ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಎರಡೇ ತಿಂಗಳಲ್ಲಿ ಬಿದ್ದಿವೆ 610 ವಿದ್ಯುತ್ ಕಂಬಗಳು!

ವಿಪರೀತ ನಷ್ಟ ಉಂಟು ಮಾಡುತ್ತಿರುವ ಮುಂಗಾರುಪೂರ್ವದ ಗಾಳಿ, ಮಳೆ
Published 2 ಜೂನ್ 2023, 23:30 IST
Last Updated 2 ಜೂನ್ 2023, 23:30 IST
ಅಕ್ಷರ ಗಾತ್ರ

ಕೆ.ಎಸ್.ಗಿರೀಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಎದುರಾಗುತ್ತಿದ್ದ ಹಾನಿ ಮುಂಗಾರುಪೂರ್ವದಲ್ಲೇ ಆಗುತ್ತಿದ್ದು, ಆತಂಕ ಮೂಡಿಸಿದೆ. ಏಪ್ರಿಲ್ 1ರಿಂದ ಮೇ 31ರವರೆಗೆ ಒಟ್ಟು 667 ವಿದ್ಯುತ್ ಕಂಬಗಳು ಜಿಲ್ಲೆಯಲ್ಲಿ ಧರೆಗುರುಳಿವೆ. 26 ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಬೀಳುತ್ತಿರುವ ವಿದ್ಯುತ್ ಕಂಬಗಳ ಸಂಖ್ಯೆ ಹಾಗೂ ಕೆಡುತ್ತಿರುವ ವಿದ್ಯುತ್ ಪರಿವರ್ತಕಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಒಟ್ಟು ಇದುವರೆಗೂ ಸೆಸ್ಕ್‌ಗೆ ₹73 ಲಕ್ಷ ನಷ್ಟ ಸಂಭವಿಸಿದೆ.

ಶೇಕಡಾ 24.5 ರಷ್ಟು ಮಳೆ ಕೊರತೆಯನ್ನು ಜಿಲ್ಲೆ ಎದುರಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ, ಮಳೆಹಾನಿ ಮಾತ್ರ ಕಡಿಮೆಯಾಗಿಲ್ಲ. ಮುಂಗಾರಿನ ಸಂದರ್ಭದಲ್ಲೇ ಆಗುವಂತಹ ಹಾನಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೇ ಪ್ರದೇಶದಲ್ಲಿ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವುದು, ವೇಗವಾಗಿ ಗಾಳಿ ಬೀಸುವುದು, ಸಿಡಿಲು ಅಪ್ಪಳಿಸುತ್ತಿರುವುದು ಇದಕ್ಕೆ ಕಾರಣ ಎನಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಾಳಿಯ ವೇಗ ಅಧಿಕವಾಗಿದೆ. ಸಿಡಿಲಿನ ಆರ್ಭಟವೂ ಹೆಚ್ಚಾಗಿದೆ. ಇದರಿಂದಾಗಿಯೇ ಅಪಾರ ನಷ್ಟ ಸಂಭವಿಸುತ್ತಿದೆ.

ಈಗಾಗಲೇ ಸೋಮವಾರಪೇಟೆ ತಾಲ್ಲೂಕಿನ ಕಲ್ಲುಕೋರೆ ಮೂವತ್ತೊಕ್ಲು ಗ್ರಾಮದಲ್ಲಿ ಮೇ 21ರಂದು ಸಿಡಿಲಿನ ಆಘಾತಕ್ಕೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 3 ಜಾನುವಾರುಗಳು ಸಿಡಿಲು ಮತ್ತು ಮಳೆಗೆ ಬಲಿಯಾಗಿವೆ.

ಸಿಡಿಲಿನ ಹೊಡೆತಕ್ಕೆ ನಿತ್ಯ ಒಂದಿಲ್ಲೊಂದು ಕಡೆ ವಿದ್ಯುತ್ ಪರಿವರ್ತಕಗಳು ಕೆಡುತ್ತಿವೆ. ಬಿರುಗಾಳಿಗೆ ಸಿಲುಕಿ ಮರಗಳು ಬುಡಮೇಲಾಗುತ್ತಿವೆ. ಒಂದು ಮರ ವಿದ್ಯುತ್ ತಂತಿಯ ಮೇಲೆ ಬಿದ್ದರೆ ಉದ್ದಕ್ಕೂ ನಾಲ್ಕಾರು ಕಂಬಗಳು ಧರೆಗುರುಳುತ್ತಿವೆ. ಇವುಗಳನ್ನು ದುರಸ್ತಿ ಮಾಡುವಷ್ಟರಲ್ಲಿ ಸೆಸ್ಕ್ ಸಿಬ್ಬಂದಿ ಹೈರಣಾಗುತ್ತಿದ್ದಾರೆ.

ಮತ್ತೊಂದಡೆ 5 ಎಕರೆಗೂ ಅಧಿಕ ಭೂಮಿಯಲ್ಲಿ ಬೆಳೆದಿರುವ ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಮುಂಗಾರಿಗೂ ಮುನ್ನವೇ ಸುರಿಯುತ್ತಿರುವ ಮಳೆಯಿಂದ ಬೆಳೆಹಾನಿಯಾಗುತ್ತಿರುವುದು ರೈತರ ಆತಂಕಕ್ಕೂ ಕಾರಣವಾಗಿದೆ.

