ಮಡಿಕೇರಿ: ಮಡಿಕೇರಿ ದಸರೆಗೆ ನಾಂದಿ ಹಾಡಲಿರುವ ಕರಗೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ತನ್ನ ಪಾರಂಪರಿಕ ಸಾಂಸ್ಕೃತಿಯನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿರುವ, ಆಚಾರ ವಿಚಾರಗಳಿಗೆ ಸ್ವಲ್ಪವೂ ಕುಂದುಂಟಾಗದ ರೀತಿಯಲ್ಲಿ ನಡೆಯುತ್ತಿರುವ ಹಾಗೂ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗದೇ ಅಪ್ಪಟ್ಟ ಮಡಿಕೇರಿ ಸಂಸ್ಕೃತಿಯನ್ನು ಹೊಂದಿರುವ ಹೆಗ್ಗಳಿಕೆ ಈ ಕರಗೋತ್ಸವಕ್ಕೆ ಇರುವುದು ವಿಶೇಷ.
ಕೊಡಗನ್ನು ಆಳಿದ, ತಮ್ಮದೇಯಾದ ಕೊಡುಗೆ ಕೊಟ್ಟಿರುವ ಹಾಲೇರಿ ರಾಜವಂಶಸ್ಥರು ಆರಂಭಿಸಿದ ನಗರದ 4 ಶಕ್ತಿದೇವತೆಗಳ ಕರಗೋತ್ಸವವು ತಲೆಮಾರುಗಳನ್ನು ದಾಟಿ ಇಂದಿಗೂ ಉಳಿದುಕೊಂಡು ಬಂದಿದೆ. ಮಾತ್ರವಲ್ಲ, ಕೊಡಗಷ್ಟೇ ಅಲ್ಲ, ನಾಡಿನ ಸುಸಂಸ್ಕೃತ ಜನರ ಗಮನವನ್ನೂ ಸೆಳೆದಿದೆ.
ಹಿಂದೆ ಮಾರಕ ರೋಗ ಕಾಡಿ, ಬೀದಿಬೀದಿಯಲ್ಲಿ ನಿತ್ಯವೂ ಸಾವುಗಳು ಸಂಭವಿಸುತ್ತಿದ್ದಾಗ ಅಂದಿನ ಕೊಡಗಿನ ರಾಜರು ಇಲ್ಲಿನ ಪ್ರಧಾನ ಶಕ್ತಿದೇವತೆಗಳಾದ ದಂಡಿನ ಮಾರಿಯಮ್ಮ, ಕಂಚಿಕಾಮಾಕ್ಷಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ಕರಗೋತ್ಸವ ನಡೆಸಲು ಆರಂಭಿಸಿದರು ಎಂದು ಐತಿಹ್ಯ ಹೇಳುತ್ತದೆ. ಈ ಪರಿಪಾಠ ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದಿಂದಲೇ ಕರಗ ಹೊರುವವರು ಮಾಂಸಾಹಾರ ತ್ಯಜಿಸಿದ್ದು, ನಿಯಮಿತವಾಗಿ ಪೂಜಾವಿಧಿಗಳನ್ನು ಮಾಡುತ್ತಿದ್ದಾರೆ. ಸುಮಾರು 15 ದಿನಗಳಿಂದ ಪಾದರಕ್ಷೆ ಇಲ್ಲದೇ ನಡೆಯುವ ಅಭ್ಯಾಸವನ್ನೂ ಕೆಲವರು ನಡೆಸಿದ್ದಾರೆ.
ಬರಿಗಾಲಿನಲ್ಲಿ ಕರಗ ಹೊತ್ತು ನಿತ್ಯವೂ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯದಂತೆ ಕರಗಧಾರಿಗಳು ನವರಾತ್ರಿಯಲ್ಲಿ ಸಂಚರಿಸುತ್ತಾರೆ. ಸಂಪ್ರದಾಯದಂತೆ ತಮ್ಮ ವ್ಯಾಪ್ತಿಯ ಬಡಾವಣೆಗಳಿಗೆ ಭೇಟಿ ನೀಡುತ್ತಾರೆ. ಜನರು ಶ್ರದ್ಧಾ, ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಾರೆ.
‘ಸೇನೆಗೂ ಸೇರಿದರೂ ಕರಗ ಹೊರುವುದನ್ನು ತಪ್ಪಿಸಿಕೊಳ್ಳಲಿಲ್ಲ’
ಕಳೆದ 52 ವರ್ಷಗಳಿಂದ ಇಲ್ಲಿನ ದಂಡಿನ ಮಾರಿಯಮ್ಮ ದೇಗುಲದ ಕರಗ ಹೊರುತ್ತಿರುವ ಉಮೇಶ್‌ಪೂಜಾರಿ ಅವರು ಕರಗ ಹೊರಲು ಸಿದ್ಧತೆ ನಡೆಸಿದ್ದಾರೆ. ಅವರು ಸೈನಿಕರಾಗಿ ಕಾರ್ಯನಿರ್ವಹಿಸುತ್ತಿರುವಾಗಲೂ ಕರಗ ಹೊರುವುದನ್ನು ತಪ್ಪಿಸಲಿಲ್ಲ. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘1972ರಲ್ಲಿ ಕರಗ ಹೊರಲು ಆರಂಭಿಸಿದೆ. 1979ರಲ್ಲಿ ಸೇನೆ ಸೇರಿದೆ. ಪ್ರತಿ ವರ್ಷ ಇದೇ ಅವಧಿಯಲ್ಲಿ 2 ತಿಂಗಳು ರಜೆ ಹಾಕಿ ಬಂದು ಕರಗ ಹೊರುತ್ತಿದ್ದೆ. ಒಮ್ಮೆ 4 ದಿನ ರೈಲಿನಲ್ಲಿ, ಒಂದು ದಿನ ಬಸ್‌ನಲ್ಲಿ ಪ್ರಯಾಣ ಮಾಡಿ ಬಂದು ಕರಗ ಹೊತ್ತ ಉದಾಹರಣೆಯೂ ಇದೆ’ ಎಂದರು.
ತಾವು 5ನೇ ತರಗತಿ ಓದುತ್ತಿರುವಾಗಲೇ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕರಗ ಹೊರಲು ಆರಂಭಿಸಿದ ಪಿ.ಪಿ.ಚಾಮಿ ಕಳೆದ 51 ವರ್ಷಗಳಿಂದಲೂ ಸತತವಾಗಿ ಕರಗ ಹೊರುತ್ತಿದ್ದಾರೆ. ಅವರು ತಮ್ಮ ಈ ವಯಸ್ಸಿನಲ್ಲೂ ಉತ್ಸಾಹಿ ಯುವಕರಂತೆ ಹೆಜ್ಜೆ ಹಾಕುತ್ತಾರೆ. ನಿತ್ಯವೂ ಇವರು 10 ಕಿ.ಮೀ ಕರಗ ಹೊತ್ತು ಸಾಗುತ್ತಾರೆ. ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು, ‘ಹಿಂದೆ ಕರಗ ಆರಂಭವಾಗಿದ್ದೇ ಸಮಾಜಕ್ಕೆ ಒಳಿತಾಗಲಿ ಎಂದು. ಇಂದೂ ನಾವೂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಹೇಳಿದರು.
ಇನ್ನು ಕಂಚಿ ಕಾಮಾಕ್ಷಮ್ಮ ದೇಗುಲದ ಕರಗವನ್ನು ಕಳೆದ ವರ್ಷ ಕಾರ್ತೀಕ್ ಮೊದಲ ಬಾರಿಗೆ ಹೊತ್ತಿದ್ದರು. ಈ ಬಾರಿ ಇವರ ತಂದೆ ಉಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಈ ಬಾರಿ ನಾನೇ ಕರಗ ಹೊರುವೆ. ಈ ಹಿಂದೆ 32 ಬಾರಿ ಕರಗ ಹೊತ್ತಿದ್ದೆ’ ಎಂದು ತಿಳಿಸಿದರು.
ಕೋಟೆ ಮಾರಿಯಮ್ಮ ಕರಗವನ್ನು ಸತತ 32 ವರ್ಷಗಳಿಂದ ಪಿ.ಬಿ.ಅನೀಶ್‌ಕುಮಾರ್ ಹಾಗೂ 30 ವರ್ಷಗಳಿಂದ ಪಿ.ಬಿ.ಉಮೇಶ್‌ಸುಬ್ರಮಣಿ ಹೊರುತ್ತಿದ್ದಾರೆ. ಈ ಬಾರಿಯೂ ಅವರು ಕರಗ ಹೊರಲು ವ್ರತಧಾರಿಗಳಾಗಿದ್ದಾರೆ.
ಕರಗ ಉತ್ಸವಕ್ಕೆ ಚಾಲನೆ ನಾಳೆ
ಮಡಿಕೇರಿ: ನಗರದ ಐತಿಹಾಸಿಕ ಕರಗೋತ್ಸವಕ್ಕೆ ಅ. 3ರಂದು ಸಂಜೆ 5 ಗಂಟೆಗೆ ಚಾಲನೆ ಸಿಗಲಿದೆ. ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗಗಳನ್ನು ಮಹದೇವಪೇಟೆಯ ಪಂಪಿನಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಂಡು ಮಡಿಕೇರಿ ದಸರಾಗೆ ಚಾಲನೆ ದೊರೆಯಲಿದೆ ಎಂದು ನಗರ ದಸರಾ ಸಮಿತಿಯ ಗೌರವ ಕಾರ್ಯದರ್ಶಿ ಹಾಗೂ ನಗರಸಭೆ ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.