ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ತೆಪ್ಪದಕಂಡಿ ಬಳಿ ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಈ ಭಾಗದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಿ ಪರ್ಯಾಯವಾಗಿ ನಿವೇಶನ ಜೊತೆಗೆ ವಸತಿ ಕಲ್ಪಿಸಲು ಶುಕ್ರವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ, ಈಚೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಉಸ್ತುವಾರಿ ಸಚಿವ ಭೋಸರಾಜು ಹಾಗೂ ಶಾಸಕ ಡಾ.ಮಂತರ್ ಗೌಡ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿ ಕುಟುಂಬಗಳನ್ನು ಸ್ಥಳಾಂತರ ಮಾಡುವಂತೆ ನಿರ್ದೇಶನ ನೀಡಿದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಕಾವೇರಿ ನದಿ ದಂಡೆಯಲ್ಲಿರುವ ಈ ಕುಟುಂಬಗಳಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇಲ್ಲಿ ಒಟ್ಟು 22 ಕುಟುಂಬಗಳಿವೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಕೆಲವು ಮನೆಗಳಿಗೆ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ಕೂಡ ಸಿಕ್ಕಿದೆ. ಇನ್ನೂ ಕೆಲವು ಮನೆಗಳಿಗೆ ಪಂಚಾಯಿತಿ ವತಿಯಿಂದ ಹಕ್ಕುಪತ್ರ ನೀಡಲಾಗಿದೆ. ಬಾಕಿ ಉಳಿದ ಸೌಲಭ್ಯ ವಂಚಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ನಿವೇಶನದೊಂದಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲು ಸರ್ವಸದಸ್ಯರು ಸಮ್ಮತಿ ನೀಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾತನಾಡಿ, ಗುಡ್ಡೆಹೊಸೂರು ಗ್ರಾಮದ ಸರ್ವೇ ನಂಬರ್ 1/1 ರಲ್ಲಿ 1.70 ಎಕರೆ ಹಾಗೂ ಬೊಳ್ಳೂರು ಗ್ರಾಮದ ಸರ್ವೆ ನಂಬರ್ 1/2 ರಲ್ಲಿನ 0.80 ಎಕರೆ ಜಾಗವನ್ನು ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಒಟ್ಟು 2.50 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿಗೆ ನಿವೇಶನ ಉದ್ದೇಶಕ್ಕಾಗಿ ಕಾಯ್ದಿರಿಸಿ ಮಂಜೂರು ಮಾಡಿದ್ದಾರೆ. ಈ ಜಾಗದಲ್ಲಿ ತೆಪ್ಪದಕಂಡಿ ನಿವಾಸಿಗಳಿಗೆ ಹಾಗೂ ಪಂಚಾಯತಿ ವ್ಯಾಪ್ತಿಯ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಾದಪ್ಪ ಹಾಗೂ ಸದಸ್ಯರಾದ ಚಿದಾನಂದ, ಪ್ರದೀಪ್, ಪ್ರವೀಣ್, ಶಿವಪ್ಪ, ಸೌಮ್ಯ, ಸುಮಾ, ನಾರಾಯಣ, ಉಷಾ, ಗಂಗಮ್ಮ, ಯಶೋದಾ, ರಮೇಶ್, ಲಕ್ಷ್ಮಣ, ಉಮಾ, ಮಂಗಳಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.