ಕೇವಲ 2 ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ 26 ಮನೆಗಳು ಭಾಗಶಃ ಹಾನಿಯಾಗಿವೆ. ಬಿರುಗಾಳಿ ಬೀಸುವುದೋ, ಸಿಡಿಲು ಆರ್ಭಟಿಸುವುದೋ ಎಂಬ ಆತಂಕದಲ್ಲೇ ಅಪಾಯದಂಚಿನಲ್ಲಿ ವಾಸಿಸುತ್ತಿರುವ ಜನರು ದಿನದೂಡುವಂತಾಗಿದೆ.

ಈಚೆಗೆ ವಿರಾಜಪೇಟೆ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಆರಂಭವಾದ ಬಿರುಗಾಳಿ, ಮಳೆ ಸಾಕಷ್ಟು ಹಾನಿ ಮಾಡಿತ್ತು. ಗುರುವಾರಷ್ಟೇ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಭೇತ್ರಿ ಪಂಪ್‌ಹೌಸ್‌ಗೆ ಸಿಡಿಲು ಹೊಡೆದು, ಹಾನಿಯಾಗಿತ್ತು. ಅರೆಕಾಡು, ನೇತಾಜಿ ನಗರ ವ್ಯಾಪ್ತಿಯ ವಿದ್ಯುತ್ ಪರಿವರ್ತಕಗಳ ಮೇಲೂ ಸಿಡಿಲು ಹೊಡೆದಿತ್ತು. ಮೇಲಿಂದ ಮೇಲೆ ತಾಗುತ್ತಿರುವ ಸಿಡಿಲುಗಳು ಆತಂಕಕ್ಕೆ ಕಾರಣವಾಗಿದೆ.

ಮೇ 29ರಂದು ಸೋಮವಾರಪೇಟೆ ತಾಲ್ಲೂಕಿನ ಹೊಸಬೀಡು ಗ್ರಾಮದ ವನಿತಾ ನಾಗರಾಜು ಅವರ ಮನೆಗೆ ಬಿಸಿಲಿರುವ ಹೊತ್ತಿನಲ್ಲೇ ಏಳೆಂಟು ಕಿ.ಮೀ ದೂರದಿಂದ ಭಾರಿ ಸಿಡಿಲೊಂದು ಅಪ್ಪಳಿಸಿ ಲಕ್ಷಾಂತರ ರೂಪಾಯಿ ನಷ್ಟ ತರಿಸಿತ್ತು. ಸಿಡಿಲಿನಿಂದ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಮನೆಗೆ ಅಳವಡಿಸಿದ್ದ ವಿದ್ಯುತ್ ಲೈನ್, ಯುಪಿಎಸ್ ಸೇರಿದಂತೆ ಎಲ್ಲ ಉಪಕರಣಗಳು ಸುಟ್ಟುಹೋಗಿವೆ. ಸಿಡಿಲಿನ ರಭಸಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ವಾಸಕ್ಕೂ ತೊಂದರೆಯಾಗಿತ್ತು.

ಸೆಸ್ಕ್‌ಗೆ ದೂರುಗಳ ಸುರಿಮಳೆ ನಿತ್ಯವೂ ಎಡೆಬಿಡದೇ ದುಡಿಯುತ್ತಿರುವ ಸೆಸ್ಕ್ ಸಿಬ್ಬಂದಿ ನಿಲ್ಲದ ಮಳೆ, ಗಾಳಿ, ಸಿಡಿಲುಗಳು

ಮುಂಗಾರುಪೂರ್ವದಲ್ಲೆ ಸೆಸ್ಕ್‌ಗೆ ಸಾಕಷ್ಟು ನಷ್ಟ ಉಂಟಾಗಿದೆ. ಹಾನಿಯಾಗಿರುವ ಕಡೆ ಹೆಚ್ಚು ತ್ವರಿತವಾಗಿ ಸ್ಪಂದಿಸುತ್ತಿದ್ದೇವೆ. ಜನರು ಸಾವಧಾನದಿಂದ ವರ್ತಿಸಬೇಕು ಅನಿತಾ ಬಾಯಿ ಸೆಸ್ಕ್‌ನ ಕಾರ್ಯಪಾಲಕ ಎಂಜಿನಿಯರ್

ಸುರಕ್ಷಿತ ಪ್ರದೇಶಕ್ಕೆ ತೆರಳಲು ನೋಟಿಸ್ ಜಾರಿ ಸಿದ್ದಾಪುರ ಸಮೀಪದ ಕರಡಿಗೋಡು ಗುಹ್ಯ ಗ್ರಾಮದ ನದಿ ತೀರದ ಸುಮಾರು 200ಕ್ಕೂ ಅಧಿಕ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೇ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಮುಂಗಾರು ಮಳೆ ಆರಂಭವಾಗುವ ಮುನ್ನವೇ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸೂಚಿಸಿದೆ. ‘ನಮಗೆ ಶಾಶ್ವತ ಸೂರು ನೀಡಬೇಕು’ ಎಂದು ಸ್ಥಳೀಯರೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT