ಕುಶಾಲನಗರ: ಯುಗಾದಿ ಹೊಸ ಸಂವತ್ಸರದ ಮೊದಲ ದಿನ. ರೈತರಿಗೆ ಅದು ಹೊಸ ವರ್ಷದ ಬೇಸಾಯದ ಆರಂಭದ ಶುಭ ದಿನ. ಉತ್ತರ ಕೊಡಗಿನ ಗಡಿ ಗ್ರಾಮಗಳಲ್ಲಿ ಯುಗಾದಿಯ ದಿನ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯದ ಕೆಲಸ ಆರಂಭಿಸುತ್ತಾರೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.
ಕಳೆದ 2 ದಿನಗಳ ಹಿಂದೆ ವರುಣರಾಯ ಕೃಪೆ ತೋರಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ. ಜಲಮೂಲಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಏರಿಕೆ ಕಂಡು ಬಂದಿದೆ. ಅಲ್ಲದೆ, ಗಿಡಮರಗಳು ಚಿಗುರಲು ಆರಂಭಿಸಿವೆ. ರೈತಾಪಿ ಜನರ ಆತಂಕವನ್ನು ದೂರ ಮಾಡು ಎಂದು ವರುಣ ದೇವರಲ್ಲಿ ಪ್ರಾರ್ಥಿಸುವ ಮೂಲಕ ಹೊನ್ನಾರು ಉತ್ಸವವನ್ನು ಆಚರಿಸಲು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ರೈತರು ಬೇಸಾಯ ಸಂಬಂಧಿ ಆಚರಣೆ, ಸಂಪ್ರದಾಯಗಳನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಬಯಲುಸೀಮೆ ಪ್ರದೇಶವಾದ ಹಾರಂಗಿ ಬಯಲು ಪ್ರದೇಶದ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಸೆ, ಕೂಡಿಗೆ, ಭುವನಗಿರಿ, ಸೀಗೆಹೊಸೂರು, ನಲ್ಲೂರು, ಮಣಜೂರು ಮೊದಲಾದ ಹಳ್ಳಿಗಳಲ್ಲಿ ರೈತರು ತಮ್ಮ ಪೂರ್ವಿಕರ ಕಾಲದಿಂದಲೂ ಯುಗಾದಿ ಹಬ್ಬದಂದು ಹೊನ್ನಾರು ಉಳುಮೆಯ ಮೂಲಕ ಯುಗಾದಿಯನ್ನು ವೈಶಿಷ್ಟಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
‘ಯುಗಾದಿ ಹಬ್ಬದ ಅಂಗವಾಗಿ ರೈತರು ತಮ್ಮ ಮನೆಗಳು ಹಾಗೂ ಇಡೀ ಹಳ್ಳಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರ ಬಿಡಿಸಿ ಅಲಂಕಾರಗೊಳಿಸುವರು. ಬೆಳಗಿನ ಜಾವ ತಮ್ಮ ಎತ್ತು ಹಾಗೂ ದನಕರುಗಳನ್ನು ನದಿಗೆ ಕರೆದೋಯ್ದು, ನೀರಿನಿಂದ ತೊಳೆದು ಅವುಗಳಿಗೆ ಗವುಸು ಹಾಗೂ ವಸ್ತ್ರಾಲಂಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ’ ಎಂದು ರೈತ ಮಹೇಶ್ ತಿಳಿಸಿದರು.
ಹೊಸ ಪಂಚಾಂಗದ ಪ್ರಕಾರ ಯಾರ ಹೆಸರಿನಲ್ಲಿ ಹೊನ್ನಾರು ಹೂಡಲು ಬರುತ್ತದೆಯೋ ಆ ಹೆಸರಿನ ರೈತನೇ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ಉಳುಮೆಗೆ ಆರಂಭಿಸುವುದು ಪದ್ಧತಿ ಆಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಹೊರಟ ಹೊನ್ನಾರು ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿ ಪ್ರಾರ್ಥನೆ ಸಲ್ಲಿಸುವರು.
‘ಗ್ರಾಮೀಣ ಪ್ರದೇಶದ ರೈತರು ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ಇಂದಿನ ಆಧುನೀಕತೆ ಹಾಗೂ ಜಾಗತೀಕರಣದ ಪ್ರಭಾವದ ನಡುವೆಯೂ ಗ್ರಾಮೀಣ ಜನಪದ ಸೊಗಡಾಗಿಯೇ ಉಳಿದಿದೆ’ ಎನ್ನುತ್ತಾರೆ ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.