ವಿರಾಜಪೇಟೆ: ರಾಷ್ಟ್ರೀಯ ಹಬ್ಬಗಳ ಆಡಳಿತ ಸಮಿತಿ ಹಾಗೂ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾಜಿ ಸೈನಿಕರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ, ಸಂಘ ಖಂಡಿಸುತ್ತದೆ ಎಂದು ತಿಳಿಸಿದರು.
‘ಪಟ್ಟಣದ ತಾಲ್ಲೂಕು ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು, ದೇಶ ಸೇವೆ ಮಾಡಿದವರನ್ನು ಸನ್ಮಾನಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂತೆಯೇ ಪ್ರತಿವರ್ಷ ಮಾಜಿ ಸೈನಿಕರ ಸಹಕಾರ ಸಂಘದಿಂದ ಸೇನೆಯಲ್ಲಿ ಸಾಧನೆ ಮಾಡಿದ, ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರನ್ನು ಸನ್ಮಾನಿಸಲಾಗುತ್ತದೆ. ಈ ಬಾರಿಯೂ ಮಾಜಿ ಯೋಧರಾದ ನಾಯಕಂಡ ಬೋಪಣ್ಣ, ಪುಗ್ಗೆರ ಪೊನ್ನಪ್ಪ, ಐನಂಡ ಮಂದಣ್ಣ, ಕಟ್ಟೆರ ವಿಶ್ವನಾಥ್ ಹಾಗೂ ಮಂಡ್ಯೋಳಂಡ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು. ಆದರೆ ಸನ್ಮಾನಿತರಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಿರಲಿಲ್ಲ’ ಎಂದು ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶಿಷ್ಟಾಚಾರದ ಪ್ರಕಾರ ವೇದಿಕೆಯ ಮೊದಲ ಸಾಲಿನಲ್ಲಿ ಶಾಸಕರು, ತಹಶೀಲ್ದಾರ್, ಅಧಿಕಾರಿಗಳು ಸೇರಿದಂತೆ ಪ್ರಮುಖ ಅತಿಥಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಡನೇ ಸಾಲಿನ ಆಸನ ಸಂಪೂರ್ಣವಾಗಿ 22 ಮಂದಿ ಪುರಸಭೆ ಸದಸ್ಯರಿಗೆ ಮೀಸಲಾಗಿತ್ತು. ಮೂರನೇ ಸಾಲಿನಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ, ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡವರು, ಸೇರಿದಂತೆ ಇತರರಿಗೆ ಆಸನವನ್ನು ಮೀಸಲಾಗಿತ್ತು. ಮಾಜಿ ಸೈನಿಕರಿಗೆ ಆಸನದ ವ್ಯವಸ್ಥೆಯೇ ಇರಲಿಲ್ಲ’ ಎಂದರು.
‘ಹಲವು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧರಿಗೆ ರಾಷ್ಟ್ರೀಯ ಹಬ್ಬಗಳ ವೇದಿಕೆಯಲ್ಲಿ ಅಗೌರವ ತೋರಿರುವುದು ತಾಲ್ಲೂಕು ಆಡಳಿತಕ್ಕೆ ಶೋಭೆ ತರುವಂತಹದ್ದಲ್ಲ. ಈ ಅವಮಾನದಿಂದ ಸಭೆಯನ್ನು ಬಹಿಷ್ಕರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ವೇದಿಕೆಯಲ್ಲಿದ್ದ ಶಾಸಕರಿಗೆ ಅವಮಾನ ಮಾಡಬಾರದು ಎಂಬ ಏಕೈಕ ಉದ್ದೇಶದಿಂದ ಸುಮ್ಮನಾಗಬೇಕಾಯಿತು. ಮುಂದಿನ ಬಾರಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದ, ಖಜಾಂಚಿ ತೋರೆರ ಪೂವಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.