ಥಿತಿ ಕಂಡು ಮಮ್ಮಲ ಮರುಗಿದರು.

ಪ್ಲಾಸ್ಟಿಕ್‌ನಿಂದ ಕಟ್ಟಿದ ಗೋಡೆಗಳು, ಹೆಂಚಿನ ಚಾವಣಿಯ ಪುಟ್ಟದಾದ ಮನೆಯೊಳಗೆ ಅವರ ಅಂಗರಕ್ಷಕರು, ‘ಇನ್ನಿತರರು ಒಳಗೆ ಹೋಗುವುದು ಬೇಡ. ಮನೆ ತುಂಬಾ ಚಿಕ್ಕದಾಗಿದೆ’ ಎಂದು ತಡೆದರು. ಕುಟುಂಬದವರ ದಯನೀಯ ಸ್ಥಿತಿ ಕಂಡು ಬೇಸರಗೊಂಡ ಪರಮೇಶ್ವರ ಅವರು ಕೆಲಕಾಲ ಮೌನಿಯಾದರು.

‘ಇಂತಹ ಘಟನೆ ನಡೆಯಬಾರದಿತ್ತು. ಜೀವವನ್ನು ವಾಪಸ್ ತಂದುಕೊಡಲು ಸಾಧ್ಯವಿಲ್ಲ. ಆದರೆ, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಈ ಪ್ರಕರಣದ ವಿಚಾರಣೆಗೆಂದೇ ವಿಶೇಷ ನ್ಯಾಯಾಲಯ ಸ್ಥಾಪಿಸಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನೂ ನೇಮಕ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಈಗಲೇ ಪರಿಹಾರ ನೀಡುವುದು ಸಾಧ್ಯವಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಈ ಕುರಿತು ತಿಳಿಸಲಾಗುವುದು ಎಂದು ಹೇಳಿದರು. ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ಸರ್ಕಾರ ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಲಿದೆ ಎಂದೂ ಭರವಸೆ ನೀಡಿದರು.

ಶಾಸಕ ಡಾ.ಮಂತರ್‌ಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಡಿಜಿಪಿ ಅಮಿತ್‌ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಡಿವೈಎಸ್ಪಿ ಗಂಗಾಧರಪ್ಪ, ಡಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ.ಸತೀಶ್, ವಿ.ಪಿ.ಶಶಿಧರ್, ಮುಖಂಡರಾದ ಕೆ.ಪಿ.ಚಂದ್ರಕಲಾ, ಮನು ಮೇದಪ್ಪ, ಮಾದಪುರ ಹರೀಶ್ ಕೆ.ಎ.ಯಾಕುಬ್, ಶೀಲಾ ಡಿಸೋಜ, ಎಚ್.ಆರ್.ಸುರೇಶ್, ಬಿ.ಈ.ಜಯೇಂದ್ರ, ಕೆ.ಎ.ಆದಂ ಭಾಗವಹಿಸಿದ್ದರು.

ಜನರಿಂದ ತುಂಬಿ ಹೋದ ನಿರ್ಜನವಾಗಿದ್ದ ಪ್ರದೇಶ: ರಸ್ತೆಯಿಂದ ಸುಮಾರು ಒಂದೂವರೆ ಕಿ.ಮೀಗೂ ಅಧಿಕ ದೂರದಲ್ಲಿ ಬೆಟ್ಟದ ಮೇಲಿರುವ ಈ ಪ್ರದೇಶದಲ್ಲಿ  ಗೃಹ ಸಚಿವರ ಆಗಮಿಸುತ್ತಿದ್ದಂತೆ ಕಾಂಗ್ರೆಸ್‌  ಪಕ್ಷದ ಮುಖಂಡರು, ಕಾರ್ಯಕರ್ತರು ತಂಡೋಪತಂಡವಾಗಿ ಬಂದರು. ಸುತ್ತಮುತ್ತಲ  ಪ್ರದೇಶಗಳ ನಿವಾಸಿಗಳು ಬಂದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೂ ಇದ್ದರು. ಕುಟುಂಬವೊಂದೇ ವಾಸವಿದ್ದು, ನಿರ್ಜನವಾಗಿದ್ದ ಈ ಪ್ರದೇಶ ಕ್ಷಣಾರ್ಧದಲ್ಲಿ ಜನರಿಂದ ತುಂಬಿ ಹೋಗಿತ್ತು. ಗೃಹಸಚಿವರು ವಾಪಸ್ ತೆರಳುತ್ತಿದ್ದಂತೆ ಜನರೆಲ್ಲರೂ ಅಲ್ಲಿಂದ ಹೊರಟರು. ಪೊಲೀಸರು ಹೊರಟರು. ಕೊನೆಗೆ ಕುಟುಂಬದವರು ಮಾತ್ರವೇ ಉಳಿಯುವಂತಾಯಿತು.

ಸೋಮವಾರಪೇಟೆ ಸಮೀಪದ ಕುಂಬಾರಗಡಿಗೆ ಗ್ರಾಮದಲ್ಲಿ ಮೀನಾ ಹತ್ಯೆಯಾದ ಸ್ಥಳದಲ್ಲಿ ಎಸ್.ಪಿ. ರಾಮರಾಜನ್ ಅವರಿಂದ ಮಾಹಿತಿ ಪಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌
ಸೋಮವಾರಪೇಟೆ ಸಮೀಪದ ಕುಂಬಾರಗಡಿಗೆ ಗ್ರಾಮದಲ್ಲಿ ಮೀನಾ ಹತ್ಯೆಯಾದ ಸ್ಥಳದಲ್ಲಿ ಎಸ್.ಪಿ. ರಾಮರಾಜನ್ ಅವರಿಂದ ಮಾಹಿತಿ ಪಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌

Highlights - ಕೃತ್ಯವನ್ನು ಖಂಡಿಸಿದ ಗೃಹ ಸಚಿವ ಆರೋಪಿಗೆ ಕಠಿಣ ಶಿಕ್ಷೆಯ ಭರವಸೆ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT