ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಕನ್ನಡದ ರಥಕ್ಕೆ ಸಂಭ್ರಮದ ಸ್ವಾಗತ

ಮಡಿಕೇರಿಯಲ್ಲಿ ಮಾರ್ದನಿಸಿತು ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’
Published : 10 ಸೆಪ್ಟೆಂಬರ್ 2024, 6:44 IST
Last Updated : 10 ಸೆಪ್ಟೆಂಬರ್ 2024, 6:44 IST
ಫಾಲೋ ಮಾಡಿ
Comments

ಮಡಿಕೇರಿ: ನಗರದಲ್ಲಿ ಜಿನುಗುತ್ತಿದ್ದ ಮಳೆಯ ನಡುವೆ ಸೋಮವಾರ ‘ಕರ್ನಾಟಕ ಸುವರ್ಣ ಸಂಭ್ರಮ ರಥ’ಕ್ಕೆ ಕನ್ನಡಾಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ಮಳೆ ನಿಧಾನಿಸಿ ಹೂಮಳೆಯ ಸಿಂಚನವನ್ನು ಸಿಂಪಡಿಸಿ ಜನಮನವನ್ನು ಉಲ್ಲಾಸಿತಗೊಳಿಸಿತು.

ಕನ್ನಡ ಕುರಿತಾದ ಗೀತೆಗಳ ಗಾಯನ, ಗಿರಿಜನ ಕಲಾತಂಡದ ನೃತ್ಯಗಳು ಮೆರವಣಿಗೆಗೆ ಮೆರಗು ತುಂಬಿದವು. ಕನ್ನಡದ ಬಾವುಟಗಳು ಹಾರಾಡಿ, ಮಂಜಿನ ನಗರಿಯಲ್ಲಿ ಕನ್ನಡ ಝೇಂಕರಿಸಿತು.

ಈ ಎಲ್ಲ ಸೊಬಗಿನ ದೃಶ್ಯಗಳು ರಾಜ್ಯವು ‘ಕರ್ನಾಟಕ’ವೆಂದು ನಾಮಕರಣಗೊಂಡು 5 ದಶಕಗಳು ಪೂರೈಸಿದ ಹಿನ್ನೆಲೆ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಕರ್ನಾಟಕ ಸುವರ್ಣ ಸಂಭ್ರಮ ರಥ’ದ ಮೆರವಣಿಗೆಯಲ್ಲಿ ಕಂಡು ಬಂದವು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘಟನೆಗಳ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಭವ್ಯ ರಥವನ್ನು ಬರಮಾಡಿಕೊಂಡರು. ಇದಕ್ಕೆ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳೂ ಸಾಥ್ ನೀಡಿದರು.

ಗಣ್ಯರು ತಾಯಿ ನಾಡದೇವಿ ಭುವನೇಶ್ವರಿ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿದರು. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಜನರು ಅದ್ದೂರಿಯಾಗಿ ಸ್ವಾಗತಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ 50ರ ಸಂಭ್ರಮ ಪ್ರಯುಕ್ತ ನೆನಪಿಸುವುದರ ಜೊತೆಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಸುವರ್ಣ ಕರ್ನಾಟಕ ರಥ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ‘ಸುವರ್ಣ ಸಂಭ್ರಮ-50’ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಂಭ್ರಮ 50 ಪ್ರಯುಕ್ತ ಕನ್ನಡ ಜ್ಯೋತಿ ರಥಯಾತ್ರೆಯು ರಾಜ್ಯದ 31 ಜಿಲ್ಲೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸಂಚರಿಸಿದ್ದು, ಕೊಡಗು ಜಿಲ್ಲೆಯ ನಂತರ ಹಾಸನ, ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಸಂಚರಿಸಲಿದೆ.

ಸ್ವಾಗತ ಹಾಗೂ ಮೆರವಣಿಗೆ ಸಂದರ್ಭದಲ್ಲಿ ತಹಶೀಲ್ದಾರ್ ಪ್ರವೀಣ್ ಕುಮಾರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ರೇವತಿ ರಮೇಶ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸರ್ವೋದಯ ಸಮಿತಿ ಜಿಲ್ಲಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ನೆರವಂಡ ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಕಸಾಪ ಸದಸ್ಯರಾದ ಚುಮ್ಮಿ ದೇವಯ್ಯ, ಜಾನ್ ಸುಂಟಿಕೊಪ್ಪ, ಬೆಪ್ಪುರನ ಬೋಪಯ್ಯ, ಸಿದ್ದರಾಜು ಬೆಳ್ಳಯ್ಯ, ಅಂಬೆಕಲ್ಲು ನವೀನ್, ಟಿ.ಎಂ.ಮುದ್ದಯ್ಯ, ಜಿ.ಆರ್.ರಾಜು ಮೆರವಣಿಗೆಯಲ್ಲಿದ್ದರು.

ಮೆರವಣಿಗೆ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಮೇಶ್ ಮತ್ತು ತಂಡದವರು ಗಿರಿಜನ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಕನ್ನಡ ರಥವನ್ನು ಕನ್ನಡಾಭಿಮಾನಿಗಳು ಮಡಿಕೇರಿ ನಗರದಲ್ಲಿ ಸೋಮವಾರ ಸಂಭ್ರಮದಿಂದ ಸ್ವಾಗತಿಸಿದರು
ಕನ್ನಡ ರಥವನ್ನು ಕನ್ನಡಾಭಿಮಾನಿಗಳು ಮಡಿಕೇರಿ ನಗರದಲ್ಲಿ ಸೋಮವಾರ ಸಂಭ್ರಮದಿಂದ ಸ್ವಾಗತಿಸಿದರು
ರಥದಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಮಾದರಿಗಳು ಗಮನ ಸೆಳೆದವು
ರಥದಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಮಾದರಿಗಳು ಗಮನ ಸೆಳೆದವು
ಭುವನೇಶ್ವರಿ ತಾಯಿ ವಿಗ್ರಹಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಪುಷ್ಪನಮನ ಸಲ್ಲಿಸಿದರು
ಭುವನೇಶ್ವರಿ ತಾಯಿ ವಿಗ್ರಹಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಪುಷ್ಪನಮನ ಸಲ್ಲಿಸಿದರು
ರಮೇಶ್ ಮತ್ತು ತಂಡದಿಂದ ಗಿರಿಜನ ನೃತ್ಯ ಪ್ರದರ್ಶನ ಶಾಲಾ-ಕಾಲೇಜು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗಿ ಕೊಡೆ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಕನ್ನಡಾಭಿಮಾನಿಗಳು
‘ನಾಡು ನುಡಿ ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸಬೇಕು’
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ‘ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ‘ಕರ್ನಾಟಕ ರಾಜ್ಯವೆಂದು ನಾಮಕರಣವಾಗಿದೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಸುವರ್ಣ ಸಂಭ್ರಮ ರಥಯಾತ್ರೆಯನ್ನು ರಾಜ್ಯದ್ಯಾಂತ ಹಮ್ಮಿಕೊಳ್ಳಲಾಗಿದೆ. ಕನ್ನಡ ನಾಡು ನುಡಿ ಕನ್ನಡ ಭಾಷೆಗೆ ಇರುವ ಇತಿಹಾಸವನ್ನು ನೆನಪಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ’ ಎಂದರು. ಸುವರ್ಣ ಸಂಭ್ರಮ 50ರ ರಥ ಯಾತ್ರೆಯು ಗೋಣಿಕೊಪ್ಪ-ಪೊನ್ನಂಪೇಟೆ-ವಿರಾಜಪೇಟೆ ಮೂಲಕ ಮಡಿಕೇರಿಗೆ ಆಗಮಿಸಿದೆ. ಸೆ.10ರಂದು ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ತೆರಳಲಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT