ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ವಿರಾಜಪೇಟೆಯಲ್ಲಿ ‘ರಾಜ’ರಾಗಲು ಕಸರತ್ತು

ಕಾಂಗ್ರೆಸ್‌ನಿಂದ ಅಭ್ಯರ್ಥಿ ಘೋಷಣೆ, ಬಿಜೆಪಿಯಿಂದ ಘೋಷಣೆಯಾಗದ ಅಭ್ಯರ್ಥಿ
Last Updated 4 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ವಿವಿಧ ರಾಜಕೀಯ ಪಕ್ಷಗಳು ಯೋಜನೆಗಳನ್ನು ರೂಪಿಸಿವೆ. ಕಾಂಗ್ರೆಸ್‌ ಈಗಾಗಲೇ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರಿಗೆ ಟಿಕೆಟ್‌ ಘೋಷಿಸಿದ್ದು, ಅವರು ಪೂರ್ಣ ಪ್ರಮಾಣದ ಪ್ರಚಾರಕ್ಕೆ ಇಳಿದಿದ್ದಾರೆ.

ಬಿಜೆಪಿ ಸಹ ಚುನಾವಣಾ ಘೋಷ ಣೆಗೂ ಮುನ್ನವೇ ಗೋಣಿಕೊಪ್ಪಲಿನಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿ ಈಗಾಗಲೇ ಮುಂದಡಿ ಇಟ್ಟಿದೆ. ಆದರೆ, ಇಲ್ಲಿ ಇನ್ನೂ ಅಭ್ಯರ್ಥಿ ಘೋಷಣೆಯಾಗದೇ ಇರುವುದರಿಂದ ಪಕ್ಷದಲ್ಲಿ ಪ್ರಚಾರಕ್ಕೆ ರಂಗು ತುಂಬಿಲ್ಲ. ಜೆಡಿಎಸ್‌ನಲ್ಲೂ ಟಿಕೆಟ್ ಘೋಷಣೆ ಯಾಗದಿರುವುದರಿಂದ ಅದರ ಪ್ರಚಾರದ ಭರಾಟೆಯೂ ಇನ್ನೂ ಕಂಡು ಬಂದಿಲ್ಲ.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನುಸೋಮಯ್ಯ ಸಹ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಇನ್ನುಳಿದಂತೆ, ಎಸ್‌ಡಿಪಿಐ ಸಹ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿದೆ. ಹೀಗಾಗಿ, ವಿರಾಜಪೇಟೆ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಿಂತಲೂ ವಿಭಿನ್ನ ಬಗೆಯ ಸ್ಪರ್ಧೆ ಏರ್ಪಡುವುದು ಬಹುತೇಕ ನಿಶ್ಚಿತ ಎನಿಸಿದೆ.

ಬೂತ್‌ ಮಟ್ಟದಲ್ಲಿ ಈ ಬಾರಿ ಬಿಜೆಪಿಯ ಜತೆಜತೆಗೆ ಕಾಂಗ್ರೆಸ್‌ ಸಹ ಪಕ್ಷವನ್ನು ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿರುವುದು ಈ ಬಾರಿಯ ವಿಶೇಷ ಎನಿಸಿದೆ.

ಈಗಾಗಲೇ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್’ ಜಯವನ್ನು ಕಂಡಿರುವ ಕೆ.ಜಿ.ಬೋಪಯ್ಯ ಬಿಜೆಪಿಯಿಂದ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಇನ್ನೂ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಹೈಕಮಾಂಡ್‌ನತ್ತ ಚಿತ್ತ ಹರಿಸಿದ್ದಾರೆ. ಏಪ್ರಿಲ್ 10ರವರೆಗೂ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.

ಕ್ಷೇತ್ರದಲ್ಲಿ ಈ ಬಾರಿ ಮತದಾರರ ಸಂಖ್ಯೆಯಲ್ಲೂ ಗಮನೀಯ ಬದಲಾವಣೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2,16,090 ಒಟ್ಟು ಮತದಾರರ ಸಂಖ್ಯೆ ಇತ್ತು. ಅದು ಈ ಬಾರಿ 2,22,283ಕ್ಕೆ ಏರಿದೆ. 6,193 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.

ಕಳೆದ ಬಾರಿ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ವ್ಯತ್ಯಾಸ ಕೇವಲ 262 ಇತ್ತು. ಆದರೆ, ಈ ಬಾರಿ ಅದು 726ಕ್ಕೆ ಏರಿಕೆಯಾಗಿದೆ. ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. 1,10,773 ಪುರುಷ ಮತದಾರರಿದ್ದರೆ, 1,11,499 ಮಹಿಳಾ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ ಅತ್ಯಧಿಕ ಸೇವಾ ಮತದಾರರು ಇರುವ ಕ್ಷೇತ್ರವೂ ವಿರಾಜ ಪೇಟೆಯೇ ಆಗಿದೆ. ಇಲ್ಲಿ 741 ಪುರುಷ ಸೇವಾ ಮತದಾರರು ಹಾಗೂ 33 ಮಹಿಳಾ ಸೇವಾ ಮತದಾರರು ಇದ್ದಾರೆ.

ಕಳೆದ ಬಾರಿ ಚುನಾವಣೆಗೂ ಈ ಬಾರಿಯ ಚುನಾವಣೆಗೂ ಮತದಾರರ ಸಂಖ್ಯೆಯಿಂದ ಮಾತ್ರವಲ್ಲ ರಾಜಕೀಯವಾಗಿಯೂ ಬಹಳ ದೊಡ್ಡ ವ್ಯತ್ಯಾಸಗಳೇ ಆಗಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಂಕೇತ್‌ ಪೂವಯ್ಯ ಈ ಬಾರಿ ಕಾಂಗ್ರೆಸ್‌ ಸೇರಿದ್ದಾರೆ. ಎ.ಎಸ್.ಪೊನ್ನಣ್ಣ ಅವರಿಗೆ ಬಹಿರಂಗವಾಗಿಯೆ ಬೆಂಬಲ ಘೋಷಿಸಿರುವುದು ದೊಡ್ಡ ವ್ಯತ್ಯಾಸ ಎನಿಸಿದೆ.

2013ರ ಚುನಾವಣೆಯಲ್ಲಿ ಕೆ.ಜಿ.ಬೋಪಯ್ಯ 3,414 ಮತಗಳಿಂದಷ್ಟೇ ಗೆಲುವು ಸಾಧಿಸಿದ್ದರು. ಆದರೆ, 2018ರಲ್ಲಿ ಗೆಲುವಿನ ಅಂತರವನ್ನು ಅವರು 13,353ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ, ಈ ಬಾರಿ ಬಿಜೆಪಿ ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಇನ್ನಿತರ ಪಕ್ಷಗಳ ಶಕ್ತಿಯನ್ನು, ಅವು ಒಡ್ಡುವ ಸ್ಪರ್ಧೆಯನ್ನು ಕಡೆಗಣಿಸಲಾಗದು. ಏಪ್ರಿಲ್ 10ರ ಹೊತ್ತಿಗೆ ಕ್ಷೇತ್ರದಲ್ಲಿ ಸ್ಪಷ್ಟವಾದ ಚಿತ್ರಣ ಮೂಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT