ಗುರುವಾರ , ಆಗಸ್ಟ್ 11, 2022
20 °C
ಕೊಡಗಿನಲ್ಲಿ ‘ಸಿರಿ ಹಬ್ಬ’ಕ್ಕೆ ಪಟಾಕಿ ಮೆರುಗು, ‘ಪೊಲಿ ಪೊಲಿ ದೇವಾ ಪೊಲಿಯೇ ಬಾ...’ ಸ್ಮರಣೆ

ಕೊರೊನಾ: ಸರಳ ಹುತ್ತರಿ ಕೋಲಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗಿನಲ್ಲಿ ಕಳೆದ ಎರಡು ದಿನಗಳಿಂದಲೂ ಹುತ್ತರಿ ಸಂಭ್ರಮ ಮನೆ ಮಾಡಿದ್ದು, ಭಾನುವಾರ ರಾತ್ರಿ ಹಾಗೂ ಸೋಮವಾರ ಜಿಲ್ಲೆಯಾದ್ಯಂತ ‘ಸಿರಿ ಹಬ್ಬ’ ಆಚರಿಸಲಾಯಿತು.

ಭಾನುವಾರ ರಾತ್ರಿ ಎಲ್ಲೆಡೆ ಹುತ್ತರಿ ಆಚರಣೆ ನಡೆಯಿತು. ಕೊರೊನಾ ನಡುವೆಯೇ ಗ್ರಾಮೀಣ ಪ್ರದೇಶದಲ್ಲಿ ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳಲಾಯಿತು. ಆದರೆ, ಹುತ್ತರಿ ಮರು ದಿನ ನಡೆಯಬೇಕಿದ್ದ ಹುತ್ತರಿ ಕೋಲಾಟದ ಸಂಭ್ರಮವನ್ನು ಈ ಬಾರಿ ಕೊರೊನಾ ಕಸಿದುಕೊಂಡಿತ್ತು.

ಹುತ್ತರಿ ಹಬ್ಬದ ಬಳಿಕ ಕೊಡಗಿನ ಎಲ್ಲೆಲ್ಲೂ ಕೋಲಾಟ ಹಾಗೂ ಕ್ರೀಡಾಕೂಟದ ಸಂಭ್ರಮ ಮನೆ ಮಾಡುತ್ತಿತ್ತು. ಅದರಲ್ಲೂ ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಪಾಂಡಿರ ಕುಟುಂಬ ಹಾಗೂ ಓಂಕಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿದ್ದ ಹುತ್ತರಿ ಕೋಲಾಟಕ್ಕೆ ನೂರಾರು ಮಂದಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು. ಆದರೆ, ಈ ವರ್ಷ ಕೋಟೆ ಆವರಣದಲ್ಲಿ ಸರಳವಾಗಿ ಕೋಲಾಟ ನಡೆಯಿತು. ಸೀಮಿತ ಜನರು ಸೇರಿ ಕೋಲಾಟ ನಡೆಸಿದರು.

ಈ ವರ್ಷ ಗ್ರಾಮೀಣ ಪ್ರದೇಶದಲ್ಲೂ ಮಂದ್‌ಗಳಲ್ಲಿ ನಡೆಯಬೇಕಿದ್ದ ಕೋಲಾಟಕ್ಕೆ ವಿರಾಮ ಸಿಕ್ಕಿದೆ. ಹುತ್ತರಿ ನಡೆದು ಒಂದು ತಿಂಗಳು ಕಾಲ ಕೋಲಾಟ ನಡೆಯುತ್ತಿದ್ದು ವಿಶೇಷ.

ಚಳಿಯಲ್ಲೇ ಗದ್ದೆಯತ್ತ...: ಇನ್ನು ಭಾನುವಾರ ಪಾಡಿ ಇಗ್ಗುತಪ್ಪ ದೇಗುಲದಲ್ಲಿ ಕದಿರು ತೆಗೆಯುತ್ತಿದ್ದಂತೆಯೇ ಎಲ್ಲೆಡೆ ಹಬ್ಬಕ್ಕೆ ಚಾಲನೆ ಸಿಕ್ಕಿತು. ಚಳಿಯಲ್ಲಿ ರಾತ್ರಿಯೇ ಗದ್ದೆಗಳಿಗೆ ತೆರಳಿದ ಕೃಷಿಕರು, ಭತ್ತದ ಕದಿರು ಕೊಯ್ಲು ಮಾಡಿ ಧಾನ್ಯಲಕ್ಷ್ಮಿಯನ್ನು ಮೆರವಣಿಗೆ ಮೂಲಕ ಮನೆ ತುಂಬಿಸಿಕೊಂಡರು. ವ್ಯವಸಾಯವನ್ನೇ ನಂಬಿ ಬದುಕುವ ರೈತರು, ಭತ್ತದ ಪೈರು ಬೆಳೆದಾಗ ಅದನ್ನು ಶಾಸ್ತ್ರೋಕ್ತವಾಗಿ ಕಟಾವು ಮಾಡಿ ಮನೆ ತುಂಬಿಸಿಕೊಳ್ಳುವುದೇ ಹುತ್ತರಿ ಹಬ್ಬದ ವಿಶೇಷ.

ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರದ ಎಲೆಗಳಿಂದ ನೆರೆ ಕಟ್ಟಲಾಗಿತ್ತು. ಪ್ರಥಮ ಕೊಯ್ಲಿಗೆಂದು ನಿಗದಿಪಡಿಸಿದ್ದ ಗದ್ದೆಯಲ್ಲಿ ಕುಟುಂಬದ ಹಿರಿಯರು, ಪೈರಿಗೆ ಪೂಜೆ ಸಲ್ಲಿಸಿ ಹಾಲು–ಜೇನು ಸಮರ್ಪಿಸಿದರು.

ಕುಟುಂಬದ ಮುಖ್ಯಸ್ಥರು, ಮೂರು ಸುತ್ತು ಗುಂಡು ಹಾರಿಸಿದ ಮೇಲೆ ಕದಿರು ತೆಗೆಯಲಾಯಿತು. ‘ಪೊಲಿ ಪೊಲಿ ದೇವಾ ಪೊಲಿಯೇ ಬಾ...’ ಎಂದು ಘೋಷಣೆ ಕೂಗುತ್ತಾ ಪ್ರಾರ್ಥನೆ ಸಲ್ಲಿಸಿದರು. ನಂತರ, ಕದಿರನ್ನು ಮೂಲಮನೆಗೆ ತರಲಾಯಿತು.

ಬಾಳೆಹಣ್ಣಿನಿಂದ ತಯಾರಿಸಿದ್ದ ತಂಬಿಟ್ಟು, ಏಲಕ್ಕಿ ಪುಟ್, ಗದ್ದೆಯಿಂದ ಕೊಯ್ಲು ಮಾಡಿ ತಂದ ಭತ್ತದ ಅಕ್ಕಿಯ ಪಾಯಸವನ್ನು ಸವಿದ ಕೊಡವರು, ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅವರ ಕೋಲಾಟ, ಕತ್ತಿಯಾಟ್‌ ಹಬ್ಬಕ್ಕೆ ಮೆರುಗು ತುಂಬಿದವು. ಇತರೆ ಸಮುದಾಯ ಜನರೂ ಹುತ್ತರಿ ಆಚರಿಸಿದರು.

ಕಾಟಕೇರಿಯ ಕೂರನಬಾಣೆಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು. ಗ್ರಾಮದ ಕೊಂಬನ ದಯಾನಂದ ಹಾಗೂ ಪ್ರಮೀಳಾ ದಂಪತಿಯ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕೊಡಗಿನ ಸಾಂಪ್ರದಾಯಿಕ ಹಬ್ಬ ಪುತ್ತರಿ ನಮ್ಮೆಯನ್ನು ಚೆಟ್ಟಳ್ಳಿಯ ಪುತ್ತರಿರ ಐನ್‌ಮನೆಯಲ್ಲಿ ಸಾಂಪ್ರದಾಯ ಬದ್ಧವಾಗಿ ಆಚರಿಸಲಾಯಿತು.

ಚೆಯ್ಯಂಡಾಣೆಯ ಪುಲಿಮಕ್ಕಿಯಲ್ಲಿ ಚೆರುವಾಳಂಡ ಕುಟುಂಬಸ್ಥರು ಕೊಡಗಿನ ಸಾಂಪ್ರದಾಯಿಕ ಹಬ್ಬ ಪುತ್ತರಿಯನ್ನು ಸಂಭ್ರಮದಿಂದ ಆಚರಿಸಿದರು.

ಚೆರುವಾಳಂಡ ಕುಟುಂಬದ ಐನ್‍ಮನೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಧಾನ್ಯಲಕ್ಷ್ಮಿಯನ್ನು ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಂಡರು.

ನಂತರ, ವಿಶೇಷ ಪೂಜೆ ಸಲ್ಲಿಸಿ ನೆರದಿದ್ದವರಿಗೆ ಕದಿರು ವಿತರಣೆ ಮಾಡಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.

ಕುಟುಂಬಸ್ಥರಾದ ಸಿ.ಎಂ.ಸೋಮಯ್ಯ, ಸಿ.ಎಂ.ರಾಕೇಶ್, ಅಯ್ಯಪ್ಪ, ಮುದ್ದಪ್ಪ, ಕಾವೇರಪ್ಪ, ನಾಣಯ್ಯ, ದೊರೆ, ರಮೇಶ್, ಶಿವಪ್ಪ, ಗಣಪತಿ, ತಮ್ಮಯ್ಯ, ಸಚಿನ್, ಕುಶಾಲಪ್ಪ, ಚಂದನ್, ಭೀಮಯ್ಯ, ಸುಬ್ಬಯ್ಯ, ಡ್ಯಾನಿ, ಪೊನ್ನಪ್ಪ, ಸೋಮಣ್ಣ, ಪುನೀತ್, ನಿಶಾಂಕ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಹಾಜರಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು