ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸೂಚನೆ

ಕುಶಾಲನಗರ: ತಾಲ್ಲೂಕಿನ ವಿವಿಧ ಗಿರಿಜನ ಹಾಡಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ
Published 26 ಜೂನ್ 2024, 5:35 IST
Last Updated 26 ಜೂನ್ 2024, 5:35 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಅರಣ್ಯದಂಚಿನಲ್ಲಿರುವ ಗಿರಿಜನ ಹಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಗಿರಿಜನ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಡಾ.ಮಂತರ್ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಸಮೀಪದ ಹೆಬ್ಬಾಲೆ ಮತ್ತು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿನ್ನೇನಹಳ್ಳಿ ಹಾಗೂ ಬ್ಯಾಡಗೊಟ್ಟ ಹಾಗೂ ಭುವನಗಿರಿ ಗಿರಿಜನ ಹಾಡಿಗಳಿಗೆ ಮಂಗಳವಾರ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಹಾಡಿ ಜನರ ಸಮಸ್ಯೆಗಳನ್ನು ಆಲಿಸಿದರು. ಕಾಡಾನೆ ಹಾವಳಿ, ವಿದ್ಯುತ್, ರಸ್ತೆ ಹಾಗೂ ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ಹಾಡಿ ಜನರು ಶಾಸಕರ ಗಮನ ಸೆಳೆದರು.

‘ಗಿರಿಜನರ ಮನೆಗಳಿಗೆ ತೆರಳಿದ ಶಾಸಕರು ಖುದ್ದು ಸಮಸ್ಯೆಗಳನ್ನು ವೀಕ್ಷಿಸಿದರು. ಹಾಡಿ ರಸ್ತೆ, ಚರಂಡಿ ಹಾಗೂ ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಹಾಕಬಾರದು’ ಎಂದು ಜನರಿಗೆ ಕಿತು ಮಾತು ಹೇಳಿದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಹಾಡಿಯ ಜನರು ಸಮಸ್ಯೆಗಳಿಂದ ಮುಕ್ತಿ ಕಂಡಿಲ್ಲ. ಇದಕ್ಕೆ
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಬ್ದಾರಿಯೇ ಕಾರಣ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ಕಸ ಸಂಗ್ರಹಕ್ಕಾಗಿ ನಿಗದಿ ದಿನದಲ್ಲಿ ಪಂಚಾಯತಿ ಕಸದ ವಾಹನ ಬರುವ ವ್ಯವಸ್ಥೆ ಮಾಡಬೇಕು’ ಎಂದು ‌ಪಂಚಾಯತಿ ಅಧಿಕಾರಿ ಮೇದಪ್ಪ ಅವರಿಗೆ ಸೂಚಿಸಿದರು.

ಎಲ್ಲಾ ಮನೆಗಳಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಮನೆ ಇಲ್ಲದವರಿಗೆ ಹೊಸ ನಿರ್ಮಿಸಿಕೊಡಲು ಒತ್ತು ನೀಡಬೇಕು ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಸಿದ್ದೇಗೌಡ ಸೂಚನೆ ನೀಡಿದರು.

’ಈಗಾಗಲೇ ಹೊಸದಾಗಿ ಶೌಚಾಲಯ ಸಮೇತ ಹತ್ತು ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾವುದು ಎಂದು ಸಿದ್ದೇಗೌಡ ಹೇಳಿದರು.

ಗಿರಿಜನ ಕುಟುಂಬಗಳಿಗೆ ಪೌಷ್ಟಿಕ ಆಹಾರ ಅಡಿ ಆಹಾರ ಕಿಟ್ ವಿತರಿಸುತ್ತಿರುವ ಶಾಕರು ಕೇಳಿದಾಗ ‘ಸಣ್ಣ ಮೊಟ್ಟೆ ಹಾಗೂ ತೆರೆದಿರುವ ಪ್ಯಾಕ್‌ಗಳನ್ನು ನೀಡುತ್ತಾರೆ’ ಎಂದು ಮುಖಂಡರಾದ ಈರಪ್ಪ, ಧರ್ಮಣ್ಣ ದೂರಿದರು.

‘ಈ ಬಗ್ಗೆ ಏಜೆನ್ಸಿ ಅವರನ್ನು ಕರೆದು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಸೂಚಿಸಿದರು.

‘ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವ‌ ನೀರಿನ‌ ಟ್ಯಾಂಕ್ ಹಾನಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.‌ ಈ ಬಗ್ಗೆ ಮಾಹಿತಿ ನೀಡಿದ ಜಿ.ಪಂ. ಎಇಇ ವಿರೇಂದ್ರ ‘ಹಳೆಯ ಟ್ಯಾಂಕ್ ದುರಸ್ತಿ ಪಡಿಸಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಹೊಸ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

 ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಅಧಿಕಾರಿ ಹರೀಶ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಸದಸ್ಯ ಎಚ್.ಕೆ.ನಟೇಶ್ ಗೌಡ, ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ನಾಮ ನಿರ್ದೇಶಿತ ಸದಸ್ಯ ಎಂ.ವಿ‌.ಹರೀಶ್, ಕೃಷ್ಣೇಗೌಡ, ದೇವಪ್ಪ, ಉದಯ, ಪುಷ್ಪಲತಾ, ಟಿ.ಪಿ.ಹಮೀದ್, ಬಿ.ಡಿ.ಅಣ್ಷಯ್ಯ, ರಂಜನ್ ಹೆಬ್ಬಾಲೆ, ಹಾಡಿ ಮುಖಂಡರಾದ ಈಶ, ಈರಪ್ಪ, ಆದಂ, ಅಣ್ಣಪ್ಪ, ಧರ್ಮಣ್ಣ ಪಾಲ್ಗೊಂಡಿದ್ದರು.

ಆನೆ ಹಾವಳಿ: ಶಾಲೆಯಿಂದ ಹೊರಗುಳಿದ ಮಕ್ಕಳು ಹೆಬ್ಬಾಲೆ: ಅರಣ್ಯದಂಚಿನಲ್ಲಿರುವ ಚಿನ್ನೇನಹಳ್ಳಿ ಗಿರಿಜನ ಹಾಡಿ ಮಕ್ಕಳು ಕಾಡು ಪ್ರಾಣಿಗಳ ಭಯದಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಕಾಡಿನಿಂದ ಹೊರಗೆ ಬರುವ ಕಾಡಾನೆಗಳು ಹಾಗೂ ಕಾಡು ಹಂದಿಗಳ ಕಾಟದಿಂದ ಶಾಲೆಗೆ ಹೋಗಲು ಮಕ್ಕಳು ಭಯ ಪಡುತ್ತಿದ್ದಾರೆ. ಸುಮಾರು ಹತ್ತರಿಂದ ಹದಿನೈದು ಮಕ್ಕಳು ಇಲ್ಲಿಂದ ಹಳಗೋಟೆ ಹೆಬ್ಬಾಲೆ ಶಿರಂಗಾಲ ಕೂಡಿಗೆ ಭಾಗದ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದರು. ಆದರೆ ಯಾವುದೇ ವಾಹನ ವ್ಯವಸ್ಥೆ ಇಲ್ಲದ ಕಾರಣ ಐದಾರು ಕಿಲೋಮೀಟರ್ ನಡೆದುಕೊಂಡೇ ಶಾಲೆಗಳಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಸುರಕ್ಷತೆ ಇಲ್ಲದ ಕಾರಣ ಶಾಲೆಯಿಂದಲೇ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರಲ್ಲಿ ಗಿರಿಜನರು ತಮ್ಮ ಅಳಲು ತೊಡಿಕೊಂಡರು. ’ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಬೆಳಿಗ್ಗೆ ಸಂಜೆ ಶಾಲೆಗೆ ಹೋಗಿ ಬರಲು ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT