ಮಂಗಳವಾರ, ಅಕ್ಟೋಬರ್ 22, 2019
25 °C

ಸವಾಲು ಸ್ವೀಕರಿಸಲು ಹಿಂಜರಿಕೆ ಬೇಡ: ಪಟ್ಟಚರವಂಡ ಸಿ. ತಿಮ್ಮಯ್ಯ

Published:
Updated:
Prajavani

ಮಡಿಕೇರಿ: ‘ಬದುಕೇ ಅಚ್ಚರಿಗಳ ಸರಮಾಲೆ. ಯಶಸ್ಸು ಪ್ರತಿಯೊಬ್ಬರ ಕೈಯಲ್ಲೇ ಇರುತ್ತೆ; ಸವಾಲು ಸ್ವೀಕರಿಸಲು ಹಿಂಜರಿಕೆ ಹಾಗೂ ಅಳಕು ಬೇಡ’ ಎಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್‌ ಪಟ್ಟಚರವಂಡ ಸಿ.ತಿಮ್ಮಯ್ಯ ಇಲ್ಲಿ ಪ್ರತಿಪಾದಿಸಿದರು.

ನಗರದ ಕೊಡವ ಸಮಾಜದಲ್ಲಿ ಶನಿವಾರ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್‌ ಫಂಡ್‌) ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇವರ ಮುನುಷ್ಯನ ಸೃಷ್ಟಿಯ ಮೇಲೆ ಸಾಧನೆ ಮಾಡಬೇಕು. ಚಾಲಕನಂತೆ ಮುಂದಿನ ಸೀಟಿನಲ್ಲಿ ಕೂರಬೇಕು. ಸಾಧನೆ ಹಾದಿಯಲ್ಲಿ ಸೋಲಾದರೆ ಧೈರ್ಯ ಕಳೆದುಕೊಳ್ಳದೆ ಮತ್ತೆ ಪ್ರಯತ್ನಿಸಬೇಕು. ಬರವಣಿಗೆ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ವಹಿಸಬೇಕು. ಸದಾ ಸಾಧನೆಯ ಕನಸು ಕಾಣಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಕೊಡವ ವಿದ್ಯಾನಿಧಿಯಿಂದ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗಿದೆ. ನನಗೂ ಸದಸ್ಯತ್ವ ನೀಡಿ’ ಎಂದು ಕೋರಿದರು.

‘1863ರಲ್ಲಿ ವಿದ್ಯಾನಿಧಿ ಆರಂಭಗೊಂಡಿದ್ದು 113ನೇ ವರ್ಷದ ಸಭೆಯ ಇದಾಗಿದೆ. ನಾಲ್ವರು ಮಹನೀಯರು ದೂರದೃಷ್ಟಿಯ ಪ್ರತೀಕವಾಗಿ ಈ ವಿದ್ಯಾನಿಧಿ ಸ್ಥಾಪನೆಯಾಗಿದೆ. ಈಗ 800 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮಟ್ಟಿಗೆ ವಿದ್ಯಾನಿಧಿ ಬೆಳೆದಿದೆ’ ಎಂದು ಶ್ಲಾಘಿಸಿದರು.

‘ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಅವರು ಶಿಸ್ತಿಗೆ ಆದ್ಯತೆ ನೀಡುತ್ತಿದ್ದರು. ಸೈನಿಕರಿಗೆ ಮಾತ್ರವಲ್ಲದೇ ಪ್ರತಿ ನಾಗರಿಕನಲ್ಲೂ ಶಿಸ್ತು ಇರಬೇಕು ಎಂಬುದು ಅವರ ಹಂಬಲವಾಗಿತ್ತು’ ಎಂದು ಹೇಳಿದರು.

‘ಸಾಮಾನ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸೇನೆಯಲ್ಲಿ ಸಮರ್ಥ ಅಧಿಕಾರಿಗಳನ್ನಾಗಿ ರೂಪಿಸಲಾಗುತ್ತಿದೆ. ಸೇನಾ ತರಬೇತಿಯಲ್ಲಿ ಅಷ್ಟೊಂದು ಶಿಸ್ತು ಕಾಣಿಸುತ್ತದೆ. ಇದು ಸ್ಪರ್ಧಾತ್ಮಕ ಯುಗವಾಗಿದ್ದರೂ ಮೌಲ್ಯಗಳನ್ನು ಮರೆಯಬಾರದು’ ಎಂದು ಕರೆ ನೀಡಿದರು.

‘ವಿದ್ಯಾರ್ಥಿ ಜೀವನದಲ್ಲಿ ನಾನೊಬ್ಬಸಾಮಾನ್ಯ ವಿದ್ಯಾರ್ಥಿಯಷ್ಟೆ. ಕೆಲವು ಮಹನೀಯರ ಭೇಟಿ ನನ್ನನ್ನು ಈ ಹಂತಕ್ಕೆ ತಲುಪಿಸಿದೆ. ಸಾಧನೆಯ ಹಾದಿಯಲ್ಲಿ ವಿಫಲವಾದರೂ ಸಣ್ಣ ಸಣ್ಣ ಪ್ರಯತ್ನಗಳು ಸಾಗುತ್ತಲೇ ಇರಬೇಕು’ ಎಂದು ಹೇಳಿದರು.

ದಾನಿ ಪಾಲೇಕಂಡ ಜಿ. ಬೆಳ್ಯಪ್ಪ. ವಿದ್ಯಾನಿಧಿ ಅಧ್ಯಕ್ಷ ಕೂತಂಡ ಪಿ. ಉತ್ತಪ್ಪ, ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಹಾಜರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)