ಬುಧವಾರ, ಜನವರಿ 22, 2020
27 °C
ಕರಿಕೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜನೆ

‌14ರಂದು ಗಡಿನಾಡಲ್ಲಿ ‘ಕನ್ನಡ ಹಬ್ಬ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಜಿಲ್ಲೆಯ ಗಡಿಗ್ರಾಮವಾದ ಕರಿಕೆ ಪಂಚಾಯಿತಿ ಮತ್ತು ಇಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಡಿ.14ರಂದು ಕರಿಕೆ ಎಳ್ಳುಕೊಚ್ಚಿಯ ವಿಜಯನಗರ ಕೃಷ್ಣದೇವರಾಜ ಸಭಾ ಮಂಟಪದಲ್ಲಿ ‘ಕನ್ನಡ ಹಬ್ಬ’ ಆಯೋಜಿಸಲಾಗಿದೆ ಎಂದು ಕರಿಕೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್‌.ರಮಾನಾಥ್‌ ಇಲ್ಲಿ ಬುಧವಾರ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣವನ್ನು ಬೇಕಲ್‌ ಸಿ. ಜಯರಾಮಗೌಡ ಅವರು ನೆರವೇರಿಸಲಿದ್ದಾರೆ. ಬೆಳಿಗ್ಗೆ 9ಕ್ಕೆ ಕಾಟೂರು ಶಾಲೆಯಿಂದ ಭುವನೇಶ್ವರಿ ದೇವಿಯ ವರ್ಣರಂಜಿತ ಮೆರವಣಿಗೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಮೆರವಣಿಗೆಯಲ್ಲಿ ಭಿತ್ತಿಚಿತ್ರಗಳು, ಮುತ್ತಿನಛತ್ರಿ ಚಾಮರ, ಚೆಂಡೆವಾದ್ಯ, ಛದ್ಮವೇಷ, ಬ್ಯಾಂಡ್‌ಸೆಟ್‌, ಪೂರ್ಣಕುಂಭದೊಂದಿಗೆ ಸಾಗುವ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧ ಸಂಘ– ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಳಿಗ್ಗೆ 10ಕ್ಕೆ ಎಳ್ಳುಕೊಚ್ಚಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಲಿದ್ದಾರೆ. ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್‌, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌, ಸರ್ಕಾರಿ ವಕೀಲ ಶೀಧರನ್‌ ನಾಯರ್‌, ಕೊಡಗು ಲೇಖಕರ ಮತ್ತು ಕಲಾವಿಧ ಬಳಗದ ಅಧ್ಯಕ್ಷ ಕೇಶವ ಕಾಮತ್‌, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ, ಕಾಸರಗೋಡು ಪನತ್ತಡಿ ಗ್ರಾ.ಪಂ ಅಧ್ಯಕ್ಷ ಪಿ.ಜಿ.ಮೋಹನ್‌, ಜಿ.ಪಂ ಸದಸ್ಯೆ ಕವಿತಾ ಪ್ರಭಾಕರ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್‌ ಮಾತನಾಡಿ, ಹಬ್ಬಗಳ ಆಚರಣೆ ಸಮಿತಿ ಜನ್ಮತಳೆದು 5 ವರ್ಷ ಕಳೆದಿದೆ. ಪ್ರತಿವರ್ಷ ಅರ್ಥಪೂರ್ಣವಾಗಿ ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆ, ಅಂಬೇಡ್ಕರ್‌ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳನವನ್ನು ಮಾಡಿ ಇಲ್ಲಿಯ ಗಡಿನಾಡ ಕನ್ನಡ ಅಭಿಮಾನಿಗಳಲ್ಲಿ ಕನ್ನಡದ ಕಂಪು ಪ್ರಸರಿಸುವ ಕೆಲಸ ಕೂಡ ನಡೆದಿದೆ. ಮತ್ತೆ ಕನ್ನಡದ ಕಲರವವನ್ನು ಗ್ರಾಮದ ತುಂಬಾ ಕೊಂಡೊಯ್ಯುವ ಮತ್ತು ಇಡೀ ಗ್ರಾಮಕ್ಕೆ ಗ್ರಾಮವೇ ಹಬ್ಬವಾಗಿ ಆಚರಿಸುವ ಸಂದೇಶದೊಂದಿಗೆ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅನೇಕ ದಾನಿಗಳು ಆರ್ಥಿಕ ಕೊಡುಗೆ ನೀಡಿದ್ದಾರೆ. ಅಂದು ಗ್ರಾಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೂ ಸನ್ಮಾನಿಸಲಾಗುವುದು ಎಂದು ಬಾಲಚಂದ್ರ ನಾಯರ್‌ ತಿಳಿಸಿದರು.

ಸಮಾರೋಪ ಸಮಾರಂಭ: ಸಂಜೆ 5ರಿಂದ ನಡೆಯುವ ಸಮಾರೋಪ ಸಮಾರಂಭಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಚಾಲನೆ ನೀಡಲಿದ್ದಾರೆ. ಹಂಪಿ, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಡಾ.ತಂಬಂಡ ವಿಜಯ್ ಪೂಣಚ್ಚ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಮಾನವ ಬಂಧುತ್ವ ವೇದಿಕೆ ಸಂಚಾಲಕ ಸತೀಶ್‌ ಕುಮಾರ್‌, ವಕೀಲ, ಕೆ.ಆರ್‌.ವಿದ್ಯಾಧರ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು