ನಾಪೋಕ್ಲು: ಕೈಲ್ ಮುಹೂರ್ತ ಹಬ್ಬದ ಹಿನ್ನೆಲೆಯಲ್ಲಿ ಸಮೀಪದ ಕಕ್ಕಬ್ಬೆ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಸಿಂಹಮಾಸ 10ರ ಆರಾಧನೋತ್ಸವ ಸೋಮವಾರ ನಡೆಯಿತು.
ಇಗ್ಗುತಪ್ಪ ದೇವಸ್ಥಾನದಲ್ಲಿ ಉತ್ಸವದ ಅಂಗವಾಗಿ ತುಲಾಭಾರ ಸೇವೆ, ಎತ್ತು ಪೋರಾಟ, ಸತ್ಯ ನಾರಾಯಣ ಪೂಜೆ, ಮಹಾಪೂಜೆ, ದೇವರ ನೃತ್ಯಬಲಿ, ಅನ್ನಸಂತರ್ಪಣೆ ನಡೆಯಿತು. ಉತ್ಸವದಲ್ಲಿ ತಕ್ಕಮುಖ್ಯಸ್ಥರು, ಭಕ್ತರು ಪಾಲ್ಗೊಂಡಿದ್ದರು.
ಸಮೀಪದ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದ ಉತ್ಸವದಲ್ಲಿ ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು. ವಿಶೇಷ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಬಳಿಕ ದೇವರ ಉತ್ಸವ ಬಲಿ ಜರುಗಿತು. ಉತ್ಸವದಲ್ಲಿ ದೇವಾಲಯದ ತಕ್ಕಮುಖ್ಯಸ್ಥರು, ಭಕ್ತಜನ ಸಂಘದ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.