ವಿರಾಜಪೇಟೆ: ಆಧುನಿಕ ಪ್ರಪಂಚದಲ್ಲಿ ಉತ್ತಮ ಅವಕಾಶಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ಭವಿಸ್ಯ ರೂಪಿಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಎ.ಕೆ.ಸುಬ್ಬಯ್ಯ ಹಾಗೂ ಪೊನ್ನಮ್ಮ ದತ್ತಿ ನಿಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ತಮಗೆ ನೀಡಿದ ಯಾವುದೇ ಜವಾಬ್ದಾರಿಯನ್ನಾದರೂ ಶಿಸ್ತು, ಬುದ್ದಿವಂತಿಕೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಮಕ್ಕಳ ಒಂದು ಹಂತದವರೆಗಿನ ಜವಾಬ್ದಾರಿಯನ್ನು ಪೋಷಕರು ನಿಭಾಯಿಸಿದ ಬಳಿಕ ಮುಂದಿನ ಬದುಕಿನ ಹೊಣೆಗಾರಿಕೆಯನ್ನು ಮಕ್ಕಳೆ ನಿಭಾಯಿಸಬೇಕು. ಇಂದು ಅನೇಕ ಪ್ರತಿಭ್ವಾನಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹ ಅವಕಾಶ ವಂಚಿತ ಪ್ರತಿಭೆಗಳಿಗೆ ಸಮಾಜ ಅವಕಾಶ ಒದಗಿಸಲು ಕೆಲಸ ಮಾಡಬೇಕಿದೆ’ ಎಂದರು.
ಪತ್ರಿಕೋದ್ಯಮಿ ಚಿದ್ವಿಲಾಸ್ ಮಾತನಾಡಿ, ‘ವಿದ್ಯಾರ್ಥಿಗಳು ಬದುಕಿನಲ್ಲಿ ಸದೃಢತೆ ಹೊಂದಿರಬೇಕು. ಮೊಬೈಲ್ ಇತ್ಯಾದಿಗಳ ಚಿಂತೆ ಬದಿಗಿಟ್ಟು ವಿದ್ಯಾರ್ಥಿಗಳು ಬದುಕಿನ ಚಿಂತೆ ಮಾಡಬೇಕು. ಇಂದು ಮಕ್ಕಳಿಗೆ ಮಾರ್ದರ್ಶನ ನೀಡಲು, ಬುದ್ದಿ ಹೇಳಲು ಆತಂಕ ಪಡುವ ಸ್ಥಿತಿ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎ.ಎಸ್.ನರೇನ್ ಕಾರ್ಯಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು.
ದತ್ತಿ ನಿಧಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಪ್ರಜ್ವಲ್ ರಾಜೇಂದ್ರ ಸಭೆಗೆ ಮಾಹಿತಿ ನೀಡಿದರು.
ಟ್ರಸ್ಟ್ ವತಿಯಿಂದ ಈ ಸಂದರ್ಭ 130 ವಿದ್ಯಾರ್ಥಿನಿಯರಿಗೆ ಸುಮಾರು ₹31 ಲಕ್ಷ ಪ್ರೋತ್ಸಾಹ ಧನ ವಿತರಿಸಲಾಯಿತು.
ಚಂದನ ನರೇನ್ ಕಾರ್ಯಪ್ಪ, ನಿವೃತ್ತ ಶಿಕ್ಷಕರಾದ ಮಂಜುನಾಥ್, ಲಾಲ್ ಕುಮಾರ್ ಉಪಸ್ಥಿತರಿದ್ದರು.