ಸೋಮವಾರ, ಫೆಬ್ರವರಿ 17, 2020
15 °C
ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದಲ್ಲಿ ಸಮ್ಮೇಳನ

23ರಂದು ಅರೆಭಾಷೆ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಆಲೂರು–ಸಿದ್ದಾಪುರದ ಸಂಗಯ್ಯನಪುರದಲ್ಲಿ ಫೆ.23ರಂದು ಎರಡನೇ ಅರೆಭಾಷೆ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 9.30ಕ್ಕೆ ಆಯೋಜಿಸಿರುವ ಮೆರವಣಿಗೆಗೆ ನಿವೃತ್ತ ತಾಲ್ಲೂಕು ಪಂಚಾಯಿತಿ ವಿಸ್ತರಣಾಧಿಕಾರಿ ಕೆದಂಬಾಡಿ ಈರಪ್ಪ ಚಾಲನೆ ನೀಡಲಿದ್ದಾರೆ. ಅರಕಲಗೂಡು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹುಲಿಮನೆ ಮಾದಪ್ಪ ಅವರು ದ್ವಾರವನ್ನು ಉದ್ಘಾಟನೆ ಮಾಡಲಿದ್ದಾರೆ’ ಎಂದು ತಿಳಿಸಿದರು.

ಬೆಳಿಗ್ಗೆ 10.15ಕ್ಕೆ ಅಬ್ಬೂರು ಕಟ್ಟೆ ಕ್ಷೇತ್ರದ ತಾ.ಪಂ ಸದಸ್ಯೆ ಬಟ್ಯನ ಸವಿತಾ ಈರಪ್ಪ ವಸ್ತುಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. 10.30ಕ್ಕೆ ಅರೆಭಾಷೆ ಸಾಹಿತಿ ಹೊದ್ದೆಟಿ ಭವಾನಿಶಂಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಚಾಲನೆ ನೀಡಲಿದ್ದಾರೆ. ಸಚಿವ ಸಿ.ಟಿ.ರವಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 1ಕ್ಕೆ ಲೋಕೇಶ್ ಊರುಬೈಲು ಮತ್ತು ತಂಡವು ‘ಸಿರಿ ಸುಗ್ಗಿ’ ಜನಪದ ಶೈಲಿಯ ಅರೆಭಾಷೆ ಹಾಡುಗಳನ್ನು ‍ಪ್ರಸ್ತುತ ಪಡಿಸಲಿದೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭ: ಅದೇ ದಿನ ಮಧ್ಯಾಹ್ನ 3ಕ್ಕೆ ಸಂಸದ ಪ್ರತಾಪ ಸಿಂಹ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ.ಕೊಳಂಬೆ ಚಿದಾನಂದ ಗೌಡ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸೋಮವಾರಪೇಟೆ ತಾ.ಪಂ ಅಧ್ಯಕ್ಷ ಅಭಿಮನ್ಯು ಕುಮಾರ್, ಪ್ರಮುಖರಾದ ಸೂರ್ತಲೆ ಆರ್.ಸೋಮಣ್ಣ, ಹೊದ್ದೆಟ್ಟಿ ಭವಾನಿಶಂಕರ್‌, ತೇನನ ರಾಜೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪುಸ್ತಕಗಳ ಬಿಡುಗಡೆ: ಅಕಾಡೆಮಿ ಪ್ರಕಟಿಸುತ್ತಿರುವ ಪುಸ್ತಕ ಹಾಗೂ ಅರೆಭಾಷೆ ಕಾದಂಬರಿಗಳಾದ ‘ಪುಂಸ್ತ್ರೀ’, ‘ಕಲ್ಯಾಣ ಸ್ವಾಮಿ’ ಮತ್ತು ಕಥಾ ಸಂಕಲನ ‘ಅಪೂರ್ವ ಸಂಗಮ’ ಪುಸ್ತಕಗಳನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಬಿಡುಗಡೆ ಮಾಡಲಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಧನಂಜಯ ಅಗೋಳಿಕಜೆ, ದೇವಾಯಿರ ಗಿರೀಶ್, ಕುಯ್ಯಮುಡಿ ವಿ. ಜಯಕುಮಾರ್, ದೇವಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು